– ಇನ್ಸ್ಟಾ ರೀಲ್ಸ್ ನೋಡಿ ʻಅಧೀರʼನ ಜಾಡು ಹಿಡಿದಿದ್ದ ಗ್ಯಾಂಗ್
ಬಾಲಿವುಡ್ ನಟ ಸಂಜಯ್ ದತ್ ಅವರನ್ನೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi Gang) ಟಾರ್ಗೆಟ್ ಮಾಡಿತ್ತು. ಟೈಗರ್ ಶ್ರಾಫ್ಗಿಂತ ಮೊದಲೇ ಸಂಜಯ್ ದತ್ (Sanjay Dutt) ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಅನ್ನೋ ಸ್ಫೋಟಕ ಅಂಶ ಮುಂಬೈ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಮಾಹಿತಿಯ ಪ್ರಕಾರ, ಗ್ಯಾಂಗ್ನ ಶೂಟರ್ಗಳಾದ ರೆಹಾನ್ ಮತ್ತು ಫೂಲ್ ಸಿಂಗ್ ಸೆಪ್ಟೆಂಬರ್ನಲ್ಲಿ ಪಿಸ್ತೂಲ್ಗಳೊಂದಿಗೆ ಮುಂಬೈಗೆ ಬಂದಿದ್ದರು. ಗ್ಯಾಂಗ್ನ ಪ್ರಮುಖ ಸಂಚುಕೋರ ಅನಿಲ್ ಪಂಡಿತ್ ಸೂಚನೆ ಮೇರೆಗೆ ಈ ಶಾರ್ಪ್ ಶೂಟರ್ಗಳು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದರು.
ಸಲ್ಮಾನ್ ಖಾನ್ ಬಳಿಕ ಸಂಜಯ್ ದತ್ ಮೇಲೆ ಕಣ್ಣು
ಸೆಪ್ಟೆಂಬರ್ ಕೊನೆಯ ವಾರದಲ್ಲಿ ಶೂಟರ್ಗಳು ಸಲ್ಮಾನ್ ಖಾನ್ ಅವರ ನಿವಾಸದ ಬಳಿ ತೆರಳಿದ್ದರು. ಆದರೆ, ಅಲ್ಲಿ ಬಿಗಿ ಭದ್ರತೆ ಇದ್ದ ಕಾರಣ ದಾಳಿ ನಡೆಸಲು ಸಾಧ್ಯವಾಗಿರಲಿಲ್ಲ.

ಇದಾದ ಬಳಿಕ ಸಂಜಯ್ ದತ್ ಅವರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಗ್ಯಾಂಗ್ ಪ್ರಯತ್ನಿಸಿತ್ತು. ಅವರು ಮನೆಯಿಂದ ಯಾವ ವಾಹನದಲ್ಲಿ ಹೊರಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿನ ಇನ್ಸ್ಟಾಗ್ರಾಂ ಮತ್ತು ಯೂಟ್ಯೂಬ್ ರೀಲ್ಸ್ಗಳನ್ನು ಪರಿಶೀಲಿಸಿದ್ದರು ಎಂಬ ಮಾಹಿತಿಯೂ ಹೊರಬಿದ್ದಿದೆ. ಮುಂಬೈನ ಪಾಲಿ ಹಿಲ್ನಲ್ಲಿರುವ ಸಂಜಯ್ ದತ್ ಅವರ ನಿವಾಸದ ವಿಡಿಯೋ ಚಿತ್ರೀಕರಿಸಿ ಕಳುಹಿಸುವಂತೆ ಅನಿಲ್ ಪಂಡಿತ್ ಸೂಚಿಸಿದ್ದ. ಅದರಂತೆ, ಗ್ಯಾಂಗ್ನ ಸದಸ್ಯರು ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಹಿತಿ ಸಂಗ್ರಹಿಸಿದ್ದರು.
ಸಂಜಯ್ ದತ್ ಮನೆಯಲ್ಲಿ ಇದ್ದಾರೆಯೇ? ಅವರು ಯಾವ ಕಾರುಗಳಲ್ಲಿ ಓಡಾಡುತ್ತಾರೆ? ಎಂಬುದರ ಕುರಿತು ಅಕ್ಕಪಕ್ಕದ ನಿವಾಸಿಗಳನ್ನು ವಿಚಾರಿಸಿದ್ದರು. ಆದರೆ, ಸಂಜಯ್ ದತ್ ಅವರ ಬಗ್ಗೆ ಅಗತ್ಯ ಮಾಹಿತಿ ಲಭ್ಯವಾಗದ ಹಿನ್ನೆಲೆ ಗ್ಯಾಂಗ್ ಮುಂದಿನ ಗುರಿಯಾಗಿ ಟೈಗರ್ ಶ್ರಾಫ್ ಅವರನ್ನ ಆಯ್ಕೆ ಮಾಡಿಕೊಂಡಿತ್ತು ಎಂದು ತಿಳಿದುಬಂದಿದೆ.
ಸಂಜಯ್ ದತ್ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಯತ್ನದ ಬಳಿಕ ಟೈಗರ್ ಶ್ರಾಫ್ (Tiger Shroff) ಅವರನ್ನ ಗುರಿಯಾಗಿಸಿಕೊಂಡ ಗ್ಯಾಂಗ್, ಅವರ ಮೇಲೆ ದಾಳಿ ನಡೆಸುವಲ್ಲಿ ಯಶಸ್ವಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ತನಿಖೆಯಿಂದ ಹಲವು ವಿವರಗಳು ಬಹಿರಂಗವಾಗಿವೆ.
