ಕೋಲಾರ: 6 ವರ್ಷದ ಬಾಲಕಿಯೊಂದಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ. ಪ್ರಕರಣಲ್ಲಿ ಓರ್ವ ವ್ಯಕ್ತಿ ಮಾತ್ರವಲ್ಲ ಇನ್ನೂ ಇಬ್ಬರೂ ಕಾಮುಕರು ಭಾಗಿಯಾಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಏಕಾಏಕಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದ ಕಾರಣ, ಕೋಲಾರದಲ್ಲಿ (Kolara) ಕೆಲಕಾಲ ಬಿಗುವಿನ ವಾತವಾರಣ ನಿಮಾರ್ಣ ಆಯಿತು. ಪ್ರಕರಣ ದಾಖಲಿಸಿದ ಬಳಿಕ ಪ್ರತಿಭಟನೆ (Protest) ಹಿಂಪಡೆಯಲಾಯಿತು.
ಅಪ್ರಾಪ್ತ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಕೇಸ್‌ನಲ್ಲಿ ಪೋಷಕರು ನಿಗಿನಿಗಿ ಕೆಂಡವಾಗಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ಇದೇ ವಿಚಾರಕ್ಕೆ ಕಾದಕಬ್ಬಿಣದಂತೆ ಆಗಿದೆ. ಒಂದು ಕಡೆ ಜಮಾಯಿಸಿರುವ ನೂರಾರು ಜನ, ಅವರ ಮನವೊಲಿಸಲು ಯತ್ನಿಸುತ್ತಿರುವ ಪೊಲೀಸರು. ಮತ್ತೊಂದೆಡೆ ರಸ್ತೆ ತಡೆ ಮಾಡಿ ಆಕ್ರೋಶ ಹೊರಹಾಕುತ್ತಿರುವ ಜನರು. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿ ಎದುರಿನ ಈ ದೃಶ್ಯಗಳು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ.

ಹೌದು, 37 ವರ್ಷದ ವ್ಯಕ್ತಿಯೊಬ್ಬ 6 ವರ್ಷದ ಅಪ್ರಾಪ್ತ ಬಾಲಕಿ ಜೊತೆ ಆಸಭ್ಯವಾಗಿ ವರ್ತಿಸಿದ್ದ ಎಂಬ ಕೇಸ್‌ನಲ್ಲಿ ಮತ್ತಿಬ್ಬರು ಭಾಗಿಯಾದ ಆರೋಪ ಕೇಳಿಬಂದಿದೆ. ಆರೋಪಿ ರಾಘವೇಂದ್ರ ಎಂಬಾತ ನಂದಿನಿ ಹಾಲಿನ ಪಾರ್ಲರ್ ನಡೆಸುತ್ತಿದ್ದು, ಅಲ್ಲಿಗೆ ಹಾಲು ತೆಗೆದುಕೊಂಡು ಹೋಗಲು ಬಂದಿದ್ದ ಬಾಲಕಿ ಜೊತೆಗೆ ಅಸಭ್ಯ ವರ್ತಿಸಿದ್ದಾನೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಕಳೆದ ಸೆಪ್ಟೆಂಬರ್ 3ರಂದು ರಾತ್ರೋರಾತ್ರಿ ಪ್ರತಿಭಟನೆ ನಡೆಸಲಾಗಿದ್ದು, ಬಳಿಕ ಆರೋಪಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ರು. ಆದ್ರೆ, ಈ ಪ್ರಕರಣದಲ್ಲಿ ಆರೋಪಿ ರಾಘವೇಂದ್ರ ಜೊತೆಗೆ ಮತ್ತೊಬ್ಬ ಆರೋಪಿ ಯೋಗೀಶ್ ಕೂಡಾ ಭಾಗಿಯಾಗಿರೋ ಆರೋಪ ಕೇಳಿ ಬಂದಿದೆ. ಈ ಆರೋಪಿಯನ್ನೂ ಸಹ ಬಂಧಿಸಬೇಕು ಅಂತಾ ಬಾಲಕಿಗೆ ಸಂಬಂಧಿಸಿದ ಕೋಮಿನ ಜನರು ಪ್ರತಿಭಟನೆ ನಡೆಸಿದರು.
ಬಂಗಾರಪೇಟೆ ನಗರದ ಆಸ್ಪತ್ರೆ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಹಿಳೆಯರು ರಸ್ತೆ ತಡೆ ನಡೆಸಿದರು. ಈ ಘಟನೆ ನಡೆದು ಮೂರು ದಿನವಾದ್ರು ಕೇವಲ ಓರ್ವ ಆರೋಪಿ ಬಂಧಿಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಧಾವಿಸಿದ ಮಾಜಿ ಸಂಸದ ಎಸ್. ಮುನಿಸ್ವಾಮಿ ಸಹ ಮೂವರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಒತ್ತಾಯಿಸಿದರು.

ಈ ಸುದ್ದಿ ಹರಡಿದ ತಕ್ಷಣ ನೂರಾರು ಜನರು ಆಸ್ಪತ್ರೆ ಮತ್ತು ಪೊಲೀಸ್ ಠಾಣೆಯ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಉದ್ವಿಗ್ನತೆ ಹೆಚ್ಚಿದಂತೆ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ರು. ಈ ವೇಳೆ ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಂಶು ರಜಪೂತ್ ಭರವಸೆ ನೀಡಿದರು.
ಈ ಪ್ರಕರಣದಲ್ಲಿ ಕೇವಲ ಒಬ್ಬ ವ್ಯಕ್ತಿಯ ಮೇಲೆ ಕೇಸ್ ದಾಖಲಾಗಿದೆ. ಇನ್ನೊಬ್ಬ ಆರೋಪಿ ಹೆಸರು ಸೇರಿಸಿದ ಹಿನ್ನೆಲೆ ಪರಿಸ್ಥಿತಿ ಕೊಂಚ ತಿಳಿಯಾಗಿದೆ. ತನಿಖೆ ನಂತರ ಪ್ರಕರಣದ ನಿಜಸ್ವರೂಪ ಹೊರಬರಬೇಕಿದೆ.
