– ನಿರ್ಣಯದ ಪರ ಮತ ಹಾಕಿದ ಭಾರತ
– ನಿರ್ಣಯದ ವಿರುದ್ಧ ಅಮೆರಿಕ ಮತ
ನ್ಯೂಯಾರ್ಕ್: ವಿಶ್ವದ ಖಂಡಗಳ ನಿಜವಾದ ಭೂವಿಸ್ತೀರ್ಣವನ್ನು ನಿಖರವಾಗಿ ಬಿಂಬಿಸುವ ನೂತನ ವಿಶ್ವ ಭೂಪಟವನ್ನು ಅಳವಡಿಸಿಕೊಳ್ಳಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸಿದೆ. ನೂತನ ನಕ್ಷೆಯಲ್ಲಿ ಆಫ್ರಿಕಾ(Africa) ಖಂಡದ ವಿಸ್ತೀರ್ಣ ದೊಡ್ಡದಾಗಿ ಕಾಣಿಸಲಿದ್ದು, ಉತ್ತರ ಅಮೆರಿಕ ಮತ್ತು ಯುರೋಪ್ ಖಂಡಗಳ ಗಾತ್ರ ಕಿರಿದಾಗಲಿದೆ.
ಭೂಖಂಡಗಳ ನೈಜ ಗಾತ್ರವನ್ನು ತೋರಿಸುವ ಉದ್ದೇಶದಿಂದ ಮಂಡಿಸಲಾದ ಈ ನಿರ್ಣಯದ ಪರವಾಗಿ ಭಾರತ ಸೇರಿದಂತೆ 164 ದೇಶಗಳು ಮತ ಚಲಾಯಿಸಿದವು. ಅಮೆರಿಕ ನಿರ್ಣಯದ ವಿರುದ್ಧ ಮತ ಚಲಾಯಿಸಿದರೆ, ಆರು ದೇಶಗಳು ಮತದಾನದಿಂದ ದೂರ ಉಳಿದವು.

ಈಕ್ವಲ್ ಅರ್ಥ್ ಕಾರ್ಟೋಗ್ರಾಫಿಕ್ ಪ್ರೊಜೆಕ್ಷನ್ (Equal Earth Projection) ಎಂದು ಕರೆಯಲ್ಪಡುವ ಈ ಹೊಸ ಭೂಪಟವು, 1569ರಲ್ಲಿ ಫ್ಲೆಮಿಶ್ ನಕ್ಷೆಗಾರ ಗೆರಾರ್ಡಸ್ ಮೆರ್ಕೆಟರ್ ಸಮುದ್ರಯಾನಕ್ಕಾಗಿ ವಿನ್ಯಾಸಗೊಳಿಸಿದ್ದ ಸಾಂಪ್ರದಾಯಿಕ ‘ಮೆರ್ಕೆಟರ್ ಪ್ರೊಜೆಕ್ಷನ್’ ಬದಲಿಗೆ ಜಾರಿಗೆ ಬರಲಿದೆ. ಹಳೆಯ ಮೆರ್ಕೆಟರ್ ನಕ್ಷೆಯಲ್ಲಿ ಭೂಮಿಯ ಆಕಾರ ಮತ್ತು ಕೋನಗಳಿಗೆ ಆದ್ಯತೆ ನೀಡಿದ್ದರಿಂದ ಉತ್ತರ ಭಾಗದ ಯುರೋಪ್ ಮತ್ತು ಉತ್ತರ ಅಮೆರಿಕ ದೊಡ್ಡದಾಗಿಯೂ, ಸಮಭಾಜಕ ವೃತ್ತದ ಸಮೀಪವಿರುವ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಅತ್ಯಂತ ಚಿಕ್ಕದಾಗಿಯೂ ಗೋಚರಿಸುತ್ತಿದ್ದವು. ಇದನ್ನೂ ಓದಿ: ಬಡ್ಡಿದರ ಇಳಿಕೆಗೆ ಫೆಡರಲ್ ರಿಸರ್ವ್ಗೆ ಟ್ರಂಪ್ ಪಟ್ಟು- ಮತ್ತೆ ವ್ಯಾಪಾರ ಸಮರದ ಎಚ್ಚರಿಕೆ

2018ರಲ್ಲಿ ನಕ್ಷೆಗಾರರ ತಂಡವೊಂದು ಸಿದ್ಧಪಡಿಸಿದ ‘ಈಕ್ವಲ್ ಅರ್ಥ್’ ನಕ್ಷೆಯು ಆಫ್ರಿಕಾ, ಲ್ಯಾಟಿನ್ ಅಮೆರಿಕ, ದಕ್ಷಿಣ ಏಷ್ಯಾ ಮತ್ತು ಓಷಿಯಾನಿಯಾಗಳ ನೈಜ ವಿಸ್ತೀರ್ಣವನ್ನು ನಿಖರವಾಗಿ ತೋರಿಸುತ್ತದೆ.
ನಿರ್ಣಯವನ್ನು ಪ್ರಸ್ತಾಪಿಸಿ ಮಾತನಾಡಿದ ಟೋಗೋ ದೇಶದ ವಿದೇಶಾಂಗ ಸಚಿವ ರಾಬರ್ಟ್ ಡಸ್ಸೆ, “ಭೂಪಟಗಳು ಕೇವಲ ಚಿತ್ರಗಳಲ್ಲ, ಅವು ಶಿಕ್ಷಣ, ಕಲ್ಪನೆ ಮತ್ತು ಜಾಗತಿಕ ಗ್ರಹಿಕೆಗಳನ್ನು ರೂಪಿಸುತ್ತವೆ. ತಪ್ಪಾದ ನಕ್ಷೆಗಳು ತಲೆಮಾರುಗಳಿಂದ ತಪ್ಪು ಸಂದೇಶ ರವಾನಿಸುತ್ತಿವೆ” ಎಂದು ಸಮರ್ಥಿಸಿಕೊಂಡರು.

ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ ಅಮೆರಿಕದ ಪ್ರತಿನಿಧಿ ಯಾರಿನಾ ಫೆರೆನ್ಸೆವಿಚ್, “ಜಾಗತಿಕವಾಗಿ ಜ್ವಲಂತ ಸಮಸ್ಯೆಗಳಿರುವಾಗ ವಿಶ್ವಸಂಸ್ಥೆಯು 16ನೇ ಶತಮಾನದ ಭೂಪಟಗಳ ಚರ್ಚೆಯಲ್ಲಿ ಕಾಲಹರಣ ಮಾಡುತ್ತಿದೆ. ಇಂತಹ ನಡೆಗಳಿಂದಲೇ ಸಂಸ್ಥೆಯು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ” ಎಂದು ಕಿಡಿಕಾರಿದರು.
ಈ ನಿರ್ಣಯವನ್ನು ಬೆಂಬಲಿಸಿರುವ ಫ್ರಾನ್ಸ್, ತಾನು ಇನ್ಮುಂದೆ ಹಳೆಯ ಮೆರ್ಕೆಟರ್ ನಕ್ಷೆಯನ್ನು ಬಳಸುವುದಿಲ್ಲ ಎಂದು ಘೋಷಿಸಿದೆ. ಈ ಕುರಿತು ಮಾತನಾಡಿದ ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೊಯೆಲ್ ಬಾರೋಟ್, “ನಕ್ಷೆ ಬದಲಾಯಿಸುವುದರಿಂದ ಜಗತ್ತು ಬದಲಾಗುವುದಿಲ್ಲ ನಿಜ, ಆದರೆ ತಪ್ಪು ಪ್ರಾತಿನಿಧ್ಯವನ್ನು ಸರಿಪಡಿಸುವುದು ಸತ್ಯದ ಪರವಾದ ಮಹತ್ವದ ಹೆಜ್ಜೆಯಾಗಿದೆ” ಎಂದು ತಿಳಿಸಿದರು.
India welcomes the UN’s “correct the map” resolution.
Indian diplomat Raghoo Puri says, “equal area projections are relevant because they preserve the relative sizes, areas of continental/ territorial land masses” https://t.co/4Nox7Bjs6F pic.twitter.com/PIgmJdLGOV
— Sidhant Sibal (@sidhant) September 5, 2026
