ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಮತ್ತು ಅವರ ಪತ್ನಿ ಡೋನಾ ಗಂಗೂಲಿ (Dona Ganguly) ಅವರಿಗೆ ಕೊಲೆ ಬೆದರಿಕೆ ಬಂದಿದ್ದು, ಈ ಸಂಬಂಧ ದೂರು ದಾಖಲಾಗಿದೆ.

ಪ್ರಸ್ತುತ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಗಂಗೂಲಿ ಅವರ ಕಚೇರಿಗೆ ಕಳೆದ ಆರು ತಿಂಗಳಿಂದ ಇಂತಹ ಬೆದರಿಕೆ ಪತ್ರಗಳು ಬರುತ್ತಿವೆ. ಆರಂಭದಲ್ಲಿ ಇವುಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಆ.10ರಂದು ಬಂದ ಎರಡು ಪತ್ರಗಳಲ್ಲಿ ಸೌರವ್ ಗಂಗೂಲಿ ಹಾಗೂ ಅವರ ಪತ್ನಿಯನ್ನು ಕೊಲ್ಲುವುದಾಗಿ ಸ್ಪಷ್ಟವಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಆವರ ಆಪ್ತರಿಗೆ ತೊಂದರೆ ಕೊಡಲಾಗುವುದು ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಟರ್ಕಿಯಿಂದ ರಹಸ್ಯ ವಿಮಾನದಲ್ಲಿ ಪ್ರಯಾಣಿಸಿದ್ದ ಟ್ರಂಪ್!
ಬೆದರಿಕೆ ಬೆನ್ನಲ್ಲೇ ಸೌರವ್ ಗಂಗೂಲಿ ಅವರ ವ್ಯವಸ್ಥಾಪಕರು ಕೋಲ್ಕತ್ತಾದ ದಕ್ಷಿಣ ವಿಭಾಗದ ಠಾಕೂರ್‌ಪುಕುರ್ ಪೊಲೀಸ್ ಠಾಣೆಯಲ್ಲಿ (Thakurpukur Police Station) ದೂರು ದಾಖಲಿಸಿದ್ದಾರೆ. ದೂರಿನನ್ವಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೋಲ್ಕತ್ತಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪತ್ರಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದು, ಕಳುಹಿಸಿದವರ ಗುರುತು ಹಾಗೂ ಉದ್ದೇಶವನ್ನು ಪತ್ತೆ ಹಚ್ಚುತ್ತಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಉತ್ತರ 24 ಪರಗಣ ಜಿಲ್ಲೆಯ ಬೆಳಗರಿಯಾ ಪ್ರದೇಶದ ವ್ಯಕ್ತಿಯೊಬ್ಬ ಕೊರಿಯರ್ ಸೇವೆ ಮೂಲಕ ಈ ಪತ್ರಗಳನ್ನು ಕಳುಹಿಸಿರಬಹುದು ಎಂದು ಶಂಕಿಸಲಾಗಿದೆ. ಕಳುಹಿಸುವವರು ಬಳಸಿದ್ದಾರೆನ್ನಲಾದ ಸಿಮ್ ಕಾರ್ಡ್ ಹಾಗೂ ಕೊರಿಯರ್ ಏಜೆನ್ಸಿಯ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ನಾವು ದೂರಿನ ಬಗ್ಗೆ ಗಂಭೀರವಾಗಿದ್ದು, ತನಿಖೆ ಆರಂಭಿಸಿದ್ದೇವೆ. ಪತ್ರ ಕಳುಹಿಸಿದ ವ್ಯಕ್ತಿಯನ್ನು ಗುರುತಿಸಲು ಪತ್ರ, ಅವುಗಳ ಮೂಲ ಮತ್ತು ಕೊರಿಯರ್ ಜಾಡನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಕರ್ನಾಟಕ ಬಂದ್ ಗೊಂದಲದ ಗೂಡು – ಕನ್ನಡ ಸಂಘಟನೆಗಳ ಮಧ್ಯೆ ಮೂಡಿದ ಭಿನ್ನಮತ, ವಾಟಾಳ್ ಬಿಗಿಪಟ್ಟು
