ಬೆಂಗಳೂರು: ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ(Dhanveer Gowda) ಅವರ ವಿರುದ್ಧದ ಕಾನೂನು ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಅಧಿಕೃತ ಎಫ್ಐಆರ್ (FIR) ದಾಖಲಾಗಿದೆ.
ʼಸ್ಟೈಲಿಶ್ ಸ್ಟಾರ್ ಝೈದ್ ಖಾನ್ ಅಭಿಮಾನಿಗಳ ಸಂಘʼದ ರಾಜ್ಯಾಧ್ಯಕ್ಷ ಎಂ. ವಿನಾಯಕ ಅವರು ನಟ ಝೈದ್ ಖಾನ್(Zaid Khan) ಮಹಿಳೆಯರು ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪಿಸಿ ಚಾಮರಾಜಪೇಟೆ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಬಿಎನ್ಎಸ್ ಸೆಕ್ಷನ್ 352(ಸಾರ್ವಜನಿಕ ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನ) ಅಡಿ ಎಫ್ಐಆರ್ ದಾಖಲಾಗಿದೆ.
ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಟ ಧನ್ವೀರ್ ಗೌಡ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ವೊಂದು ವೈರಲ್ ಆಗಿದೆ. ಆ ಆಡಿಯೋದಲ್ಲಿ ಧನ್ವೀರ್ ಅವರು ಯಾರೊಂದಿಗೋ ಮಾತನಾಡುತ್ತಾ, ನಟ ಝೈದ್ ಖಾನ್ ಅವರನ್ನು ಉದ್ದೇಶಿಸಿ ಅವಹೇಳನಕಾರಿಯಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ,ಮಹಿಳೆಯರ ಬಗ್ಗೆ ಹಾಗೂ ಈ ರಾಜ್ಯದ ಮುಖ್ಯಮಂತ್ರಿಯವರಾದ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸಿ ಅತ್ಯಂತ ಹಗುರವಾಗಿ ಮತ್ತು ಕೀಳಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಇದನ್ನೂ ಓದಿ: ಧನ್ವೀರ್ಗೆ ಹೆಚ್ಚಿದ ಸಂಕಷ್ಟ- ಎರಡು ಪ್ರತ್ಯೇಕ ಠಾಣೆಗಳಲ್ಲಿ ಎಫ್ಐಆರ್ ದಾಖಲು
ಪೊಲೀಸರು ಈ ಸಂಬಂಧ ತನಿಖೆಯನ್ನು ಚುರುಕುಗೊಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
