ಚಾಮರಾಜನಗರ: ಲಕ್ಷಾಂತರ ಭಕ್ತರ ಆರಾಧ್ಯದೈವ ಮಲೆಮಹದೇಶ್ವರನ (Malemahadeshwara Hill) ಪಾದದಡಿಯಲ್ಲಿರುವ ಗ್ರಾಮಗಳ ಕಥೆ ಇದು. ಸ್ವಾತಂತ್ರ‍್ಯ ಬಂದು 79 ವರ್ಷಗಳು ಕಳೆದರೂ, ಇಂದಿಗೂ ಈ ಜನರಿಗೆ ಕನಿಷ್ಠ ರಸ್ತೆ ಸೌಲಭ್ಯವೂ ಇಲ್ಲ. ಜನಪ್ರತಿನಿಧಿಗಳ ವಾಗ್ದಾನ, ಗುದ್ದಲಿ ಪೂಜೆಗಳೆಲ್ಲವೂ ಕೇವಲ ಗಿಮಿಕ್ ಆಗಿ ಉಳಿದಿದ್ದು, ಕಾಡುಪ್ರಾಣಿಗಳ ಭಯದ ನಡುವೆಯೇ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂಲಸೌಲಭ್ಯಗಳಿಂದ ವಂಚಿತ ಗ್ರಾಮಗಳು!
ಹೌದು. ಚಾಮರಾಜನಗರ (Chamarajanagara) ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಕಾನನದ ನಡುವೆ 15ಕ್ಕೂ ಹೆಚ್ಚು ಗ್ರಾಮಗಳಿವೆ. ಇಂಡಿಗನತ್ತ, ತುಳಸಿಕೆರೆ, ಮೆಂದರೆ, ಪಡಸಲನತ್ತ ನಾಗಮಲೆ ಮೊದಲಾದ ಗ್ರಾಮಗಳ ಜನರಿಗೆ ಇಂದಿಗೂ ರಸ್ತೆ ಕನಸಾಗಿದೆ. ಕಲ್ಲು, ಮುಳ್ಳು, ಹಳ್ಳ-ಕೊಳ್ಳಗಳಿಂದ ಕೂಡಿದ ಕಾಡಿನ ಕಚ್ಚಾ ಹಾದಿಯೇ ಇವರಿಗೆ ಹೆದ್ದಾರಿ ಆಗಿದೆ.

ಹೌದು. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನ ಅಥವಾ ಗರ್ಭಿಣಿಯರನ್ನು ಆಸ್ಪತ್ರೆಗೆ ಸೇರಿಸಬೇಕೆಂದರೆ ಡೋಲಿ ಕಟ್ಟಿ ಹೊತ್ತುಕೊಂಡೇ ಹೋಗುವ ದುಸ್ಥಿತಿಯಿದೆ. ಕೆಲವು ತಿಂಗಳ ಹಿಂದೆ ಹನೂರು ಶಾಸಕ ಮಂಜುನಾಥ್ ಮಹದೇಶ್ವರ ಬೆಟ್ಟದಿಂದ ಈ ಗ್ರಾಮಗಳಿಗೆ ರಸ್ತೆ ಅಭಿವೃದ್ಧಿ ಪಡಿಸುವುದಾಗಿ ಗುದ್ದಲಿ ಪೂಜೆ ನೆರವೇರಿಸಿದ್ರು. ಆದರೆ, ಅಂದಿನಿಂದ ಇಂದಿನವರೆಗೂ ಶಾಸಕರು ಇತ್ತ ಕಡೆ ಮುಖ ಮಾಡಿಲ್ಲ. ಈ ಗ್ರಾಮಗಳ ರಸ್ತೆಯ ಕನಸು ಹಾಗೇ ಉಳಿದಿದೆ.
ಮೊದಲೆಲ್ಲ ನಾಗಮಲೆಗೆ ಆಗಮಿಸುತ್ತಿದ್ದ ಭಕ್ತಾದಿಗಳ ಜೊತೆ ಈ ಗ್ರಾಮಗಳ ಜನ ಗುಂಪಾಗಿ ನಡೆದುಕೊಂಡು ತಮ್ಮ ಗ್ರಾಮ ತಲುಪುತ್ತಿದ್ದರು. ಆದರೆ ಇತ್ತೀಚೆಗೆ ಚಿರತೆ ದಾಳಿ ಹೆಚ್ಚಾದ ಹಿನ್ನೆಲೆ ನಾಗಮಲೆಗೆ ಭಕ್ತರ ಪ್ರವೇಶವನ್ನು ಅರಣ್ಯ ಇಲಾಖೆ ಸಂಪೂರ್ಣ ನಿಷೇಧಿಸಿದೆ. ಇದರಿಂದಾಗಿ ಗ್ರಾಮಸ್ಥರು ಈಗ ದಟ್ಟ ಅಡವಿಯಲ್ಲಿ ಕಾಡುಪ್ರಾಣಿಗಳ ನಿರಂತರ ಭಯದ ನಡುವೆ ಒಂಟಿಯಾಗಿ ಓಡಾಡೋ ಪರಿಸ್ಥಿತಿ ಎದುರಾಗಿದೆ.

ಒಟ್ಟಿನಲ್ಲಿ ದೇಶ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಮುಗಿಸಿ ಮುಂದಕ್ಕೆ ಸಾಗುತ್ತಿದ್ದರೂ, ಮಹದೇಶ್ವರನ ಪಾದದಡಿಯ ಈ ಗ್ರಾಮಸ್ಥರಿಗೆ ರಸ್ತೆ ಎಂಬುದು ಮರೀಚಿಕೆಯಾಗಿದೆ ಜನಪ್ರತಿನಿಧಿಗಳ ಭರವಸೆಗಳಿಗೆ ಇಲ್ಲಿನ ಜನ ಬೇಸತ್ತು ಹೋಗಿದ್ದಾರೆ.

