– ಮುಂದಿನ ವರ್ಷ ಮೇ–ಜೂನ್‌ನಲ್ಲಿ ಹಳಿಗಿಳಿಯಲಿದೆ ಸ್ವದೇಶಿ ಬುಲೆಟ್ ರೈಲು
ವಡೋದರ: ಭಾರತದಲ್ಲೇ ನಿರ್ಮಾಣವಾಗುತ್ತಿರುವ ದೇಶದ ಮೊದಲ ಸ್ವದೇಶಿ ಬುಲೆಟ್ ರೈಲು (Bullet Train) 2027ರ ಮೇ ಅಥವಾ ಜೂನ್‌ನಲ್ಲಿ ಹಳಿಗಿಳಿಸಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ.
ವಡೋದರದಲ್ಲಿ ನಡೆದ ‘ನಮೋ ಫಾರ್ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು. ಬುಲೆಟ್ ರೈಲಿನ ಮೊದಲ ಬಾಡಿ (Bullet Train Body) ಫ್ರೇಮ್ ಸಿದ್ಧಗೊಂಡಿದ್ದು, ಅದನ್ನು ‘ಸ್ಕ್ವೀಸ್ ಟೆಸ್ಟ್’ಗೆ ಕಳುಹಿಸಲಾಗಿದೆ. ರೈಲಿನ ದೇಹದ ಚೌಕಟ್ಟು ನಿಗದಿತ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆಯೇ? ಎಂಬುದನ್ನ ಪರೀಕ್ಷೆಯಲ್ಲಿ ಪರಿಶೀಲಿಸಲಾಗುತ್ತದೆ. ಪರೀಕ್ಷಾ ಹಂತ ಪೂರ್ಣಗೊಂಡ ಬಳಿಕ ರೈಲನ್ನ ಹಳಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಂದಿನ ವರ್ಷ ಮೇ ಅಥವಾ ಜೂನ್ ಹಳಿ ಪರೀಕ್ಷೆ ಆರಂಭವಾದ ಬಳಿಕ 2 ರಿಂದ 4 ತಿಂಗಳ ಕಾಲ ಪರೀಕ್ಷೆ ನಡೆಸಲಾಗುತ್ತದೆ. ಆ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಲೆಟ್ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ವೈಷ್ಣವ್ ಹೇಳಿದ್ದಾರೆ.

ವಡೋದರ–ಮುಂಬೈ ಪ್ರಯಾಣ ಕೇವಲ 1.5 ಗಂಟೆ
ಬುಲೆಟ್ ರೈಲು ಸೇವೆ ಆರಂಭವಾದ ಬಳಿಕ ವಡೋದರದಿಂದ ಮುಂಬೈಗೆ ಪ್ರಯಾಣಿಸಲು ಸುಮಾರು 1 ಗಂಟೆ 30 ನಿಮಿಷ ಮಾತ್ರ ಬೇಕಾಗಲಿದೆ. ಈ ಯೋಜನೆ ‘ಆತ್ಮನಿರ್ಭರ ಭಾರತ’ದ ದೃಷ್ಟಿಕೋನಕ್ಕೆ ಅನುಗುಣವಾಗಿ ದೇಶದಲ್ಲೇ ಹೈಸ್ಪೀಡ್ ರೈಲು ನಿರ್ಮಾಣ ಸಾಮರ್ಥ್ಯ ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದು ಕಡೆ ಮುಂಬೈ–ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ನ ಕಾಮಗಾರಿಯೂ ವೇಗವಾಗಿ ಸಾಗುತ್ತಿದೆ. ಸೂರತ್–ವಾಪಿ ವಿಭಾಗದ ಕಾಮಗಾರಿ ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಸೂರತ್–ಬಿಲಿಮೋರಾ ವಿಭಾಗವನ್ನು ಮುಂದಿನ ವರ್ಷ ಮೊದಲ ಕಾರ್ಯಾಚರಣಾ ವಿಭಾಗವಾಗಿ ಆರಂಭಿಸುವ ಗುರಿಯೂ ಇದೆ ಎಂದಿದ್ದಾರೆ.
ಒಟ್ಟು 508 ಕಿ.ಮೀ. ಉದ್ದದ ಮುಂಬೈ–ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಮಹಾರಾಷ್ಟ್ರ, ಗುಜರಾತ್ ಹಾಗೂ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್–ದಿಯು ಪ್ರದೇಶದ ಮೂಲಕ ಸಾಗಲಿದೆ. ಮುಂಬೈ, ಥಾಣೆ, ವಿರಾರ್, ಬೋಯಿಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರ, ಆನಂದ, ಅಹಮದಾಬಾದ್ ಮತ್ತು ಸಬರಮತಿ ಸೇರಿದಂತೆ 12 ನಿಲ್ದಾಣಗಳನ್ನು ಹೊಂದಲಿದೆ. ಯೋಜನೆಗೆ ಜಪಾನ್‌ನ ತಂತ್ರಜ್ಞಾನ ಮತ್ತು ಸಹಕಾರವೂ ಇದೆ.
ರೈಲ್ವೆ ಆಧುನೀಕರಣಕ್ಕೂ ಒತ್ತು
ಭಾರತೀಯ ರೈಲ್ವೆ ಕಾರ್ಯಾಚರಣೆ, ಮೀಸಲಾತಿ ವ್ಯವಸ್ಥೆ ಹಾಗೂ ಹಳೆಯ ನಿರ್ಮಾಣ ಪದ್ಧತಿಗಳನ್ನ ಆಧುನೀಕರಿಸಲಾಗುತ್ತಿದೆ. ದೇಶದಲ್ಲಿ 280 ರೈಲು ನಿಲ್ದಾಣಗಳನ್ನ ಪುನರಾಭಿವೃದ್ಧಿಪಡಿಸಲಾಗಿದೆ ಹಾಗೂ 36,000 ಕಿ.ಮೀ. ಹೊಸ ಹಳಿಗಳನ್ನು ನಿರ್ಮಿಸಲಾಗಿದೆ. ಸರಕು ಸಾಗಣೆಗಾಗಿ ವಂದೇ ಭಾರತ್ ತಂತ್ರಜ್ಞಾನ ಆಧಾರಿತ ಹೊಸ ಮಾದರಿಯ ರೈಲುಗಳ ಅಭಿವೃದ್ಧಿಯೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
