ರಾಂಚಿ: ಜಾರ್ಖಂಡ್‌ನ (Jharkhand ) ಗೋದ್ಡಾ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಬೂತ್ ಮಟ್ಟದ ಏಜೆಂಟ್ (BLA) ಒಬ್ಬನನ್ನ ಪೊಲೀಸರು ಬಂಧಿಸಿದ್ದಾರೆ.
ವಿನಯ್ ಕುಮಾರ್ ಮಂಡಲ್ ಬಂಧಿತ ಬಿಜೆಪಿ ಏಜೆಂಟ್. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ ಸುಮಾರು 200 ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಿ, ಮತದಾರರ ಹೆಸರುಗಳನ್ನ ಪಟ್ಟಿಯಿಂದ ತೆಗೆದುಹಾಕಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಬಳಿಕ ಏಜೆಂಟ್‌ನನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಗೋದ್ಡಾ ಬ್ಲಾಕ್‌ನ ಪಚ್ರುಖಿ ಗ್ರಾಮದ ಬೂತ್ ಸಂಖ್ಯೆ 231ರ ಬೂತ್ ಮಟ್ಟದ ಅಧಿಕಾರಿ (BLO) ಹಾಗೂ ದೂರುದಾರರು ನೀಡಿರುವ ಮಾಹಿತಿಯ ಪ್ರಕಾರ, ವಿನಯ್ ಮಂಡಲ್ ಸಲ್ಲಿಸಿದ ಎಲ್ಲಾ ಅರ್ಜಿಗಳೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮತದಾರರ ಹೆಸರಿನಲ್ಲಿದ್ದವು. ಹೆಸರುಗಳನ್ನ ಅಳಿಸಲು ಅರ್ಜಿ ಸಲ್ಲಿಸಿದವರಲ್ಲಿ BLO ಸಜಿದಾ ಬೀಬಿ ಹಾಗೂ ಅವರ ಪತಿಯ ಹೆಸರೂ ಸೇರಿವೆ.

ವಿನಯ್ ವಿರುದ್ಧ ಸೆಪ್ಟೆಂಬರ್ 3ರಂದು ಗೋದ್ಡಾ ಮುಫಸ್ಸಿಲ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿತ್ತು. ಆತನನ್ನ ‘BLA 2’ ಎಂದು ಗುರುತಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ (BNS) ನಕಲಿ ದಾಖಲೆ ಸೃಷ್ಟಿ ಹಾಗೂ ಶಾಂತಿ ಭಂಗಕ್ಕೆ ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ, ಮತದಾರರ ಪಟ್ಟಿಯ ಸಿದ್ಧತೆ ವೇಳೆ ಸುಳ್ಳು ಘೋಷಣೆಗೆ ಸಂಬಂಧಿಸಿದ ಜನಪ್ರತಿನಿಧಿತ್ವ ಕಾಯ್ದೆಯ ಸೆಕ್ಷನ್ 31ರ ಅಡಿಯಲ್ಲೂ ಪ್ರಕರಣ ದಾಖಲಾಗಿದೆ.
ದೂರುದಾರ ಮುಕ್ಕರಂ ಅನ್ಸಾರಿ ಕೂಡ ಬೂತ್ ಸಂಖ್ಯೆ 231ರ ಮತದಾರರಾಗಿದ್ದು, ವಿನಯ್ ಸಲ್ಲಿಸಿದ್ದ ಫಾರ್ಮ್-7 ಅರ್ಜಿಗಳಲ್ಲಿ ಅವರ ಹೆಸರೂ ಇದೆ ಎನ್ನಲಾಗಿದೆ. ತಮ್ಮ ದೂರಿನಲ್ಲಿ ಅನ್ಸಾರಿ, ಮಂಡಲ್ ಫಾರ್ಮ್-7 ಸಲ್ಲಿಸಿರುವ ಎಲ್ಲ ಮತದಾರರೂ ನಿಜವಾದ ಮತದಾರರು ಎಂದು ತಿಳಿಸಿದ್ದಾರೆ.
ಅನ್ಸಾರಿ ನೀಡಿದ ಮಾಹಿತಿಯ ಪ್ರಕಾರ, ಮಂಡಲ್ ಬೂತ್ ಸಂಖ್ಯೆ 231ಕ್ಕೆ ಸೇರಿದ ಮತದಾರರ ಹೆಸರಿನ ಸುಮಾರು 200 ಫಾರ್ಮ್-7 ಅರ್ಜಿಗಳನ್ನು BLO ಸಜಿದಾ ಬೀಬಿ ಅವರಿಗೆ ಸಲ್ಲಿಸಿದ್ದರು. ಈ ಅರ್ಜಿಗಳ ಮೂಲಕ ನಮ್ಮ ಹೆಸರುಗಳನ್ನ ಮತದಾರರ ಪಟ್ಟಿಯಿಂದ ತೆಗೆಸುವ ಹುನ್ನಾರ ನಡೆಸಿದ್ದರು. ವಿಷಯ ತಿಳಿದ ಬಳಿಕ ನಾವು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.
ನಂತರ ಮಂಡಲ್ ಅವರನ್ನು ಗ್ರಾಮಕ್ಕೆ ಕರೆಸಿ ಅರ್ಜಿಗಳ ಕುರಿತು ವಿಚಾರಣೆ ನಡೆಸಲಾಯಿತು. ಬಿಜೆಪಿ BLAಗಳ ಸಭೆಯ ಬಳಿಕ ಈ ಫಾರ್ಮ್‌ಗಳನ್ನು ತಮಗೆ ನೀಡಲಾಗಿತ್ತು ಎಂದು ಮಂಡಲ್ ಹೇಳಿದ್ದಾಗಿ ಅವರು ತಿಳಿಸಿದ್ದಾರೆ.
ಆಗಸ್ಟ್ 29ರಂದು ಮಂಡಲ್ ಸುಮಾರು 200 ಫಾರ್ಮ್-7 ಅರ್ಜಿಗಳನ್ನು ತಮ್ಮ ಬಳಿ ತಂದಿದ್ದರು ಎಂದು BLO ಸಜಿದಾ ಬೀಬಿ ದೃಢಪಡಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.
