– ಆ್ಯಪ್ ಆಧಾರಿತ ವಾಹನಗಳ ಪ್ರಯಾಣಿಕರಿಗೂ ಬಿಎಂಟಿಸಿ ಬಸ್ ಸೇವೆ ಸೌಲಭ್ಯ
– ಎಲ್ಲಾ ಮೆಟ್ರೋ ರೈಲು ನಿಲ್ದಾಣಗಳಿಗೆ ಮಿನಿ ಎಸಿ ಬಸ್‌ಗಳ ಸಂಪರ್ಕ ಸಾರಿಗೆ ವ್ಯವಸ್ಥೆ
ಬೆಂಗಳೂರು: ಓಲಾ, ಊಬರ್ ಸೇರಿದಂತೆ ಇನ್ನಿತರೆ ಆ್ಯಪ್ ಆಧಾರಿತ ವಾಣಿಜ್ಯ ಪ್ರಯಾಣಿಕ ವಾಹನಗಳಿಗೂ `ನಮ್ಮ ಬಿಎಂಟಿಸಿ ಮೊಬೈಲ್ ಆಪ್ 2.0′ ಅನ್ನು (BMTC Live Tracking App) ಒದಗಿಸಲಾಗುತ್ತದೆ. ಈ ಮೂಲಕ ಓಲಾ, ಊಬರ್ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಾವು ಇಳಿಯುವ ಸ್ಥಳಗಳಿಗೆ ಹೋಗುವ ಬಿಎಂಟಿಸಿ ಬಸ್‌ಗಳ ಸಂಚಾರ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ (Byrathi Suresh) ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸಾರಿಗೆ ಇಲಾಖೆ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ಉನ್ನತಾಧಿಕಾರಿಗಳ ಜೊತೆ ಸಭೆ ನಡೆಸಿದ ಸಾರಿಗೆ ಸಚಿವ ಬೈರತಿ ಸುರೇಶ್, ಖಾಸಗಿ ಆ್ಯಪ್ ಆಧಾರಿತ ಪ್ರಯಾಣಿಕರ ವಾಹನಗಳಿಗೂ ಬಿಎಂಟಿಸಿ ಲೈವ್ ಟ್ರ‍್ಯಾಕಿಂಗ್ ಆ್ಯಪ್ ಅನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋರಿಕೆ ತಡೆಗೆ ಕಟ್ಟಪ್ಪಣೆ:
ಬಿಎಂಟಿಸಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳಲ್ಲಿ ಸೋರಿಕೆಯಾಗುವುದನ್ನು ತಡೆಗಟ್ಟಬೇಕು. ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದ ಸಚಿವರು, ದುಂದುವೆಚ್ಚಕ್ಕೆ ಕಡಿವಾಣ ಹಾಕುವಂತೆ ಸ್ಪಷ್ಟ ನಿರ್ದೇಶನ ನೀಡಿದರು.
ಮೆಟ್ರೋ ನಿಲ್ದಾಣಗಳಿಗೆ ಎಸಿ ಮಿನಿ ಬಸ್:
ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಯೋಜನೆಯಡಿ ಬಿಎಂಟಿಸಿಗೆ ಬರುತ್ತಿರುವ 4500 ಎಲೆಕ್ಟ್ರಿಕ್ ಬಸ್‌ಗಳ ಪೈಕಿ 200 ಮಿನಿ ಹವಾನಿಯಂತ್ರಿತ (ಎಸಿ) ಬಸ್‌ಗಳನ್ನು ಎಲ್ಲಾ ಮೆಟ್ರೋ ರೈಲು ನಿಲ್ದಾಣಗಳ ಸುತ್ತಮುತ್ತಲಿನ 5 ಕಿಲೋಮೀಟರ್ ವ್ಯಾಪ್ತಿಯಿಂದ ಸಂಪರ್ಕ ಕಲ್ಪಿಸಲು ಸಚಿವರು ಸೂಚನೆ ನೀಡಿದರು. ಬಡಾವಣೆಗಳ ಕಟ್ಟಕಡೆಯ ಸ್ಥಳಗಳಿಂದ ಮೆಟ್ರೋ ರೈಲು ನಿಲ್ದಾಣಗಳಿಗೆ ಈ ಬಸ್ ಗಳು ಸಂಪರ್ಕ ಕಲ್ಪಿಸಲಿವೆ ಮತ್ತು ಇದರಿಂದ ಬೆಂಗಳೂರು ನಗರದ ನಾಗರಿಕರಿಗೆ ಅನುಕೂಲವಾಗಲಿದೆ.
ಐಟಿ ಬಿಟಿ ಕಂಪನಿಗಳಿಗೂ ಬಿಎಂಟಿಸಿ ಬಸ್:
ಬೆಂಗಳೂರಿನಲ್ಲಿರುವ ಸಾವಿರಾರು ಐಟಿಬಿಟಿ ಕಂಪನಿಗಳ ಸಿಬ್ಬಂದಿ ತಮ್ಮ ಖಾಸಗಿ ವಾಹನ ಬಳಕೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಬಿಎಂಟಿಸಿ ಆ ಕಂಪನಿಗಳಿಗೆ ಇನ್ನಷ್ಟು ಹವಾನಿಯಂತ್ರಿತ ಬಸ್‌ಗಳನ್ನು ಒದಗಿಸಲಿದೆ ಎಂದು ತಿಳಿಸಿದ ಸಚಿವರು, ಈ ದಿಸೆಯಲ್ಲಿ ಕಂಪನಿಗಳೊಂದಿಗೆ ಮಾತುಕತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
