ಬೆಂಗಳೂರು: ಸ್ಯಾಂಡಲ್ವುಡ್ ನಟ ಧನ್ವೀರ್ಗೆ(Dhanveer Gowda) ಕಾನೂನು ಸಂಕಷ್ಟ ಮತ್ತಷ್ಟು ಬಿಗಿಗೊಂಡಿದೆ. ಜೀವ ಬೆದರಿಕೆ, ನಿಂದನೆ ಮತ್ತು ಶಾಂತಿಭಂಗದ ಆರೋಪಗಳಡಿ ರಾಜರಾಜೇಶ್ವರಿನಗರ(RR Nagara) ಹಾಗೂ ಬಸವೇಶ್ವರನಗರ ಪೊಲೀಸ್ ಠಾಣೆಗಳಲ್ಲಿ ನಟನ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ.
ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದರ್ಶನ್(Darshan) ಪತ್ನಿ ವಿಜಯಲಕ್ಷ್ಮಿ(Vijayalakshmi) ಅವರ ಮ್ಯಾನೇಜರ್ ನಾಗರಾಜ್ ನೀಡಿದ ದೂರಿನನ್ವಯ ಒಂದು ಪ್ರಕರಣ ದಾಖಲಾಗಿದ್ದರೆ, ಬಸವೇಶ್ವರನಗರ ಠಾಣೆಯಲ್ಲಿ ನಿರ್ಮಾಪಕ ಭೋಜರಾಜ ರೈ ಎಂಬುವವರು ನೀಡಿದ ದೂರಿನ ಮೇರೆಗೆ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಕಳೆದ ತಿಂಗಳ 20ರಂದು ಭೋಜರಾಜ್ ಅವರು ನಟ ಧನ್ವೀರ್ ಮನೆಗೆ ತೆರಳಿ ಅಲ್ಲಿಂದ ನಾಗರಾಜ್ ಅವರನ್ನು ಕರೆತಂದಿದ್ದರು ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ನಟ ಧನ್ವೀರ್, ಭೋಜರಾಜ ಅವರಿಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ ಎರಡು ಕಡೆ ಪೊಲೀಸರು ಎನ್ಸಿಆರ್ ದಾಖಲು ಮಾಡಿಕೊಂಡಿದ್ದರು. ಈಗ ಕೋರ್ಟ್ ಸೂಚನೆಯಂತೆ ಎರಡು ಕಡೆ ಬೆದರಿಕೆ ಆರೋಪದಡಿಯಲ್ಲಿ ಎಫ್ ಐಆರ್ ದಾಖಲಾಗಿದೆ.
ಬೆದರಿಕೆ, ಸಾರ್ವಜನಿಕ ಶಾಂತಿಭಂಗ ಹಾಗೂ ನಿಂದನೆಗೆ ಸಂಬಂಧಿಸಿದ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಆರ್.ಆರ್. ನಗರ ಮತ್ತು ಬಸವೇಶ್ವರನಗರ ಪೊಲೀಸರು ಇಂದು ನಟ ಧನ್ವೀರ್ಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕೃತ ನೋಟಿಸ್ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಶೆಡ್ ಬಳಿ ದರ್ಶನ್, ಪವಿತ್ರಾ ಗೌಡ ಬಂದಿರಲಿಲ್ಲ – ಉಲ್ಟಾ ಹೊಡೆದ ಐ ವಿಟ್ನೆಸ್ ಪುನೀತ್
ಇದೇ ವೇಳೆ ಈ ಗಲಾಟೆಯ ಹಿಂದಿನ ಅಸಲಿ ಕಾರಣವಾದ 10 ಕೋಟಿ ರೂ. ಹಣದ ವಹಿವಾಟಿನ ಕುರಿತೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ವಿಚಾರಣೆ ವೇಳೆ ಮಹತ್ವದ ಅಂಶಗಳು ಹೊರಬೀಳುವ ಸಾಧ್ಯತೆಯಿದೆ.
ಮತ್ತೊಂದೆಡೆ ಚಾಮರಾಜಪೇಟೆ ಹಾಗೂ ಬ್ಯಾಟರಾಯನಪುರ ಪೊಲೀಸ್ ಠಾಣೆಗಳಲ್ಲೂ ನಟನ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆಯಿದ್ದು, ಈ ಸಂಬಂಧ ಪೊಲೀಸರು ನ್ಯಾಯಾಲಯದ ಅನುಮತಿಗೆ (ಪರ್ಮಿಷನ್) ಕಾಯುತ್ತಿದ್ದಾರೆ. ಅನುಮತಿ ಸಿಕ್ಕ ಬೆನ್ನಲ್ಲೇ ಇನ್ನೆರಡು ಠಾಣೆಗಳಲ್ಲಿ ಎಫ್ಐಆರ್ ದಾಖಲಾಗುವ ನಿರೀಕ್ಷೆಯಿದೆ.
