ಶಿವಮೊಗ್ಗ: ರಿಪ್ಪನ್‌ಪೇಟೆಯ ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಂಬಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ಅನಾಮಧೇಯ ಕಾರೊಂದು ನಿಗೂಢವಾಗಿ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಪರಿಶೀಲನೆ ನಡೆಸಿದಾಗ ಈ ಕಾರು ಕುಡುಮಲ್ಲಿಗೆ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಮದನ್ ಅವರಿಗೆ ಸೇರಿದ್ದು ಎಂದು ಗೊತ್ತಾಗಿದೆ.
ಪತ್ತೆಯಾದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕೀ ಬಿಡಲಾಗಿದೆ. ಕಾರಿನ ಒಳಭಾಗದಲ್ಲಿ ಮದನ್ ಅವರ ಮೊಬೈಲ್ ಫೋನ್ ಹಾಗೂ ಸೊಸೈಟಿಗೆ ಸೇರಿದ ಮಹತ್ವದ ಲೆಕ್ಕದ ಪುಸ್ತಕಗಳು ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ಅರಣ್ಯ ಸಂಚಾರಿದಳದಿಂದ ದಿಢೀರ್ ದಾಳಿ – 21 ಕೆಜಿ ಜಿಂಕೆ ಮಾಂಸ ವಶ, ಅರೋಪಿಗಳು ಪರಾರಿ
ಭ್ರಷ್ಟಾಚಾರದ ಆರೋಪ
ಇತ್ತೀಚೆಗಷ್ಟೇ ಕುಡುಮಲ್ಲಿಗೆ ಸೊಸೈಟಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ಆರ್ಥಿಕ ಅವ್ಯವಹಾರಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಆರ್ಥಿಕ ಹಗರಣದ ಹಿನ್ನೆಲೆಯಲ್ಲಿ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಈ ಆರೋಪಗಳ ಬೆನ್ನಲ್ಲೇ ಸೊಸೈಟಿಯ ಸಿಇಒ ಮದನ್ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೂಲಗಳ ಪ್ರಕಾರ, ಮದನ್ ಅವರು ಶುಕ್ರವಾರದಂದು ತೀರ್ಥಹಳ್ಳಿಯಲ್ಲಿರುವ ತಮ್ಮ ನಿವಾಸದಿಂದ ಹೊರಬಂದಿದ್ದರು. ಆದರೆ, ಇದೀಗ ಅವರ ಕಾರು ನಿರ್ಜನ ಅರಣ್ಯ ಪ್ರದೇಶದಲ್ಲಿ ದಿಢೀರ್ ಪತ್ತೆಯಾಗಿದೆ. ಅವರು ಎಲ್ಲಿಗೆ ತೆರಳಿದ್ದಾರೆ ಎಂಬ ಬಗ್ಗೆ ಯಾವುದೇ ನಿಖರ ಸುಳಿವು ಲಭ್ಯವಾಗಿಲ್ಲ. ಅವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿದ್ಯುತ್ ಹಾಯಿಸಿ ಎರಡು ಜಿಂಕೆಗಳ ಬೇಟೆ – ಮೂವರು ಆರೋಪಿಗಳು ಅರೆಸ್ಟ್
