ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ (Hassan) ಅಧಿದೇವತೆ ಶ್ರೀ ಹಾಸನಾಂಬ (Hasanamba) ದೇವಿ ಗರ್ಭಗುಡಿ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದೆ. ಇಂದು (ಅ.29) ಮಧ್ಯಾಹ್ನ 12 ಗಂಟೆ ನಂತರ ಶಾಸ್ತ್ರೋಕ್ತವಾಗಿ ದೇವಾಲಯದ ಬಾಗಿಲು ತೆರೆಯಲಾಗುತ್ತದೆ.
ಇಂದಿನಿಂದ ನ.11 ರವರೆಗೆ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಯ ಪ್ರಯುಕ್ತ ಗುರುವಾರ ಮಧ್ಯಾಹ್ನ ಅರಸು ವಂಶಸ್ಥ ನಂಜರಾಜೇಅರಸ್ ಗೊನೆಯುಳ್ಳ ಬಾಳೆ ಕಂಬ ಕಡಿದ ಬಳಿಕ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಗರ್ಭಗುಡಿ ಬಾಗಿಲು ತೆರೆದ ವೇಳೆ ಕಳೆದ ವರ್ಷ ಹಚ್ಚಿದ ದೀಪ ಉರಿಯುತ್ತಿರುತ್ತದೆ. ಹೂ ಬಾಡಿರುವುದಿಲ್ಲ, ನೈವೇದ್ಯ ಹಳಸಿರುವುದಿಲ್ಲ. ಇದನ್ನೂ ಓದಿ: ಗುರುವಾರ ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ಓಪನ್, ಒಂದು ಗೋಲ್ಡ್ ಪಾಸ್ನಲ್ಲಿ ಒಬ್ಬರಿಗೆ ಮಾತ್ರ ದರ್ಶನ: ಶಿವಲಿಂಗೇಗೌಡ
ಈ ದಿನ ಗರ್ಭಗುಡಿ (Hasanamba Temple) ಬಾಗಿಲು ತೆರೆದ ನಂತರ ಸಾರ್ವಜನಿಕರಿಗೆ ದೇವರ ದರ್ಶನ ಇರುವುದಿಲ್ಲ. ಅ.30 ರಿಂದ ನ.10 ರವರೆಗೆ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇನ್ನೂ ಗರ್ಭಗುಡಿ ಬಾಗಿಲು ತೆರೆಯುವ ವೇಳೆ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ದಲಿಂಗಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಮುಜರಾಯಿ ಖಾತೆ ಸಚಿವ ಬಸಂತಪ್ಪ ಸೇರಿದಂತೆ ಅಧಿಕಾರಿಗಳು ಹಾಗೂ ಗಣ್ಯರು ಇರಲಿದ್ದಾರೆ.
ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ನಗರಸಭೆ ವಸ್ತು ಪ್ರದರ್ಶನದ ಆವರಣದಲ್ಲಿ ಕುಸ್ತಿ, ವಾಲಿಬಾಲ್, ಕಬ್ಬಡಿ ಪಂದ್ಯಾವಳಿ, ರಂಗೋಲಿ ಸ್ಪರ್ಧೆ ಆಯೋಜನೆ ಮಾಡಿದೆ. ಹಳ್ಳಿಕಾರ್, ಅಮೃತ್ಮಹಲ್ ತಳಿಯ ಜಾನುವಾರುಗಳು, ಶ್ವಾನ, ಬೆಕ್ಕು, ಟಗರುಗಳ ಪ್ರದರ್ಶನ ಆಯೋಜನೆ ಮಾಡಲಾಗಿದೆ.
ಭದ್ರತೆಗಾಗಿ ಮೂರು ಪಾಳಿಯಲ್ಲಿ 2000ಕ್ಕೂ ಅಧಿಕ ಪೊಲೀಸರು ಹಾಗೂ ಹೋಮ್ ಗಾರ್ಡ್ಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ದೇವಾಲಯದ ಸುತ್ತ ಸಿಸಿಟಿವಿ ಅಳವಡಿಸಲಾಗಿದೆ. ಧರ್ಮ ದರ್ಶನದ ಸಾಲಿನಲ್ಲಿ ಯಾವುದೇ ನೂಕು-ನುಗ್ಗಲು ಉಂಟಾಗದಂತೆ ಕ್ರಮಕೈಗೊಳ್ಳಲಾಗಿದೆ. ಭಕ್ತರು ಮಳೆಯಿಂದ ನೆನೆಯದಂತೆ ಟೆಂಟ್ ನಿರ್ಮಾಣ ಮಾಡಲಾಗಿದೆ.
ಅ.30ರ ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 1000, 300 ರೂ. ನ ವಿಶೇಷ ದರ್ಶನದ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಖಜಾನೆಯಿಂದ ಭಾರೀ ಭದ್ರತೆಯಲ್ಲಿ ಹಾಸನಾಂಬಾ ದೇವಾಲಯಕ್ಕೆ ಒಡವೆಗಳ ರವಾನೆ
