ವೇಗವಾಗಿ ಬೆಳೆಯುತ್ತಿರುವ ಇಂದಿನ ಡಿಜಿಟಲ್ ಜಗತ್ತಿನಲ್ಲಿ ಒಂದು ಸೆಕೆಂಡಿನ ನೂರನೇ ಒಂದು ಭಾಗದಷ್ಟು ಸಮಯವೂ ಅತ್ಯಂತ ನಿರ್ಣಾಯಕ. ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಒಂದು ದೇಶ, ಒಂದು ಸಮಯ(One Nation, One Time) ಉಪಕ್ರಮವು ದೇಶದ ಸೈಬರ್ ಭದ್ರತೆ, ತಾಂತ್ರಿಕ ಸಾರ್ವಭೌಮತ್ವ ಮತ್ತು ಮೂಲಸೌಕರ್ಯಗಳ ಸಮನ್ವಯತೆಯನ್ನು ಗಟ್ಟಿಗೊಳಿಸುವ ಮಹತ್ವದ ಕ್ರಾಂತಿಕಾರಿ ಹೆಜ್ಜೆ. ಹೀಗಾಗಿ ಏನಿದು ಯೋಜನೆ? ಲಾಭ ಏನು?ಹೇಗೆ ಕೆಲಸ ಮಾಡುತ್ತದೆ? ಜನರ ಮೇಲೆ ಪರಿಣಾಮ ಏನು ಇತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ.
ಏನಿದು ಯೋಜನೆ?
ಪ್ರಸ್ತುತ ಭಾರತದಲ್ಲಿ ವಿವಿಧ ಸಂಸ್ಥೆಗಳು ಮತ್ತು ತಾಂತ್ರಿಕ ವಲಯಗಳು ಸಮಯಕ್ಕಾಗಿ ಜಿಪಿಎಸ್ (GPS) ಸೇರಿದಂತೆ ಬೇರೆ ಬೇರೆ ವಿದೇಶಿ ಮೂಲಗಳನ್ನು ಅವಲಂಬಿಸಿವೆ. ಆದರೆ ಹೊಸ ನಿಯಮದ ಪ್ರಕಾರ, ದೇಶದ ಎಲ್ಲಾ ಬ್ಯಾಂಕುಗಳು, ಷೇರು ಮಾರುಕಟ್ಟೆಗಳು, ಟೆಲಿಕಾಂ ನೆಟ್ವರ್ಕ್ಗಳು ಮತ್ತು ಇಂಟರ್ನೆಟ್ ಸೇವೆಗಳು ಕಡ್ಡಾಯವಾಗಿ ಭಾರತೀಯ ಪ್ರಮಾಣಿತ ಸಮಯವನ್ನು (IST) ಮಾತ್ರ ಬಳಸಬೇಕು. ಈ ಸಮಯವನ್ನು ಸಿಎಸ್ಐಆರ್-ರಾಷ್ಟ್ರೀಯ ಭೌತಿಕ ಪ್ರಯೋಗಾಲಯ (CSIR-NPL) ಅಣು ಗಡಿಯಾರಗಳ (Atomic Clocks) ಸಹಾಯದಿಂದ ಅತ್ಯಂತ ನಿಖರವಾಗಿ ತಿಳಿಸಲಾಗುತ್ತದೆ.
ಪ್ರಸ್ತುತ ಇರುವ ಸಮಸ್ಯೆ ಏನು?
ನಾವು ನಮ್ಮ ಮೊಬೈಲ್, ಕೈಗಡಿಯಾರ ಅಥವಾ ಗೋಡೆ ಗಡಿಯಾರಗಳಲ್ಲಿ ನೋಡುವ ಸಮಯ ಒಂದೇ ಆಗಿರುತ್ತದೆ. ದೇಶದಾದ್ಯಂತ ನಾವೆಲ್ಲರೂ ಒಂದೇ ಸಮಯವನ್ನು ಪಾಲಿಸುತ್ತೇವೆ. ನಾವು ದೈನಂದಿನ ಜೀವನದಲ್ಲಿ ಒಂದೇ ಸಮಯ ನೋಡುತ್ತಿದ್ದರೂ, ಹಿನ್ನೆಲೆಯಲ್ಲಿ ಕೆಲಸ ಮಾಡುವ ತಂತ್ರಜ್ಞಾನಗಳು ವಿಭಿನ್ನ ಮೂಲಗಳಿಂದ ಸಮಯವನ್ನು ಪಡೆದುಕೊಳ್ಳುತ್ತಿವೆ.
ಸದ್ಯಕ್ಕೆ ನಮ್ಮ ಮೊಬೈಲ್ ನೆಟ್ವರ್ಕ್ಗಳು, ಇಂಟರ್ನೆಟ್ ಸೇವೆಗಳು (ISPs), ಖಾಸಗಿ ಸರ್ವರ್ಗಳು ಮತ್ತು ಕೆಲವು ಬ್ಯಾಂಕುಗಳು ಸಮಯದ ನಿಖರತೆಗಾಗಿ ಅಮೆರಿಕದ ಜಿಪಿಎಸ್ ಉಪಗ್ರಹಗಳ ಸಿಗ್ನಲ್ ಅನ್ನು ಅವಲಂಬಿಸಿವೆ. ಬೇರೆ ಬೇರೆ ಟೆಲಿಕಾಂ ಆಪರೇಟರ್ಗಳು ಮತ್ತು ಬ್ಯಾಂಕುಗಳು ತಮ್ಮದೇ ಆದ ಡೇಟಾ ಸೆಂಟರ್ಗಳ ಮೂಲಕ ಸಮಯವನ್ನು ನಿರ್ವಹಿಸುವುದರಿಂದ, ಅವರ ಸರ್ವರ್ಗಳ ನಡುವೆ ಕೆಲವೇ ಕೆಲವು ಸೆಕೆಂಡ್ಗಳು ಅಥವಾ ಮಿಲಿಸೆಕೆಂಡ್ಗಳಷ್ಟು ಸಣ್ಣ ವ್ಯತ್ಯಾಸಗಳಿರುತ್ತವೆ. ಸೈಬರ್ ಭದ್ರತೆಯ ದೃಷ್ಟಿಯಿಂದಲೂ ಇದು ವಿದೇಶಿ ಮೂಲಗಳ ಮೇಲಿನ ಅವಲಂಬನೆಯನ್ನು ಹೆಚ್ಚಿಸಿದೆ.
ಹೊಸ ಯೋಜನೆಯಲ್ಲಿ ಏನಾಗಲಿದೆ?
ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಹೊಸ ನಿಯಮದ ಪ್ರಕಾರ ಮಾರ್ಚ್ 2027 ರಿಂದ ದೇಶದ ಎಲ್ಲಾ ಪ್ರಮುಖ ಸೇವೆಗಳು ಕಡ್ಡಾಯವಾಗಿ ಭಾರತೀಯ ಪ್ರಮಾಣಿತ ಸಮಯವನ್ನು (IST) ಮಾತ್ರ ಬಳಸಬೇಕು. ಈ ನಿಖರವಾದ ಸಮಯವನ್ನು ನವದೆಹಲಿಯಲ್ಲಿರುವ ಸಿಎಸ್ಐಆರ್-ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ಅತ್ಯಾಧುನಿಕ ಅಣು ಗಡಿಯಾರಗಳ ಸಹಾಯದಿಂದ ಸಿದ್ಧಪಡಿಸುತ್ತದೆ. ಇದನ್ನು ಭಾರತದ ಸ್ವಂತದ್ದಾದ ನಾವಿಕ್ (NavIC) ಉಪಗ್ರಹ ತಂತ್ರಜ್ಞಾನದ ಮೂಲಕ ದೇಶದ ಎಲ್ಲಾ ನೆಟ್ವರ್ಕ್ಗಳಿಗೆ ತಲುಪಿಸಲಾಗುತ್ತದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಆಗಸ್ಟ್ 27 ರಂದು ‘ಲೀಗಲ್ ಮೆಟ್ರಾಲಜಿ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು, 2026’ ಅನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ನಿಯಮಗಳು ಗಜೆಟ್ನಲ್ಲಿ ಪ್ರಕಟವಾದ 180 ದಿನಗಳ (6 ತಿಂಗಳು) ನಂತರ ಜಾರಿಗೆ ಬರಲಿವೆ ಎಂದು ಕಾನೂನಿನಲ್ಲಿ ತಿಳಿಸಲಾಗಿದೆ. ಬ್ಯಾಂಕುಗಳು, ಟೆಲಿಕಾಂ ಕಂಪನಿಗಳು ಮತ್ತು ಇತರ ಡಿಜಿಟಲ್ ಸಂಸ್ಥೆಗಳು ತಮ್ಮ ತಾಂತ್ರಿಕ ಸರ್ವರ್ಗಳನ್ನು ಭಾರತೀಯ ಸಮಯಕ್ಕೆ (IST) ಹೊಂದಿಸಿಕೊಳ್ಳಲು ಈ 180 ದಿನಗಳ ಕಾಲಾವಕಾಶ ನೀಡಲಾಗಿದೆ.

ಲಾಭ ಏನು?
ಸೈಬರ್ ಭದ್ರತೆ ಮತ್ತು ರಾಷ್ಟ್ರೀಯ ಸುರಕ್ಷತೆ
ಪ್ರಸ್ತುತ ಭಾರತವು ಸಮಯದ ನಿಖರತೆಗಾಗಿ ಅಮೆರಿಕಾದ ಜಿಪಿಎಸ್ (GPS) ವ್ಯವಸ್ಥೆಯನ್ನು ಹೆಚ್ಚು ಅವಲಂಬಿಸಿದೆ. ಯುದ್ಧ ಅಥವಾ ತುರ್ತು ಪರಿಸ್ಥಿತಿಗಳಲ್ಲಿ ವಿದೇಶಿ ಉಪಗ್ರಹ ಸೇವೆಗಳು ಸ್ಥಗಿತಗೊಂಡರೆ ದೇಶದ ಸಂವಹನ ವ್ಯವಸ್ಥೆ ಅಪಾಯಕ್ಕೆ ಸಿಲುಕಬಹುದು. ಈಗ ಭಾರತದ ಸ್ವಂತದ್ದಾದ ‘ನಾವಿಕ್’ (NavIC) ಮತ್ತು ಸ್ವದೇಶಿ ಅಣು ಗಡಿಯಾರಗಳನ್ನು ಬಳಸುವುದರಿಂದ, ದೇಶದ ಪ್ರಮುಖ ಮೂಲಸೌಕರ್ಯಗಳು ವಿದೇಶಿ ಹಸ್ತಕ್ಷೇಪದಿಂದ ಮುಕ್ತವಾಗಿ, ಸಂಪೂರ್ಣ ಸುರಕ್ಷಿತವಾಗಿರಲಿವೆ.
ಡಿಜಿಟಲ್ ವಂಚನೆಗಳಿಗೆ ಬ್ರೇಕ್
ಆನ್ಲೈನ್ ಬ್ಯಾಂಕಿಂಗ್, ಯುಪಿಐ (UPI) ಪಾವತಿಗಳು ಮತ್ತು ಷೇರು ಮಾರುಕಟ್ಟೆಯ (Stock Market) ವಹಿವಾಟುಗಳಲ್ಲಿ ಪ್ರತಿಯೊಂದು ಸೆಕೆಂಡ್ ಕೂಡ ಮುಖ್ಯವಾಗಿರುತ್ತದೆ.ಪ್ರಸ್ತುತ ವಿವಿಧ ಬ್ಯಾಂಕುಗಳ ಸರ್ವರ್ಗಳ ನಡುವೆ ಸಮಯದ ಸಣ್ಣ ವ್ಯತ್ಯಾಸಗಳಿರುತ್ತವೆ (Time Discrepancy). ಇದನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಆನ್ಲೈನ್ ವಂಚನೆಗಳನ್ನು ಮಾಡುತ್ತಾರೆ.ದೇಶಾದ್ಯಂತ ಒಂದೇ ನಿಖರವಾದ ಸಮಯದ ಮುದ್ರೆ (High-precision Time Stamping) ಇರುವುದರಿಂದ, ವಂಚನೆಗಳನ್ನು ತಕ್ಷಣವೇ ಪತ್ತೆಹಚ್ಚಲು ಮತ್ತು ಸೈಬರ್ ಅಪರಾಧಗಳನ್ನು ತಡೆಯಲು ತನಿಖಾ ಸಂಸ್ಥೆಗಳಿಗೆ ಸುಲಭವಾಗುತ್ತದೆ.
ಸುಧಾರಿತ 5G ಮತ್ತು ಮುಂದಿನ ತಂತ್ರಜ್ಞಾನಗಳು
5ಜಿ ನೆಟ್ವರ್ಕ್ಗಳು ಅತ್ಯಂತ ವೇಗವಾಗಿ ಡೇಟಾವನ್ನು ವರ್ಗಾಯಿಸುತ್ತವೆ. ಇದಕ್ಕೆ ನ್ಯಾನೋ ಸೆಕೆಂಡ್ಗಳಷ್ಟು ನಿಖರವಾದ ಸಮಯದ ಹೊಂದಾಣಿಕೆ ಅತ್ಯಗತ್ಯ. ಭಾರತದ್ದೇ ಆದ ಅಧಿಕೃತ ಸಮಯವನ್ನು ಬಳಸುವುದರಿಂದ ಕರೆಗಳು ಕಡಿತಗೊಳ್ಳುವುದು (Call drops) ಕಡಿಮೆಯಾಗುತ್ತದೆ, ಇಂಟರ್ನೆಟ್ ವೇಗ ಸ್ಥಿರವಾಗಿರುತ್ತದೆ ಮತ್ತು ಭವಿಷ್ಯದ 6G ತಂತ್ರಜ್ಞಾನಕ್ಕೆ ಬಲವಾದ ಅಡಿಪಾಯ ಸಿಗುತ್ತದೆ

ವಿದ್ಯುತ್ ಗ್ರಿಡ್
ಭಾರತವು ವಿಶ್ವದ ಅತಿ ದೊಡ್ಡ ಏಕೀಕೃತ ವಿದ್ಯುತ್ ಗ್ರಿಡ್ಗಳಲ್ಲಿ ಒಂದನ್ನು ಹೊಂದಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇಡೀ ದೇಶದ ವಿದ್ಯುತ್ ಜಾಲ ಒಂದಕ್ಕೊಂದು ಬೆಸೆದುಕೊಂಡಿದೆ. ಗ್ರಿಡ್ಗಳ ಮೂಲಕ ವಿದ್ಯುತ್ ಹರಿಯುವಾಗ ದೇಶದ ಎಲ್ಲಾ ವಿದ್ಯುತ್ ಉತ್ಪಾದನಾ ಕೇಂದ್ರಗಳು ಮತ್ತು ಸಬ್ಸ್ಟೇಷನ್ಗಳು ಒಂದೇ ಮಿಲಿಸೆಕೆಂಡ್ನ ನಿಖರತೆಯಲ್ಲಿ ಪರಸ್ಪರ ಸಿಂಕ್ ಆಗಿರಬೇಕು. ಸಮಯ ಹೊಂದಾಣಿಕೆಯಲ್ಲಿ ಸಣ್ಣ ವ್ಯತ್ಯಾಸವಾದರೂ ಗ್ರಿಡ್ ಫೇಲ್ಯೂರ್ ಆಗಿ ಇಡೀ ರಾಜ್ಯ ಅಥವಾ ದೇಶವೇ ಕತ್ತಲೆಯಲ್ಲಿ ಮುಳುಗಬಹುದು.
ಗ್ರಿಡ್ನ ಯಾವುದಾದರೂ ಒಂದು ಭಾಗದಲ್ಲಿ ಹಠಾತ್ ವಿದ್ಯುತ್ ವ್ಯತ್ಯಯ ಅಥವಾ ಶಾರ್ಟ್ ಸರ್ಕ್ಯೂಟ್ ಉಂಟಾದರೆ, ಅದು ಯಾವ ನಿಖರವಾದ ಕ್ಷಣದಲ್ಲಿ ಸಂಭವಿಸಿತು ಎಂಬುದನ್ನು ಪತ್ತೆಹಚ್ಚಲು ಒಂದೇ ರೀತಿಯ ರಾಷ್ಟ್ರೀಯ ಸಮಯ (IST) ನೆರವಾಗುತ್ತದೆ. ಇದರಿಂದ ಇಡೀ ಗ್ರಿಡ್ ಹಾನಿಯಾಗುವುದನ್ನು ಸೆಕೆಂಡುಗಳ ಒಳಗೆ ತಡೆಯಬಹುದು. ಸೌರಶಕ್ತಿ ಮತ್ತು ಪವನ ಶಕ್ತಿಯನ್ನು ಗ್ರಿಡ್ಗೆ ಸೇರಿಸುವಾಗ ಸಮಯದ ನಿಖರತೆ ಅತ್ಯಗತ್ಯ. ಹೊಸ ಯೋಜನೆ ಇದನ್ನು ಸುಲಭಗೊಳಿಸುತ್ತದೆ.
ಸುರಕ್ಷಿತ ಸಾರಿಗೆ
ಪ್ರಸ್ತುತ ಭಾರತೀಯ ರೈಲ್ವೆಯು ಸ್ವಯಂಚಾಲಿತ ಸಿಗ್ನಲಿಂಗ್ ಮತ್ತು ಕವಚ್ (Kavach) ನಂತಹ ಸುರಕ್ಷತಾ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಒಂದೇ ಹಳಿಯಲ್ಲಿ ಎರಡು ರೈಲುಗಳು ಎದುರುಬದುರಾಗಿ ಬರುವುದನ್ನು ತಪ್ಪಿಸಲು ಗಡಿಯಾರದ ಸಮಯ ಅತ್ಯಂತ ನಿಖರವಾಗಿರಬೇಕು. ಇಡೀ ದೇಶ ಒಂದೇ ಸಮಯದ ಮೂಲವನ್ನು ಬಳಸುವುದರಿಂದ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಯಾವುದೇ ಗೊಂದಲ ಇರುವುದಿಲ್ಲ.
ರನ್ವೇಗಳಲ್ಲಿ ವಿಮಾನಗಳು ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಆಗುವಾಗ ಸೆಕೆಂಡುಗಳ ವ್ಯತ್ಯಾಸವೂ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು.ವಿಮಾನದಲ್ಲಿರುವ ಸಿಸ್ಟಮ್ ಹಾಗೂ ನೆಲದ ಮೇಲಿರುವ ಏರ್ ಟ್ರಾಫಿಕ್ ಕಂಟ್ರೋಲ್ (ATC) ಎರಡೂ ಭಾರತದ್ದೇ ಆದ ಒಂದೇ ಅಧಿಕೃತ ಸಮಯಕ್ಕೆ ಸಿಂಕ್ ಆಗಿರುವುದರಿಂದ ವಿಮಾನಗಳ ಸಂಚಾರ ಹೆಚ್ಚು ಸುರಕ್ಷಿತವಾಗುತ್ತದೆ.

ಇಲ್ಲಿಯವರೆಗೆ ಜಾರಿಯಾಗಿರಲಿಲ್ಲ ಯಾಕೆ?
ಇಲ್ಲಿಯವರೆಗೆ ಕಾನೂನು ಚೌಕಟ್ಟಿನ ಕೊರತೆ, ಸ್ವದೇಶಿ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಅಣು ಗಡಿಯಾರಗಳ ಮೂಲಸೌಕರ್ಯದ ಅಭಾವದಿಂದಾಗಿ ‘ಒಂದು ದೇಶ, ಒಂದು ಸಮಯ’ ಯೋಜನೆ ಜಾರಿಯಾಗಿರಲಿಲ್ಲ. ಈ ಹಿಂದೆ ಭಾರತದಲ್ಲಿ ಸಮಯದ ನಿಖರತೆಯನ್ನು ಕಡ್ಡಾಯಗೊಳಿಸಲು ಯಾವುದೇ ನಿರ್ದಿಷ್ಟ ಕಾನೂನು ಇರಲಿಲ್ಲ. ಈಗ ಲೀಗಲ್ ಮೆಟ್ರಾಲಜಿ ನಿಯಮಗಳು, 2026 ರ ಮೂಲಕ ಸರ್ಕಾರ ಇದಕ್ಕೆ ಅಧಿಕೃತ ಕಾನೂನು ರೂಪ ನೀಡಿದೆ.
ಈ ಹಿಂದೆ ಬ್ಯಾಂಕುಗಳು ಮತ್ತು ಟೆಲಿಕಾಂ ವಲಯಗಳು ಸಮಯಕ್ಕಾಗಿ ಅಮೆರಿಕದ ಜಿಪಿಎಸ್ (GPS) ಅನ್ನು ಅವಲಂಬಿಸಿದ್ದವು. ಭಾರತದ ಸ್ವಂತ ನಾವಿಕ್ (NavIC) ಉಪಗ್ರಹ ವ್ಯವಸ್ಥೆ ಸಂಪೂರ್ಣವಾಗಿ ಸಿದ್ಧಗೊಳ್ಳಲು ಇತ್ತೀಚಿನ ವರ್ಷಗಳವರೆಗೆ ಕಾಲಾವಕಾಶ ಬೇಕಾಯಿತು. ದೇಶಾದ್ಯಂತ ಅತ್ಯಂತ ನಿಖರವಾದ ಸಮಯವನ್ನು ಪೂರೈಸಲು ದುಬಾರಿ ಅಣು ಗಡಿಯಾರಗಳು ಬೇಕು. ಇವುಗಳನ್ನು ನವದೆಹಲಿಯ ಸಿಎಸ್ಐಆರ್-ಎನ್ಪಿಎಲ್ (CSIR-NPL) ಹೊರತುಪಡಿಸಿ ಬೇರೆಡೆ ವಿಸ್ತರಿಸಲು ಮೂಲಸೌಕರ್ಯದ ಅಗತ್ಯವಿತ್ತು.
ಈ ಹಿಂದೆ ಯುಪಿಐ (UPI) ಮತ್ತು 5G ತಂತ್ರಜ್ಞಾನಗಳ ತೀವ್ರತೆ ಇಷ್ಟೊಂದು ವ್ಯಾಪಕವಾಗಿರಲಿಲ್ಲ. ಈಗ ಡಿಜಿಟಲ್ ವಹಿವಾಟುಗಳು ಹೆಚ್ಚಾಗಿರುವುದರಿಂದ ನ್ಯಾನೋ ಸೆಕೆಂಡ್ಗಳಷ್ಟು ನಿಖರತೆಯೂ ಅನಿವಾರ್ಯವಾಗಿದೆ.
ಬೇರೆ ದೇಶಗಳಲ್ಲಿ ಹೇಗೆ?
ಅಮೆರಿಕದ NIST (National Institute of Standards and Technology) ಸಂಸ್ಥೆಯು 1949 ರಲ್ಲಿ ವಿಶ್ವದ ಮೊದಲ ಅಣು ಗಡಿಯಾರವನ್ನು ಅಭಿವೃದ್ಧಿಪಡಿಸಿತು. ಅಂದಿನಿಂದ ಅಲ್ಲಿನ ರಕ್ಷಣಾ, ಬ್ಯಾಂಕಿಂಗ್ ಮತ್ತು ನಾಗರಿಕ ವಲಯಗಳು ಕಡ್ಡಾಯವಾಗಿ ಈ ಕೇಂದ್ರಿಕೃತ ಸಮಯಕ್ಕೆ ಲಿಂಕ್ ಆಗಿವೆ. ಯುನೈಟೆಡ್ ಕಿಂಗ್ಡಮ್ 1955 ರಲ್ಲಿ, ಜಪಾನ್ 1976 ಜಾರಿಗೆ ಬಂದಿತು. ತದನಂತರ ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ಈ ವ್ಯವಸ್ಥೆಯನ್ನು 1987, 1995, 1999 ಮತ್ತು ಫೆಬ್ರವರಿ 2006 ರಲ್ಲಿ ಮತ್ತಷ್ಟು ಆಧುನೀಕರಿಸಲಾಯಿತು. ದಕ್ಷಿಣ ಕೊರಿಯಾದಲ್ಲಿ 1980 ರಲ್ಲಿ ಜಾರಿಗೆ ಬಂದಿದೆ.
ಭೌಗೋಳಿಕವಾಗಿ ಚೀನಾ ವಿಶಾಲವಾಗಿದ್ದರೂ, ಅಲ್ಲಿ ದೇಶದ ಏಕತೆಗಾಗಿ 1949 ರಿಂದ ‘ಬೀಜಿಂಗ್ ಸಮಯ’ ಎಂಬ ಒಂದೇ ಸಮಯದ ವಲಯವನ್ನು ಬಳಸಲಾಗುತ್ತಿದೆ. ಚೀನಾ ತನ್ನ NTSC ಸಂಸ್ಥೆ ಮತ್ತು ತನ್ನದೇ ಆದ ಬೀಡೂ (Beidou) ಉಪಗ್ರಹ ವ್ಯವಸ್ಥೆಯ ಮೂಲಕ ತನ್ನ ವಲಯಗಳಿಗೆ ನಿಖರ ಸಮಯವನ್ನು ನೀಡುತ್ತದೆ.
ಭಾರತವು ತನ್ನ ಸ್ವದೇಶಿ ನಾವಿಕ್ (NavIC) ಉಪಗ್ರಹ ವ್ಯವಸ್ಥೆ ಮತ್ತು ಸಿಎಸ್ಐಆರ್-ಎನ್ಪಿಎಲ್ ಅಣು ಗಡಿಯಾರಗಳ ಮೂಲಕ ಮಾರ್ಚ್ 2027 ರಿಂದ ಇಡೀ ದೇಶದ ಡಿಜಿಟಲ್ ವ್ಯವಸ್ಥೆಗೆ ಇದನ್ನು ಕಡ್ಡಾಯಗೊಳಿಸುತ್ತಿದೆ. ಈ ಮೂಲಕ ಇಂತಹ ಉನ್ನತ ಮಟ್ಟದ ಡಿಜಿಟಲ್ ಹಾಗೂ ತಾಂತ್ರಿಕ ಸಾರ್ವಭೌಮತ್ವ ಹೊಂದಿದ ಜಗತ್ತಿನ 5ನೇ ಪ್ರಮುಖ ದೇಶವಾಗಿ ಭಾರತ ಹೊರಹೊಮ್ಮುತ್ತಿದೆ.
‘ಒಂದು ದೇಶ, ಒಂದು ಸಮಯ’ ಎಂಬುದು ಕೇವಲ ಗಡಿಯಾರದ ಮುಳ್ಳುಗಳನ್ನು ಹೊಂದಿಸುವ ತಾಂತ್ರಿಕ ಪ್ರಕ್ರಿಯೆಯಲ್ಲ. ಬದಲಿಗೆ ಇದು ಭಾರತದ ಡಿಜಿಟಲ್ ಗಡಿಗಳನ್ನು ಭದ್ರಪಡಿಸುವ ಮತ್ತು ಸಾರ್ವಭೌಮತ್ವವನ್ನು ಸಾಕಾರಗೊಳಿಸುವ ಬಲಿಷ್ಠ ರಕ್ಷಣಾ ಕವಚ. ವಿದೇಶಿ ಸರ್ವರ್ಗಳ ಮೇಲಿನ ಅವಲಂಬನೆಯನ್ನು ತೊಡೆದುಹಾಕಿ, ದೇಶೀಯ ‘NavIC’ ಮತ್ತು ಪರಮಾಣು ನಿಖರತೆಯೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಬ್ಯಾಂಕಿಂಗ್, ಸಂವಹನ ಹಾಗೂ ರಕ್ಷಣಾ ವ್ಯವಸ್ಥೆಗಳನ್ನು ಭವಿಷ್ಯದ ಸೈಬರ್ ಸವಾಲುಗಳಿಗೆ ಸಜ್ಜುಗೊಳಿಸಲಾಗುತ್ತಿದೆ. ದೇಶದ ಪ್ರತಿಯೊಂದು ಡಿಜಿಟಲ್ ಹೆಜ್ಜೆಯಲ್ಲೂ ನಿಖರತೆ, ಸಮನ್ವಯತೆ ಮತ್ತು ಸ್ವಾವಲಂಬನೆಯನ್ನು ತರುವ ಈ ಐತಿಹಾಸಿಕ ಹೆಜ್ಜೆಯು, ಸುರಕ್ಷಿತ ಹಾಗೂ ಸಶಕ್ತ ‘ಆತ್ಮನಿರ್ಭರ ಭಾರತ’ ನಿರ್ಮಾಣಕ್ಕೆ ಗಟ್ಟಿಯಾದ ಅಡಿಪಾಯವಾಗಲಿದೆ.
