ರಾಯ್ಪುರ: 2013 ರಲ್ಲಿ ಬಸ್ತಾರ್ನಲ್ಲಿ (Bastar) ಕಾಂಗ್ರೆಸ್ ನಾಯಕರ ಮೇಲೆ ನಡೆದ ಮಾರಕ ಮಾವೋವಾದಿ ದಾಳಿಯಲ್ಲಿ (Maoist Attack) 10 ಜನರಿಗೆ ಶಿಕ್ಷೆ ವಿಧಿಸಲಾಗಿದೆ.
29 ಜನರನ್ನು ಬಲಿತೆಗೆದುಕೊಂಡ ಮತ್ತು ರಾಜ್ಯದ ಕಾಂಗ್ರೆಸ್ ನಾಯಕತ್ವವನ್ನೇ ನಾಶಮಾಡಿದ್ದ 2013 ರ ಝೀರಾಮ್ ಕಣಿವೆಯ ಮಾವೋವಾದಿ ದಾಳಿಗೆ ಸಂಬಂಧಿಸಿದಂತೆ ಛತ್ತೀಸ್ಗಢದ ಬಸ್ತಾರ್ ಪ್ರದೇಶದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯವು 10 ಜನರನ್ನು ದೋಷಿಗಳು ಎಂದು ತೀರ್ಪು ನೀಡಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಪಾಕ್ ಲಷ್ಕರ್ ಕಮಾಂಡರ್ ಬಲಿ
ಝೀರಾಮ್ ಕಣಿವೆಯ ದಾಳಿಯನ್ನು ಎಡಪಂಥೀಯ ಉಗ್ರವಾದಕ್ಕೆ ಸಂಬಂಧಿಸಿದ ಹಿಂಸಾಚಾರದ ಅತ್ಯಂತ ಕ್ರೂರ ಉದಾಹರಣೆಗಳಲ್ಲಿ ಒಂದೆಂದು ಭದ್ರತಾ ಪಡೆಗಳು ವರ್ಗೀಕರಿಸಿವೆ. ಈ ಘಟನೆ 2013ರ ಮೇ 25 ರಂದು ಬಸ್ತಾರ್ ಜಿಲ್ಲೆಯ ದರ್ಭಾ ಪೊಲೀಸ್ ಠಾಣೆ ವ್ಯಾಪ್ತಿಯ ಝೀರಾಮ್ ಕಣಿವೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯಿತು. ಮಾವೋವಾದಿಗಳು ಕಾಂಗ್ರೆಸ್ ನಾಯಕರ ಬೆಂಗಾವಲು ಪಡೆಯ ಮೇಲೆ ಹೊಂಚುದಾಳಿ ನಡೆಸಿದ್ದರು.
ಪರಿವತ್ರಂ ರ್ಯಾಲಿಯಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಕಾಂಗ್ರೆಸ್ ನಾಯಕರು ದಾಳಿಗೊಳಗಾಗಿದ್ದರು. ಆಗಿನ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಂದಕುಮಾರ್ ಪಟೇಲ್, ಅವರ ಪುತ್ರ ದಿನೇಶ್, ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಮಹೇಂದ್ರ ಕರ್ಮ, ಮಾಜಿ ಕೇಂದ್ರ ಸಚಿವ ವಿದ್ಯಾ ಚರಣ್ ಶುಕ್ಲಾ ಮತ್ತು ಮಾಜಿ ಶಾಸಕ ಉದಯ್ ಮುದ್ಲಿಯಾರ್ ಮುಂತಾದ ಹಿರಿಯ ಕಾಂಗ್ರೆಸ್ ನಾಯಕರು ದಾಳಿಗೆ ಬಲಿಯಾಗಿದ್ದರು. ಹಲವಾರು ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯೂ ಸಾವನ್ನಪ್ಪಿದ್ದರು. ಇದನ್ನೂ ಓದಿ: ತೈಲ ಕೇಂದ್ರ ಖಾರ್ಗ್ ದ್ವೀಪದ ಬಳಿಯೇ ಇರಾನಿಯನ್ ಟ್ಯಾಂಕರ್ ಮೇಲೆ ಅಮೆರಿಕ ದಾಳಿ
ಜಗದಲ್ಪುರದ ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯದ ನ್ಯಾಯಾಧೀಶ ಅಭಯ್ ಸಿಂಗ್ ರಜಪೂತ್, ಇಬ್ಬರು ಮಹಿಳೆಯರು ಸೇರಿದಂತೆ 10 ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಸೆ.16 ರಂದು ಪ್ರಕಟಿಸುವ ಸಾಧ್ಯತೆ ಇದೆ.
