– ಕೆಎಎಸ್ ಅಧಿಕಾರಿಗಳ ಹುದ್ದೆಗೆ ಕುತ್ತು
ನವದೆಹಲಿ: ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಕಾನೂನು ಹೋರಾಟಕ್ಕೆ ಸಾಕ್ಷಿಯಾಗಿದ್ದ 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ(Gazetted Probationers) ಹುದ್ದೆಗಳ ನೇಮಕಾತಿ ವಿವಾದದಲ್ಲಿ ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದ್ದು, ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
ಈ ನೇಮಕಾತಿ ಪಟ್ಟಿಯನ್ನು ಊರ್ಜಿತಗೊಳಿಸಲು ರಾಜ್ಯ ಸರ್ಕಾರ 2022ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಯನ್ನೇ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಕರ್ತವ್ಯದಲ್ಲಿರುವ 362 ಕೆಎಎಸ್ ಅಧಿಕಾರಿಗಳ ನೌಕರಿಗೆ ನೇರ ಕುತ್ತು ಬಂದಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ವಿನೋದ್ ಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಗುರುವಾರ ಈ ಮಹತ್ವದ ಆದೇಶವನ್ನು ಪ್ರಕಟಿಸಿದೆ. 2011ರ ಸಾಲಿನ ಕೆಪಿಎಸ್ಸಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕಾರಣದಿಂದ ಈ ಹಿಂದೆ ಹೈಕೋರ್ಟ್ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿತ್ತು. ಆದರೆ ಈ ಆಯ್ಕೆ ಪಟ್ಟಿಯನ್ನು ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರವು 2022ರಲ್ಲಿ ವಿಶೇಷ ಕಾಯ್ದೆಯನ್ನು ಜಾರಿಗೆ ತಂದಿತ್ತು. ಸರ್ಕಾರದ ಈ ಕಾಯ್ದೆಯನ್ನು ಹೈಕೋರ್ಟ್ ಎತ್ತಿಹಿಡಿದಿತ್ತು.
ಹೈಕೋರ್ಟ್ನ ಈ ನಿರ್ಧಾರವನ್ನು ಪ್ರಶ್ನಿಸಿ ಮೂಲ ಅರ್ಜಿದಾರರಾದ ಶ್ರೀನಿವಾಸ ಟಿ. ಮತ್ತು ಇತರರು ಸುಪ್ರೀಂ ಕೋರ್ಟ್ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಪೀಠವು, ಇಂದು ಸರ್ಕಾರದ ಕಾಯ್ದೆಯನ್ನು ಸಂಪೂರ್ಣವಾಗಿ ಅಸಿಂಧುಗೊಳಿಸಿ ರದ್ದುಪಡಿಸಿದೆ.
2011ರಲ್ಲಿ ಕೆಪಿಎಸ್ಸಿ ಮೂಲಕ ನಡೆದ ಈ ನೇಮಕಾತಿಯಲ್ಲಿ ಸಂದರ್ಶನ ಮತ್ತು ಅಂಕ ಹಂಚಿಕೆಯಲ್ಲಿ ಭಾರೀ ಭ್ರಷ್ಟಾಚಾರ ಹಾಗೂ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ವಿವಾದದ ನಡುವೆಯೂ ನೇಮಕಗೊಂಡು, ಪ್ರಸ್ತುತ ವಿವಿಧ ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 362 ಅಧಿಕಾರಿಗಳ ಭವಿಷ್ಯ ಈಗ ಅತಂತ್ರ ಸ್ಥಿತಿಗೆ ತಲುಪಿದೆ. ಸುಪ್ರೀಂ ಕೋರ್ಟ್ನ ಈ ತೀರ್ಪಿನಿಂದಾಗಿ ದಶಕದ ನೇಮಕಾತಿ ಕದನಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ರಾಜ್ಯ ಸರ್ಕಾರ ಮುಂದಿನ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
2011ರಲ್ಲಿ ಆರಂಭವಾದ ನೇಮಕಾತಿ ಪ್ರಕ್ರಿಯೆ
ಕೆಪಿಎಸ್ಸಿ 2011ರ ನವೆಂಬರ್ 3ರಂದು 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. 2012ರಲ್ಲಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಪ್ರಕ್ರಿಯೆಗಳು ನಡೆದಿದ್ದವು. 2013ರ ಮಾರ್ಚ್ 21ರಂದು ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿತ್ತು. ಅದೇ ವರ್ಷದ ಮೇ ತಿಂಗಳಲ್ಲಿ ಸಂದರ್ಶನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಯೊಬ್ಬರು ದೂರು ನೀಡಿದ್ದರು.
ಅಂಕಗಳ ಮೌಲ್ಯಮಾಪನ ಹಾಗೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ 2013–14ರ ಅವಧಿಯಲ್ಲಿ ಸಿಐಡಿ ತನಿಖೆಯ ಮಧ್ಯಂತರ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲು ಕ್ರಮ ಕೈಗೊಂಡಿತ್ತು.
ನ್ಯಾಯಮಂಡಳಿಯಿಂದ ಹೈಕೋರ್ಟ್ವರೆಗೆ
ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ 2016ರ ಅಕ್ಟೋಬರ್ನಲ್ಲಿ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿ, ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಸೂಚಿಸಿತ್ತು. ಆದರೆ, 2018ರ ಮಾರ್ಚ್ನಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮಂಡಳಿಯ ಆದೇಶವನ್ನು ರದ್ದುಗೊಳಿಸಿತು. ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದ್ದ ಗಂಭೀರ ಅಕ್ರಮಗಳ ಕುರಿತು ಹೈಕೋರ್ಟ್ ಉಲ್ಲೇಖಿಸಿದ್ದರಿಂದ 362 ಅಭ್ಯರ್ಥಿಗಳ ಆಯ್ಕೆಯ ಭವಿಷ್ಯ ಮತ್ತೆ ಅನಿಶ್ಚಿತತೆಗೆ ಸಿಲುಕಿತ್ತು.
ಆಯ್ಕೆ ಪಟ್ಟಿಗೆ ಕಾನೂನು ಮಾನ್ಯತೆ ನೀಡಲು ಕಾಯ್ದೆ
ಈ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ 2022ರ ಮಾರ್ಚ್ 14ರಂದು ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರರ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಅಧಿನಿಯಮ, 2022 ಅನ್ನು ಜಾರಿಗೆ ತಂದಿತ್ತು.
2011ರ ಸಾಲಿನ ಆಯ್ಕೆ ಪಟ್ಟಿಯನ್ನು ಊರ್ಜಿತಗೊಳಿಸಿ, ಅದರ ಆಧಾರದ ಮೇಲೆ ನೇಮಕಾತಿಗೆ ಕಾನೂನು ಮಾನ್ಯತೆ ಕಲ್ಪಿಸುವುದು ಈ ಕಾಯ್ದೆಯ ಉದ್ದೇಶವಾಗಿತ್ತು. ಆದರೆ, ಕಾಯ್ದೆಯ ಸಿಂಧುತ್ವವನ್ನೇ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಯಿತು. 2022ರ ಏಪ್ರಿಲ್ನಲ್ಲಿ ಕರ್ನಾಟಕ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ಬಳಿಕ ಅರ್ಜಿದಾರರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
