– 300ಕ್ಕೂ ಹೆಚ್ಚು ಬಸ್ಗಳಲ್ಲಿ ಆಗಮಿಸಿದ ಜಿಟಿಡಿ ಬೆಂಬಲಿಗರ ದಂಡು
ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ʻನನ್ನಿಂದಲೇ ಜಿ.ಟಿ ದೇವೇಗೌಡ (GT Devegowda) ಗೆದ್ದಿದ್ದುʼ ಎನ್ನುವ ಕೇಂದ್ರಸಚಿವ ಹೆಚ್.ಡಿ ಕುಮಾರಸ್ವಾಮಿ (HD kumaraswamy) ಅವರ ಹೇಳಿಕೆಗೆ ಶಕ್ತಿ ಪ್ರದರ್ಶನದ ಮೂಲಕ ಜಿ.ಟಿ ದೇವೇಗೌಡ ಅವರು ತಿರುಗೇಟು ನೀಡಿದ್ದಾರೆ.

ಕರ್ನಾಟಕ ಸಹಕಾರ ಮಹಾ ಮಂಡಲ (Karnataka State Cooperative Federation)ದ ಅಧ್ಯಕ್ಷರಾದ ನೆಪದಲ್ಲೇ ಶಕ್ತಿ ಪ್ರದರ್ಶನಕ್ಕೆ ಮಾಜಿ ಸಚಿವ ಜಿಟಿಡಿ ಮುಂದಾಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜನರಿಂದ ಇಂದು ಮೈಸೂರು ನಗರದಲ್ಲಿ ಬೃಹತ್ ಮೆರವಣಿಗೆ ನಡೆದಿದೆ. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಬೃಹತ್ ಮೆರವಣಿಗೆ ನಡೆಸಲಾಗಿದೆ.
ಮೆರವಣಿಗೆ ವೇಳೆ ಜಿಟಿಡಿ ಫೋಟೋ ಹೊರತುಪಡಿಸಿದ್ರೆ, ಜೆಡಿಎಸ್ ಪಕ್ಷದ ಭಾವುಟವಾಗಲಿ, ಹಿರಿಯನಾಯಕರ ಫೋಟೋವಾಗಲಿ ಬಳಸಿಲ್ಲ. ಈ ಮೂಲಕ ಕುಮಾರಸ್ವಾಮಿ ಅವರ ಹೇಳಿಕೆಗೆ ಟಕ್ಕರ್ ಕೊಡುವ ರೀತಿಯಲ್ಲಿ ಮೆರವಣಿಗೆ ನಡೆಸಲಾಗಿದೆ. 2028ರ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ (Chamundeshwari Constituency) ದಳಪತಿಗಳ ರಾಜಕೀಯ ಕದನ ಜೋರಾಗಿದೆ.

5 ಜೆಸಿಬಿಗಳಲ್ಲಿ ಪುಷ್ಪಾರ್ಚನೆಗೆ ಸಿದ್ಧತೆ
ಶಕ್ತಿ ಪ್ರದರ್ಶನದ ಹಿನ್ನೆಲೆ 5 ಜೆಸಿಬಿಗಳಲ್ಲಿ ಪುಷ್ಪಾರ್ಚನೆಗೆ ಸಿದ್ಧತೆ ಮಾಡಲಾಗಿತ್ತು. ಮೆರೆವಣಿಗೆ ವೇಳೆ ಜೆಸಿಬಿ ಮೂಲಕ 2 ಬೃಹತ್ ಸೇಬಿನ ಹಾರ, 1 ಬೃಹತ್ ಗುಲಾಬಿ ಹಾರ ಹಾಕುವ ಮೂಲಕ ಅಭಿಮಾನಿಗಳು, ಬೆಂಬಲಿಗರು ಜಿ.ಟಿ ದೇವೇಗೌಡರನ್ನ ಸನ್ಮಾನಿಸಿದರು.

ಬೃಹತ್ ಮೆರವಣಿಗೆ ಹಿನ್ನೆಲೆ ಸುಮಾರು 300 ಕ್ಕೂ ಹೆಚ್ಚು ಬಸ್ಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರು. ಕ್ಷೇತ್ರದ ಪ್ರತಿ ಹಳ್ಳಿಯಿಂದಲೂ ಜನರನ್ನ ಕರೆಸಲಾಗಿತ್ತು. ಈ ಮೂಲಕ ಜಿ.ಟಿ ದೇವೇಗೌಡ ಅವರು ತಮ್ಮ ಶಕ್ತಿಪ್ರದರ್ಶನ ಮಾಡಿದ್ದಾರೆ.
