ಬೆಂಗಳೂರು: ಮಳೆ ಕೊರತೆ ನೀಗಿಸಲು ರಾಜ್ಯ ಸರ್ಕಾರ ಮೋಡ ಬಿತ್ತನೆ (Cloud Seeding) ಕಾರ್ಯಕ್ಕೆ ಚಾಲನೆ ನೀಡಿದೆ.
ಜಲಸಂಪನ್ಮೂಲ ಇಲಾಖೆ ವತಿಯಿಂದ ನಡೆಯಲಿರುವ ಮೋಡ ಬಿತ್ತನೆ ಕಾರ್ಯಕ್ಕೆ, ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10 ಗಂಟೆಗೆ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು. ಇವರಿಗೆ ಶಾಸಕ ಹೆಚ್.ಕೆ.ಪಾಟೀಲ್ ಸಾಥ್ ನೀಡಿದರು. ಮೋಡ ಬಿತ್ತನೆ ಕಾರ್ಯವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮೇಲ್ವಿಚಾರಣಾ ಸಮಿತಿ, ತಾಂತ್ರಿಕ ಸಮಿತಿ, ಕ್ಷೇತ್ರ ಕಾರ್ಯಾಚರಣೆ ಹಾಗೂ ಮೌಲ್ಯಮಾಪನ ಸಮಿತಿಗಳನ್ನು ರಚಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು | ಇಂದಿನಿಂದ ಪ್ರಮುಖ ಫ್ಲೈಓವರ್‌ಗಳಲ್ಲಿ ಕೆಲ ವಾಹನಗಳ ಸಂಚಾರಕ್ಕೆ ನಿರ್ಬಂಧ
ತಾಂತ್ರಿಕ ಸಮಿತಿಯಲ್ಲಿ ಐಐಟಿ, ಐಐಎಸ್‌ಸಿ ಹಾಗೂ ಹವಾಮಾನ ಇಲಾಖೆಯ ತಜ್ಞರು ಇದ್ದರು. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡಗಳ ಲಭ್ಯತೆಯ ಆಧಾರದ ಮೇಲೆ ಮೋಡ ಬಿತ್ತನೆ ಕಾರ್ಯ ನಡೆಯಿತು. ಮೋಡ ಬಿತ್ತನೆ ನಡೆಯುವ ಪ್ರದೇಶದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಳೆಯಾಗುವ ನಿರೀಕ್ಷೆ ಇದೆ.
ಒಟ್ಟು 27 ಕೋಟಿ ರೂಪಾಯಿ ವೆಚ್ಚದ ಈ ಕಾರ್ಯಾಚರಣೆ 60 ದಿನಗಳ ಕಾಲ ನಡೆಯಲಿದೆ. ಸುಮಾರು 200 ಗಂಟೆಗಳ ಕಾಲ, ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಕಾರ್ಯಾಚರಣೆ ನಡೆಸಲಾಗುತ್ತದೆ. ರಾಜ್ಯದಲ್ಲಿ ಈ ಹಿಂದೆ ಮೂರು ಬಾರಿ ಮೋಡ ಬಿತ್ತನೆ ಕಾರ್ಯ ನಡೆಸಲಾಗಿದ್ದು, ಶೇಕಡ 18ರಿಂದ 20ರಷ್ಟು ಯಶಸ್ಸು ಸಿಕ್ಕಿದೆ. ಈ ಬಾರಿ ಶೇಕಡ 30ರಷ್ಟು ಯಶಸ್ಸಿನ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.
