– ಕೆಎಎಸ್ ಪರೀಕ್ಷೆಯಲ್ಲಿ ಕೋಟಿ ಕೋಟಿ ಡೀಲ್
ಕಲಬುರಗಿ: ಕೆಪಿಎಸ್‌ಸಿ (KPSC) ಪಶುವೈದ್ಯಧಿಕಾರಿ ಅಕ್ರಮ ನೇಮಕಾತಿ ಪ್ರಕರಣ ರಾಜ್ಯದಲ್ಲಿ ಒಂದೆಡೆ ಸದ್ದು ಮಾಡುತ್ತಿದೆ. ಈ ಮಧ್ಯೆ 2023-24 ರಲ್ಲಿ ನಡೆದ ಕೆಎಎಸ್ ಪರೀಕ್ಷೆಯ ಪ್ರತಿ ಹುದ್ದೆಗೂ ಕೋಟಿ ಕೋಟಿ ಹಣ ಡಿಲ್ ಮಾಡಿರುವುದು ಬೆಳಕಿಗೆ ಬಂದಿದ್ದು, ಈ ಅಕ್ರಮದಲ್ಲಿ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿಯೇ ಕಿಂಗ್ ಪಿನ್ ಆಗಿರುವುದು ಸಿಐಡಿ (CID) ಅಧಿಕಾರಿಗಳಿಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ.
ಪಶುವೈದ್ಯಾಧಿಕಾರಿ ಬೆನ್ನಲ್ಲೇ ಕೆಎಎಸ್ ಕಳ್ಳಾಟ ರಿವೀಲ್
ರಾಜ್ಯದಲ್ಲಿ ಕೆಪಿಎಸ್‌ಸಿ ಕರಾಳ ಕಥೆಗಳು ಒಂದೊಂದೇ ರಿವೀಲ್ ಆಗುತ್ತಿವೆ. ಪಿಎಸ್‌ಐ ನೇಮಕಾತಿ ಅಕ್ರಮ ಜೋರಾಗಿ ಸದ್ದು ಮಾಡಿದ್ದಾಯ್ತು. ಪಶುವೈದ್ಯಧಿಕಾರಿ ಹುದ್ದೆಗಳಿಗೆ ಡೀಲ್ ಮುಗಿಸಿದ್ದು ಆಯ್ತು. ಇದೇ ಪಶುವೈದ್ಯಧಿಕಾರಿ ಅಕ್ರಮದ ತನಿಖೆ ಮಧ್ಯೆ 2023-24ರ ಸಾಲಿನಲ್ಲಿ 384 ಕೆಎಎಸ್ ಪರೀಕ್ಷೆಗಳಲ್ಲಿ ಡೀಲ್ ನಡೆದಿರುವ ಬಗ್ಗೆ ದೂರು ದಾಖಲಾಗಿದೆ. ಬೆಂಗಳೂರಿನಲ್ಲಿ ದೂರು ದಾಖಲು ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.

ಕೆಎಎಸ್ ನೇಮಕವಾಗಿ ಅಂತಿಮ ಪಟ್ಟಿಗಾಗಿ ಕಾಯುತ್ತಿದ್ದ ಕಲಬುರಗಿ ಮೂಲದ ಮಮಿತಾ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ರು. ಕೆಎಎಸ್ ಪರೀಕ್ಷಾ ಅಕ್ರಮದ ಕುರಿತು ಹಲವು ಮಾಹಿತಿ ಪಡೆದುಕೊಂಡರು. ಈ ಸಿಐಡಿ ತನಿಖೆ ವೇಳೆ ಕೆಎಎಸ್ ಪರೀಕ್ಷಾ ಅಕ್ರಮದ ವಾಸನೆ ಎದ್ದಿದೆ. ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅಭ್ಯರ್ಥಿಗಳ ಜೊತೆ ಡೀಲ್ ಮಾಡಿಕೊಂಡಿದ್ದು, ಪ್ರತಿ ಹುದ್ದೆಗೆ ಒಂದೂವರೆ ಕೋಟಿವರೆಗೂ ಪಡೆದ ಬಗ್ಗೆ ಸಿಐಡಿ ತಂಡ ಮಹತ್ವದ ದಾಖಲೆಗಳನ್ನು ಕಲೆಹಾಕಿದೆ.
ಶಾಂತಾ ಹೊಸಮನಿ ಕಿಂಗ್‌ಪಿನ್
384 ಕೆಎಎಸ್ ಪರೀಕ್ಷಾ ಅಕ್ರಮದಲ್ಲಿ ಶಾಂತಾ ಹೊಸಮನಿ ಕಿಂಗ್ ಪಿನ್ ಆಗಿದ್ದು, ಆಕೆಯ ಬಂಧನಕ್ಕಾಗಿ ಸಿಐಡಿ ತೀವ್ರ ಶೋಧ ನಡೆಸಿದೆ. ಕಲಬುರಗಿ-ಬೆಂಗಳೂರು ಸೇರಿದಂತೆ ಅಕ್ಕ-ಪಕ್ಕದ ರಾಜ್ಯಗಳಿಗೆ ತೆರಳಿ ಶಾಂತಾ ಹೊಸಮನಿ ಬಂಧನಕ್ಕೆ ಸಿಐಡಿ ತೀವ್ರ ಶೋಧ ನಡೆಸುತ್ತಿದೆ. ಆಕೆಯ ಬಂಧನದ ಬಳಿಕ ಕೆಎಎಸ್ ಅಕ್ರಮ ನೇಮಕಾತಿಯಲ್ಲಿ ಅಭ್ಯರ್ಥಿಗಳ ಮಾಹಿತಿ, ಹಣಕಾಸಿನ ವ್ಯವಹಾರ ಸೇರಿ ಪರೀಕ್ಷಾ ಅಕ್ರಮ ಹೇಗೆ ನಡೆಸಲಾಗಿದೆ ಎಂಬ ಹತ್ತು ಹಲವು ಅಂಶಗಳ ಬಗ್ಗೆ ಸಿಐಡಿ ಮಾಹಿತಿ ಕಲೆ ಹಾಕಲು ಮುಂದಾಗಿದೆ.
ಸದ್ಯ ಶಾಂತಾ ಹೊಸಮನಿ ಮೂಲಕ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಯ ಹತ್ತು ಅಭ್ಯರ್ಥಿಗಳು ಕೆಎಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಮಾಹಿತಿ ಸಹ ಸಿಐಡಿ ಕೈ ಸೇರಿದ್ದು, ಮುಂದಿನ ದಿನಗಳಲ್ಲಿ ಆ ಅಭ್ಯರ್ಥಿಗಳ ಮನೆ ಮೇಲು ಸಹ ಸಿಐಡಿ ಅಧಿಕಾರಿಗಳು ದಾಳಿ ನಡೆಸುವ ಸಾಧ್ಯತೆಗಳಿವೆ.
ಒಟ್ಟಾರೆ, ಕೆಪಿಎಸ್‌ಸಿ ಇಲಾಖೆಯ ಒಂದೊಂದೇ ಡೀಲ್‌ಗಳು ರಿವೀಲ್ ಆಗ್ತಿವೆ. ಪಶುವೈದ್ಯಧಿಕಾರಿ ಬೆನ್ನಲ್ಲೇ ಕೆಎಎಸ್ ಪರೀಕ್ಷಾ ಅಕ್ರಮ ಬಯಲಾಗಿದೆ. ಈ ಅಕ್ರಮವನ್ನು ಕೆದಕುತ್ತಾ ಹೋದಂತೆ ಇನ್ನೂ ಎದೆಲ್ಲಿಗೆ ಹೋಗಿಮುಟ್ಟುತ್ತೋ ಕಾದುನೋಡಬೇಕಿದೆ.

