ಹಿಂದೂಗಳು (Hindu) ಪ್ರಕೃತಿಯ ಆರಾಧಕರು. ನದಿ, ಮರ, ಕಲ್ಲು, ಪ್ರಾಣಿ ಪಕ್ಷಿಗಳಲ್ಲೂ ದೇವರನ್ನೂ ಕಾಣುವವರು. ಅದೇ ರೀತಿ ನಮ್ಮ ಜನ ನಾಗರಗಳ ಆರಾಧನೆ ಮಾಡುತ್ತಾರೆ. ಆಕಸ್ಮಿಕವಾಗಿ ನಾಗರ ಹಾವನ್ನು ಕೊಂದರೆ, ಅಥವಾ ನಾಗರ ಹಾವು ಸತ್ತಿದ್ದನ್ನು ಕಂಡರೆ ಅವುಗಳಿಗೂ ವಿಶೇಷವಾಗಿ ಸಂಸ್ಕಾರ ಮಾಡುತ್ತಾರೆ. ನಾಗರ ಪಂಚಮಿ (Nagara Panchami) ಹೊತ್ತಲ್ಲಿ ಸರ್ಪ ಸಂಸ್ಕಾರದ (Sarpa Samskara) ಕುರಿತಾದ ಬರಹ ಇಲ್ಲಿದೆ.

ಸರ್ಪ ಸಂಸ್ಕಾರ ಎಂದರೆ ನಾಗನಿಗೆ ಸಂಬಂಧಿಸಿದ ದೋಷ ಪರಿಹಾರಕ್ಕಾಗಿ ಮಾಡುವ ಶಾಸ್ತ್ರೋಕ್ತ ಪೂಜೆ. ಸಾಮಾನ್ಯವಾಗಿ ತಿಳಿಯದೇ ಸರ್ಪಹತ್ಯೆ ನಡೆದಿದ್ದರೆ, ಜಾತಕದಲ್ಲಿ ನಾಗದೋಷ ಕಂಡುಬಂದರೆ ಅಥವಾ ಕುಟುಂಬದಲ್ಲಿ ನಾಗನ ತೊಂದರೆ ಇದೆ ಎಂಬ ನಂಬಿಕೆ ಇದ್ದರೆ ಈ ಸೇವೆಯನ್ನು ಮಾಡುತ್ತಾರೆ. ಪೂಜೆಯಲ್ಲಿ ನಾಗಹೋಮ, ಪಿಂಡಪ್ರದಾನ, ನಾಗಶಿಲಾ ಪ್ರತಿಷ್ಠೆ ಸೇರಿದಂತೆ ಹಲವು ವಿಧಿಗಳು ನಡೆಯುತ್ತವೆ. ಈ ಸೇವೆ ಸಾಮಾನ್ಯವಾಗಿ ಎರಡು ದಿನಗಳ ಕಾರ್ಯಕ್ರಮವಾಗಿರುತ್ತದೆ. ಮೊದಲ ದಿನ ಸಂಸ್ಕಾರ ಸಂಬಂಧಿಸಿದ ವಿಧಿಗಳು ನಡೆಯುತ್ತವೆ. ಎರಡನೇ ದಿನ ನಾಗ ಪ್ರತಿಷ್ಠೆ ಹಾಗೂ ಇತರ ಪೂಜೆಗಳು ನೆರವೇರುತ್ತವೆ. ಇದನ್ನ ತುಳುನಾಡು, ಮಲೆನಾಡು, ದಕ್ಷಿಣ ಕರ್ನಾಟಕದಲ್ಲಿ “ನಾಗರ ಸಂಸ್ಕಾರ” ಎಂದು ಸಹ ಕರೆಯುತ್ತಾರೆ. ಇದನ್ನೂ ಓದಿ: ಮಲೆನಾಡು – ಪ್ರಕೃತಿಯ ಆರಾಧನೆಯ ಭಾಗವಾಗಿ ನಾಗರ ಪಂಚಮಿ
ಯಾವಾಗ ಸರ್ಪ ಸಂಸ್ಕಾರ ಮಾಡಬೇಕು?
ಹಾವು ಸತ್ತರೆ – ಆಕಸ್ಮಿಕವಾಗಿ ಮನೆಯಲ್ಲಿ ಅಥವಾ ಹೊಲದಲ್ಲಿ ಹಾವು ಸತ್ತರೆ ಅಥವಾ ಹಾವನ್ನು ಕೊಂದುಬಿಟ್ಟರೆ ಈ ಪರಿಹಾರ ಮಾಡಬೇಕು. ಅಲ್ಲದೇ ಕನಸಲ್ಲಿ ಪದೇ ಪದೇ ಹಾವು ಕಾಣಿಸಿಕೊಂಡರೆ ಸರ್ಪ ಸಂಸ್ಕಾರ ಮಾಡಿಸಬೇಕಾಗುತ್ತದೆ. ಇದಲ್ಲದೇ ಜಾತಕದಲ್ಲಿ ಕಾಳಸರ್ಪ ದೋಷ, ನಾಗದೋಷ ಇದ್ದರೂ ಈ ಪರಿಹಾರ ಪೂಜೆ ಮಾಡಿಸಬೇಕಾಗುತ್ತದೆ.

ಮನೆ ಕಟ್ಟುವಾಗ – ನೆಲ ಅಗೆಯುವಾಗ ಹುತ್ತ ಹಾಳಾದರೆ: ಅಕಸ್ಮಿಕವಾಗಿ ಕೆಲಸ ಮಾಡುವಾಗ ಹುತ್ತ ಒಡೆದರೆ ನಾಗದೋಷದಿಂದ ಮನೆಯಲ್ಲಿ ಕಾಯಿಲೆ, ಸಂತಾನ ತೊಂದರೆ, ಹಣದ ನಷ್ಟ ಆಗುತ್ತೆ ಎಂಬ ನಂಬಿಕೆ ಇದೆ. ಇದಕ್ಕೆ ಪರಿಹಾರವಾಗಿ ಸರ್ಪಸಂಸ್ಕಾರ ಮಾಡಬೇಕಾಗುತ್ತೆ.
ಸರ್ಪ ಸಂಸ್ಕಾರ ಹೇಗೆ ಮಾಡುತ್ತಾರೆ?
ಸತ್ತ ಹಾವನ್ನ ಬಾಳೆ ಎಲೆಯಲ್ಲಿ ಇಟ್ಟು, ಅರಿಶಿನ-ಕುಂಕುಮ ಹಾಕಿ ಹಾಲು-ನೀರು ಎರೆದು ಶಾಸ್ತ್ರೋಸ್ತ್ರವಾಗಿ ಮಂತ್ರ ಹೇಳಿ ಸ್ವಚ್ಛವಾದ ಜಾಗದಲ್ಲಿ ಹೂಳಲಾಗುತ್ತದೆ. ಬಳಿಕ ಪಾಯಸ, ಹಾಲನ್ನು ನಾಗಬನದಲ್ಲಿ ಇಡಬೇಕು.
ಅರ್ಚಕರಿಂದ ದೊಡ್ಡ ಪ್ರಮಾಣದಲ್ಲೂ ಸರ್ಪ ಸಂಸ್ಕಾರ ಮಾಡಲಾಗುತ್ತದೆ. ಇದನ್ನ ಸಾಮಾನ್ಯವಾಗಿ ನಾಗಬನದಲ್ಲಿ ಅಥವಾ ದೇವಸ್ಥಾನದಲ್ಲಿ ಮಾಡಿಸುತ್ತಾರೆ.
ಮುಖ್ಯ ವಿಧಿಗಳು
ಸಂಕಲ್ಪ – ಯಾವ ಕಾರಣಕ್ಕೆ ಮಾಡ್ತಿದ್ದೀವಿ ಎಂದು ಹೇಳಿ ಮಾಡಿಸೋದು.
ನಾಗ ಪ್ರತಿಷ್ಠೆ – ಮಣ್ಣು/ಕಲ್ಲಿನಲ್ಲಿ 2 ಹಾವು ಮಾಡಿ ಪೂಜೆ ನೆರವೇರಿಸಲಾಗುತ್ತದೆ. ನಾಗರ ಕಲ್ಲಿಗೆ ಹಾಲು, ನೀರು, ಅರಿಶಿನ, ಎಳನೀರಿನ ಅಭಿಷೇಕ ಮಾಡಿ ಸತ್ತ ಹಾವಿನ ಆತ್ಮ ಶಾಂತಿಗಾಗಿ ಅನ್ನದಾನ, ವಸ್ತ್ರದಾನ ಮಾಡಲಾಗುತ್ತದೆ. ಜಾತಕದಲ್ಲಿ ನಾಗದೋಷ ಇದ್ದರೆ ಜ್ಯೋತಿಷಿ ಸಲಹೆ ಪಡೆದು ಮಾಡೋದು ಒಳ್ಳೆಯದು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ
ಕುಕ್ಕೆ ಸುಬ್ರಹ್ಮಣ್ಯ (Kukke Subrahmanya) ಕ್ಷೇತ್ರದಲ್ಲಿ ನಡೆಯುವ ಸರ್ಪ ಸಂಸ್ಕಾರ ಸೇವೆಗೆ ದೇಶದ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಉತ್ತರ ಭಾರತದ ಹಲವೆಡೆಗಳಿಂದಲೂ ನಾಗದೋಷ ನಿವಾರಣೆಗೆ ಭಕ್ತರು ಇಲ್ಲಿ ಬಂದು ಪೂಜೆ ಮಾಡಿಸುತ್ತಾರೆ.
ಇಲ್ಲಿ ಸರ್ಪ ಸಂಸ್ಕಾರ ಸೇವೆಯನ್ನು ಆನ್‌ಲೈನ್ ಮೂಲಕ ಮುಂಚಿತವಾಗಿ ಬುಕ್ ಮಾಡಬೇಕು. ಸೇವೆಗೆ ಬರುವ ಭಕ್ತರು ಒಂದು ದಿನ ಮೊದಲು ಸಂಜೆ ದೇವಸ್ಥಾನಕ್ಕೆ ಬಂದು ಟೋಕನ್ ಪಡೆಯಬೇಕು. ಪೂಜೆ ಸಾಮಾನ್ಯವಾಗಿ ಬೆಳಗ್ಗೆ 8 ಗಂಟೆಯ ನಂತರ ಆರಂಭವಾಗುತ್ತದೆ. ಇದು ಎರಡು ದಿನಗಳ ಕಾರ್ಯಕ್ರಮವಾಗಿದ್ದು ಮೊದಲ ದಿನ ಸಂಸ್ಕಾರ ನಡೆಯುತ್ತದೆ. ಎರಡನೇ ದಿನ ನಾಗ ಪ್ರತಿಷ್ಠೆ ಸೇರಿದಂತೆ ಇತರ ಪೂಜೆಗಳು ನಡೆಯುತ್ತವೆ. ಇದನ್ನೂ ಓದಿ: ನಾಗರ ಪಂಚಮಿ ವಿಶೇಷ – ಶ್ರೀಧರಸ್ವಾಮಿಗಳು ಪ್ರತಿಷ್ಠಾಪಿಸಿದ ಸುಬ್ರಹ್ಮಣ್ಯ ಕ್ಷೇತ್ರ
