ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಭಾರತದಲ್ಲಿ ನಡೆಯಲಿರುವ ಮುಂಬರುವ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.
ಈ ಬಾರಿ ಭಾರತದ ಆತಿಥ್ಯದಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ (BRICS) ನಡೆಯುತ್ತಿದೆ. ಇದೇ ತಿಂಗಳ 12 ಮತ್ತು 13ರಂದು ನವದೆಹಲಿಯಲ್ಲಿ ನಡೆಯಲಿದೆ. ಜಾಗತಿಕ ಹಾಗೂ ಪ್ರಾದೇಶಿಕ ಬೆಳವಣಿಗೆಗಳು, ಆರ್ಥಿಕ ಸಹಕಾರ, ವ್ಯಾಪಾರ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಶೃಂಗಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ.
ಪುಟಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಸಭೆ ಪ್ರಮುಖವಾಗಲಿದೆ. ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು ಮಾತುಕತೆಯ ಪ್ರಮುಖ ವಿಷಯಗಳಾಗುವ ಸಾಧ್ಯತೆಯಿದೆ ಎಂದು ಪೆಸ್ಕೋವ್ ಹೇಳಿದ್ದಾರೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಸದಸ್ಯ ರಾಷ್ಟ್ರಗಳ ನಾಯಕರು ಭಾಗವಹಿಸಲಿದ್ದಾರೆ. ವಿಸ್ತರಿಸಿರುವ ಬ್ರಿಕ್ಸ್ ಗುಂಪಿನ ಹಿನ್ನೆಲೆಯಲ್ಲಿ ಜಾಗತಿಕ ವ್ಯಾಪಾರ, ಹಣಕಾಸು, ಇಂಧನ ಭದ್ರತೆ, ತಂತ್ರಜ್ಞಾನ ಹಾಗೂ ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬರಲಿವೆ. ಇದನ್ನೂ ಓದಿ: ಭಾರತದಲ್ಲೇ ನಿರ್ಮಿತ ಬುಲೆಟ್ ರೈಲಿನ ಬಾಡಿ ಫ್ರೇಮ್ ಸಿದ್ಧ – ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಭಾರತ ಈ ಬಾರಿ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆಗೆ ವಿಶೇಷ ಮಹತ್ವ ದೊರೆತಿದೆ. ಜಾಗತಿಕ ದಕ್ಷಿಣ ರಾಷ್ಟ್ರಗಳ ಸಹಕಾರ ಮತ್ತು ಬಹುಪಕ್ಷೀಯ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆಯೂ ಸಹ ಭಾರತ ಒತ್ತು ನೀಡುವ ನಿರೀಕ್ಷೆಯಿದೆ. ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಕೂಡಾ ಬರುವ ಸಾಧ್ಯತೆಗಳಿದೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು – ಪ್ರಿಯಕರನಿಂದ ಕೊಲೆ ಶಂಕೆ
