ಚಿತ್ರದುರ್ಗ: ಭದ್ರಾ ಜಲಾಶಯದ (Bhadra Dam) ಇನ್‌ಟೇಕ್ ಪಾಯಿಂಟ್‌ನಲ್ಲಿ ಚಿತ್ರದುರ್ಗ (Chitradurga) ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ (T. Raghumurthy) ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆಯ ನೀರು ಇದೀಗ ಕೋಟೆನಾಡಿನತ್ತ ಹರಿಯಲು ಆರಂಭಿಸಿದ್ದು, ಬರದನಾಡು ಚಿತ್ರದುರ್ಗದ ಜನರ ಹಲವು ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಚಿಕ್ಕಮಗಳೂರು (Chikkamagaluru) ಜಿಲ್ಲೆ ಲಕ್ಕವಳ್ಳಿ ಬಳಿಯ ಭದ್ರಾ ಇನ್ ಟೆಕ್ ಪಾಯಿಂಟ್‌ನಿಂದ ಚಿತ್ರದುರ್ಗದತ್ತ ನೀರು ಹರಿಯಲು ಆರಂಭವಾಗಿದೆ. ಸುಮಾರು142 ಕಿಲೋ ಮೀಟರ್ ಕ್ರಮಿಸಿದ ಬಳಿಕ ಚಿತ್ರದುರ್ಗವನ್ನು ಭದ್ರಾ ನೀರು ಪ್ರವೇಶಿಲಿದೆ. ಇದನ್ನೂ ಓದಿ: ಕನಸು ನನಸಾಗುವ ಹೊತ್ತು; ಚಿತ್ರದುರ್ಗಕ್ಕೆ ಭದ್ರಾ ನೀರು – ಸೆ.6ಕ್ಕೆ ಪ್ರಾಯೋಗಿಕವಾಗಿ ನೀರು ಹರಿವು

ಭದ್ರಾ ನೀರಿಗಾಗಿ ರೈತರು ಹಾಗೂ ನೀರಾವರಿ ಹೋರಾಟಗಾರರು ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಕೋಟೆನಾಡಿನ ಜನರ ಬಹುದಿನಗಳ ಕನಸು ಇದೀಗ ನನಸಾಗುವ ಹೊಸ್ತಿಲಲ್ಲಿದೆ. ಹೀಗಾಗಿ ಕೋಟೆನಾಡಿನ ಜನರು, ರೈತರು ಹಾಗೂ ಹೋರಾಟಗಾರರ ಮುಖದಲ್ಲಿ ಸಂಭ್ರಮ ಮನೆ ಮಾಡಿದೆ.
ಸಾಕ್ಷಾತ್ಕಾರಗೊಳ್ಳುತ್ತಿದೆ ದಶಕಗಳ ಕನಸು: ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಟಿ. ರಘುಮೂರ್ತಿ, ಇಂದು ಇತಿಹಾಸದಲ್ಲಿ ನೆನಪಿಡಬೇಕಾದ ಮಹತ್ವದ ದಿನ. ಐದಾರು ದಶಕಗಳಿಂದ ಬಯಲುಸೀಮೆ ಜನರು ಕಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಕನಸು ಇಂದು ನನಸಾಗುತ್ತಿದೆ. ಈ ಯೋಜನೆಗೆ ಮುನ್ನುಡಿ ಬರೆದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ. ಕೃಷ್ಣ ಹಾಗೂ ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಸೇರಿದಂತೆ, ಯೋಜನೆಯ ಸಾಕಾರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಹೋರಾಟಗಾರರು, ರೈತರು, ಸ್ವಾಮೀಜಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾದಿಂದ 17.4 ಟಿ.ಎಂ.ಸಿ ಹಾಗೂ ಭದ್ರಾದಿಂದ 12.5 ಟಿ.ಎಂ.ಸಿ ಸೇರಿ ಒಟ್ಟು 29.9 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ. ಪ್ರಸ್ತುತ ಯೋಜನೆ ವೆಚ್ಚ ರೂ.21,500 ಕೋಟಿ ಆಗಿದೆ. ಯೋಜನೆಯಿಂದ ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ 4 ಜಿಲ್ಲೆಗಳ 12 ತಾಲೂಕುಗಳಿಗೆ ಅನುಕೂಲವಾಗಲಿದೆ. ಒಟ್ಟು 2,25,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಒಟ್ಟು 367 ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆ ಇದಾಗಿದೆ. ತುಂಗಾದಿಂದ ಬರಬೇಕಾದ 17.4 ಟಿ.ಎಂ.ಸಿ ನೀರಿನ ಕಾಮಗಾರಿಗಳು ಎರಡು ಟವರ್ ಕೆಲಸ ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷಾತೀತವಾಗಿ ಯೋಜನೆಗೆ ನೆರವು
ಭದ್ರಾ ಮೇಲ್ದಂಡೆ ಯೋಜನೆಗೆ ಧರಂ ಸಿಂಗ್, ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಿಂದ ಹಿಡಿದು ಸಿದ್ದರಾಮಯ್ಯನವರ ಸರ್ಕಾರದವರೆಗೆ ಹಲವು ಹಂತಗಳಲ್ಲಿ ಅನುದಾನ ಹಂಚಿಕೆಯಾಗಿದೆ.
ಆರಂಭದಲ್ಲಿ ರೂ.2,814 ಕೋಟಿಗೆ ಚಾಲನೆ ಸಿಕ್ಕ ಈ ಯೋಜನೆಗೆ, ಆನಂತರದ ಸಮ್ಮಿಶ್ರ ಸರ್ಕಾರದಲ್ಲಿ ರೂ.5,500 ಕೋಟಿ, 2013-18ರ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ರೂ.12,500 ಕೋಟಿ ಹಾಗೂ 2022ರ ಸರ್ಕಾರದ ಅವಧಿಯಲ್ಲಿ ರೂ.21,500 ಕೋಟಿಗೆ ಪರಿಷ್ಕೃತ ಮುಂಜೂರಾತಿ ದೊರೆತಿದೆ. ಯೋಜನೆ ಅನುಷ್ಠಾನಗೊಳ್ಳಲು ಎಲ್ಲಾ ಪಕ್ಷಗಳು ಪಕ್ಷಾತೀತವಾಗಿ ನೆರವು ನೀಡಿದನ್ನು ಸಚಿವ ಟಿ.ರಘುಮೂರ್ತಿ ಸ್ಮರಿಸಿದರು.
11,500 ಕೋಟಿ ರೂ. ವೆಚ್ಚ
ಯೋಜನೆಗೆ ಇದುವರೆಗೆ ಸುಮಾರು ರೂ.11,500 ಕೋಟಿ ವೆಚ್ಚವಾಗಿದ್ದು, ಪ್ರಸ್ತುತ ಕೆರೆಗಳಿಗೆ ನೀರು ತುಂಬಿಸುವ ಕೆಲಸಗಳು ನಡೆಯುತ್ತಿವೆ. ಕೇಂದ್ರ ಸರ್ಕಾರವು 2022-23ರ ಆಯವ್ಯಯದಲ್ಲಿ ಭರವಸೆ ನೀಡಿದ್ದ ರೂ.5,300 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದರೆ ಕಾಮಗಾರಿ ಇನ್ನು ಹೆಚ್ಚಿನ ವೇಗ ಪಡೆದುಕೊಳ್ಳುತ್ತಿತ್ತು. ಇಂದಿಗೂ ಕೇಂದ್ರದ ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಎದುರಾಗಿದ್ದ ಹಲವು ಅಡೆತಡೆಗಳನ್ನು ನಿವಾರಿಸುವಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತೋರಿದ ಬದ್ಧತೆಯನ್ನು ಅವರು ಶ್ಲಾಘಿಸಿದರು.

ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಪ್ರಸ್ತುತ ಮುಖ್ಯಮಂತ್ರಿಗಳು, ತರೀಕೆರೆ ಶಾಸಕರಾದ ಶ್ರೀನಿವಾಸ್ ಹಾಗೂ ಇತರ ಜನಪ್ರತಿನಿಧಿಗಳೊಂದಿಗೆ ಸ್ವತಃ ಸ್ಥಳಕ್ಕೆ ಭೇಟಿ ನೀಡಿ, ರೈತರೊಂದಿಗೆ ಮಾತುಕತೆ ನಡೆಸಿ ಯೋಜನೆಯಲ್ಲಿದ್ದ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಭದ್ರಾ ಜಲಾಶಯದ ವ್ಯಾಪ್ತಿಯ ದಾವಣಗೆರೆ ಮತ್ತು ಇತರ ಭಾಗದ ಜನಪ್ರತಿನಿಧಿಗಳು ಹಾಗೂ ರೈತ ಸಂಘದ ಮುಖಂಡರಿಗೆ ನೀರಿನ ಲಭ್ಯತೆ ಬಗ್ಗೆ ಆತಂಕವಿತ್ತು. ಆದರೆ, ಇಡೀ ರಾಜ್ಯದ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವ ಚೆಲುವರಾಯಸ್ವಾಮಿ ಅವರು ಬರಪೀಡಿತ ನಾಲ್ಕು ಜಿಲ್ಲೆಗಳಿಗೆ ನ್ಯಾಯ ಒದಗಿಸಲು ನೀರಿನ ಹಂಚಿಕೆ ಮಾಡಿದ್ದಾರೆ.
2028ರ ವೇಳೆ ಯೋಜನೆ ಪೂರ್ಣವಾಗಲಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆಯಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ. 2028ರ ವೇಳೆಗೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸುವಂತೆ ಸದನದಲ್ಲೂ ಒತ್ತಾಯಿಸಲಾಗಿದೆ. ನಾಲ್ಕು ಜಿಲ್ಲೆಗಳ ರೈತರ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಶ್ರಮಿಸಬೇಕಿದೆ.
ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಿ ಶ್ರಮಿಸಿದ ದಿವಂಗತ ಡಿ.ಸುಧಾಕರ್, ಟಿ ಬಿ ಜಯಚಂದ್ರ ಸೇರಿದಂತೆ ಎಲ್ಲಾ ಹಿರಿಯ ನಾಯಕರ ಕೊಡುಗೆಯನ್ನು ಸಚಿವರು ಈ ಸಂದರ್ಭದಲ್ಲಿ ಸ್ಮರಿಸಿದರು. ಇಂದಿನಿಂದ ಹರಿದ ನೀರು ಇನ್ನು ಒಂದು ವಾರದಲ್ಲಿ ಗೋನೂರು ತಲುಪಲಿದ್ದು, ನೀರು ಬಂದ ನಂತರ ಈ ಯೋಜನೆಯ ಸಾಕಾರಕ್ಕೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿಗಳು ಹಾಗೂ ಎಲ್ಲಾ ನಾಯಕರನ್ನು ಆಹ್ವಾನಿಸಿ, ಪಕ್ಷಾತೀತವಾಗಿ ಚಿತ್ರದುರ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ತರೀಕೆರೆ ಶಾಸಕ ಶ್ರೀನಿವಾಸ್, ಶಿರಾ ಶಾಸಕ ಟಿ.ಬಿ. ಜಯಚಂದ್ರ ಸೇರಿದಂತೆ ಹಲವು ಗಣ್ಯರು ಈ ವೇಳೆ ಉಪಸ್ಥಿತರಿದ್ದರು. ಇದನ್ನೂ ಓದಿ: ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯಲ್ಲಿ ಬಿರುಕು – ಜನರಲ್ಲಿ ಹೆಚ್ಚಿದ ಅತಂಕ
