ಲಕ್ನೋ: ಹಿಂಸಾತ್ಮಕ ಮಾರ್ಗಗಳ ಮೂಲಕ ಆಡಳಿತ ಬದಲಾವಣೆಗೆ (Regime Change) ಕರೆ ನೀಡುವ ಅಥವಾ ಅದರಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಸರ್ಕಾರಿ ಉದ್ಯೋಗ ನೀಡದಿರಲು ಉತ್ತರ ಪ್ರದೇಶ ಸರ್ಕಾರ(Uttar Pradesh) ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಇತ್ತೀಚಿನ ಪ್ರತಿಭಟನೆಗಳ ವೇಳೆ ವ್ಯಕ್ತವಾದ ‘ಆಡಳಿತ ಬದಲಾವಣೆ’ ಘೋಷಣೆ ಮೊಳಗಿದ ಬೆನ್ನಲ್ಲೇ, ಯೋಗಿ ಆದಿತ್ಯನಾಥ್(Yogi Adityanath) ನೇತೃತ್ವದ ಸರ್ಕಾರವು ನೇರ ನೇಮಕಾತಿಯ ಅಭ್ಯರ್ಥಿಗಳ ಚಾರಿತ್ರ್ಯ ಪರಿಶೀಲನೆ (Character Verification) ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಾದ ಸಮಾಜವಾದಿ ಪಕ್ಷ (SP) ಹಾಗೂ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಅಲಹಾಬಾದ್ ಹೈಕೋರ್ಟ್ ನಿರ್ದೇಶನದ ಮೇರೆಗೆ ನೇಮಕಾತಿ ಮತ್ತು ಸಿಬ್ಬಂದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ದೇವರಾಜ್ ಅವರು ಈ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಹಿಂಸಾತ್ಮಕ ಚಟುವಟಿಕೆಗಳ ಮೂಲಕ ಸರ್ಕಾರವನ್ನು ಬೀಳಿಸಲು ಯತ್ನಿಸುವವರನ್ನು ಸಾರ್ವಜನಿಕ ಉದ್ಯೋಗದಿಂದ ಅನರ್ಹಗೊಳಿಸಲಾಗುವುದು ಎಂದು ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಅಭ್ಯರ್ಥಿಯ ರಾಜಕೀಯ ಸಿದ್ಧಾಂತವನ್ನು ಆಧರಿಸಿ ಯಾರನ್ನೂ ಅನರ್ಹಗೊಳಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೆ, ಕೇವಲ ಎಫ್ಐಆರ್ ದಾಖಲಾದ ಮಾತ್ರಕ್ಕೆ ಅಥವಾ ತನಿಖೆ ಬಾಕಿ ಇದೆ ಎಂದ ಮಾತ್ರಕ್ಕೆ ಅಭ್ಯರ್ಥಿಯನ್ನು ಸ್ವಯಂಚಾಲಿತವಾಗಿ ಅನರ್ಹಗೊಳಿಸುವುದಿಲ್ಲ. ನ್ಯಾಯಾಲಯದಿಂದ ದೋಷಮುಕ್ತಗೊಂಡವರು, ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡ ಪ್ರಕರಣಗಳು ಮತ್ತು ಬಾಲಾಪರಾಧ ನ್ಯಾಯ (Juvenile Justice) ಕಾಯ್ದೆಯ ವ್ಯಾಪ್ತಿಗೆ ಬರುವ ಪ್ರಕರಣಗಳಿರುವ ಅಭ್ಯರ್ಥಿಗಳು ಅನರ್ಹತೆಗೆ ಒಳಪಡುವುದಿಲ್ಲ.
ಚಾರಿತ್ರ್ಯ ಪರಿಶೀಲನಾ ವರದಿ ತಡವಾಗುತ್ತಿದೆ ಎಂಬ ಕಾರಣಕ್ಕೆ ನೇಮಕಾತಿ ಪತ್ರ ವಿಳಂಬ ಮಾಡುವಂತಿಲ್ಲ. ಅಭ್ಯರ್ಥಿಯಿಂದ ಸ್ವಯಂ ಘೋಷಣಾಪತ್ರ (Self-declaration) ಪಡೆದು ತಾತ್ಕಾಲಿಕ ನೇಮಕಾತಿ ಪತ್ರ ನೀಡಬಹುದು. ಆದರೆ ಪರಿಶೀಲನೆಯಲ್ಲಿ ಅಭ್ಯರ್ಥಿ ತಪ್ಪಿತಸ್ಥನೆಂದು ಕಂಡುಬಂದರೆ ಅಥವಾ ಸುಳ್ಳು ಮಾಹಿತಿ ನೀಡಿರುವುದು ದೃಢಪಟ್ಟರೆ ನೇಮಕಾತಿಯನ್ನು ತಕ್ಷಣವೇ ರದ್ದುಪಡಿಸಿ, ಕಾನೂನು ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ನೌಕರರಿಗೆ ಈ ಮರು-ಪರಿಶೀಲನೆ ಅನ್ವಯಿಸುವುದಿಲ್ಲ. ಇದನ್ನೂ ಓದಿ: ಎಕ್ಸ್ಪ್ರೆಸ್ವೇಗಳಲ್ಲಿ 120 ಕಿ.ಮೀ. ವೇಗಕ್ಕೆ ಚಲನ್ ಇಲ್ಲ: ನಿತಿನ್ ಗಡ್ಕರಿ
ವಿಪಕ್ಷಗಳಿಂದ ಕಿಡಿ
ಯೋಗಿ ಸರ್ಕಾರದ ಈ ನಿರ್ಧಾರವನ್ನು ಬ್ರಿಟಿಷ್ ಆಡಳಿತಕ್ಕೆ ಹೋಲಿಸಿ ಸಮಾಜವಾದಿ ಪಕ್ಷ ವಾಗ್ದಾಳಿ ನಡೆಸಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಇಂತಹ ಕಾನೂನುಗಳು ಇರುತ್ತಿದ್ದವು. ಸ್ವತಂತ್ರ ಭಾರತದಲ್ಲಿ ಪ್ರತಿಭಟಿಸುವ ಹಕ್ಕು ಸಾಂವಿಧಾನಿಕವಾಗಿ ಸಿಕ್ಕಿದೆ. ಆಡಳಿತ ಬದಲಾವಣೆ ಕಾನೂನುಬದ್ಧ ಪ್ರಕ್ರಿಯೆಯಾಗಿದ್ದು, ಪ್ರತಿ ಚುನಾವಣೆಯಲ್ಲೂ ಜನ ತೀರ್ಮಾನಿಸುತ್ತಾರೆ. ಸರ್ಕಾರ ಹೆದರಿಕೆಯ ವಾತಾವರಣ ಸೃಷ್ಟಿಸುತ್ತಿದೆ ಎಂದು ಎಸ್ಪಿ ವಕ್ತಾರ ಉದಯವೀರ್ ಟೀಕಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ರಶೀದ್ ಆಳ್ವಿ ಪ್ರತಿಕ್ರಿಯಿಸಿ, “ಸರ್ಕಾರವೇ ನ್ಯಾಯಾಧೀಶರಂತೆ ವರ್ತಿಸುತ್ತಿದೆ. ಇಂತಹ ವಿಚಾರಗಳನ್ನು ತೀರ್ಮಾನಿಸಲು ನ್ಯಾಯಾಲಯಗಳಿಲ್ಲವೇ? ಯುವಜನತೆಯ (GenZ) ಪ್ರತಿಭಟನೆಗೆ ಸರ್ಕಾರ ಬೆದರಿರುವುದನ್ನು ಇದು ತೋರಿಸುತ್ತದೆ ಎಂದು ಕಟುವಾಗಿ ಆಕ್ಷೇಪಿಸಿದ್ದಾರೆ.
