– ಆದ ಪ್ರಮಾದದ ಬಗ್ಗೆ ಎಚ್ಚೆತ್ತು ನೋಟಿಸ್ ಹಿಂಪಡೆದ ಅಧಿಕಾರಿಗಳು
ಮಂಗಳೂರು: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ (Harekala Hajabba) ಅವರಿಗೂ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ನೋಟಿಸ್ ನೀಡಿ ಕ್ಷಮೆಯಾಚಿಸಿರುವ ಪ್ರಸಂಗ ನಡೆದಿದೆ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಹಾಜಬ್ಬರ ಮನೆಗೆ ಆಗಮಿಸಿ ದಾಖಲೆಗಳನ್ನು ಪಡೆದುಕೊಂಡು ಹೋಗಿದ್ದಾರೆ.
ಅಕ್ಷರ ಸಂತ ಹಾಜಬ್ಬ ಅವರಿಗೆ ಎಸ್‌ಐಆರ್ ಪರಿಶೀಲನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. 2002ರ ಹಳೆಯ ಮತದಾರರ ಪಟ್ಟಿಯಲ್ಲಿ ಹರೇಕಳ ಹಾಜಬ್ಬ ಅವರ ಹೆಸರು ಕೇವಲ ‘ಹಾಜಬ್ಬ’ ಎಂದು ದಾಖಲಾಗಿತ್ತು. ಬಳಿಕ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’ ಎಂದು ನಮೂದಾಗಿರುವುದರಿಂದ ಹೆಸರು ಹೊಂದಾಣಿಕೆಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಇದನ್ನೂ ಓದಿ: ಸಾವಿರ ಸಲ ಹೇಳುತ್ತೇನೆ, ನಾನು ತಪ್ಪೇ ಮಾಡಿಲ್ಲ: 4 ಗಂಟೆ ಇ.ಡಿ ವಿಚಾರಣೆ ಬಳಿಕ ನಾಗೇಂದ್ರ ಸ್ಪಷ್ಟನೆ
ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಪರಿಶೀಲನಾ ಪ್ರಕ್ರಿಯೆಯ ಭಾಗವಾಗಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಸೆಪ್ಟೆಂಬರ್ 11ರಂದು ಗ್ರಾಮ ಪಂಚಾಯಿತಿಗೆ ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದರು.
ನೋಟಿಸ್ ನೀಡಿದ ಬಳಿಕ ಆದ ಪ್ರಮಾದದ ಬಗ್ಗೆ ಎಚ್ಚೆತ್ತ ಅಧಿಕಾರಿಗಳು, ಹಾಜಬ್ಬರ ಮನೆಗೆ ಬಂದು ದಾಖಲೆಗಳನ್ನು ಪಡೆದುಕೊಂಡು ಹೋಗಿದ್ದಾರೆ. ಬಳಿಕ ಹಾಜಬ್ಬರ ಬಳಿ ಕ್ಷಮೆ ಕೇಳಿದ್ದಾರೆ. ಉಳ್ಳಾಲ ತಾಲೂಕಿನ ಹರೇಕಳದಲ್ಲಿ ಹಾಜಬ್ಬ ಅವರ ಮನೆಯಿದೆ. ಇದನ್ನೂ ಓದಿ: ಜಿಪಂ ಸಿಇಓಗಳು ವಾರದಲ್ಲಿ 2 ದಿನ 4-5 ಗ್ರಾಮಕ್ಕೆ ಭೇಟಿ ನೀಡಬೇಕು, ಸಮಸ್ಯೆ ಆಲಿಸಬೇಕು: ಖಂಡ್ರೆ ಸೂಚನೆ
ಬೀದಿ ಬದಿ ಕಿತ್ತಳೆ ಹಣ್ಣಿನ ವ್ಯಾಪಾರ ಮಾಡಿ ಹರೇಕಳ ಹಾಜಬ್ಬ ಅವರು ಊರಿಗೆ ಶಾಲೆ ಕಟ್ಟಿಸಿ ಹೆಸರುವಾಸಿಯಾಗಿದ್ದಾರೆ. ಅವರ ಸಮಾಜಸೇವೆಗೆ ಪದ್ಮಶ್ರೀ ಪುರಸ್ಕಾರ ಒಲಿದು ಬಂದಿತ್ತು.
