ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕಳೆದ ತಿಂಗಳು ಟರ್ಕಿಯಿಂದ (Turkey) ರಹಸ್ಯ ಮಿಲಿಟರಿ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದ ವಿಚಾರ ಈಗ ತಡವಾಗಿ ಬೆಳಕಿಗೆ ಬಂದಿದೆ.
ಇರಾನ್‌ನಿಂದ (Iran) ಎದುರಾಗಿದ್ದ ಹತ್ಯೆಯ ಬೆದರಿಕೆಯ ಹಿನ್ನೆಲೆಯಲ್ಲಿ ಈ ಹಠಾತ್ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ ಆ ಸಮಯದಲ್ಲಿ ಶ್ವೇತಭವನವು ಟ್ರಂಪ್ ತಮ್ಮ ಅಧಿಕೃತ ಏರ್ ಫೋರ್ಸ್ ಒನ್(Air Force One) ವಿಮಾನದಲ್ಲೇ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿಸಿತ್ತು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಕಾರ್ಯಾಚರಣೆ ಹೇಗೆ ನಡೆಯಿತು?
ನ್ಯಾಟೋ (NATO) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಟ್ರಂಪ್ ಅವರು ಕತಾರ್(Qatar) ಕೊಡುಗೆಯಾಗಿ ನೀಡಿದ್ದ ಹೊಸದಾಗಿ ವಿನ್ಯಾಸ ಮಾಡಲಾಗಿರುವ ಜೆಟ್‌ನಲ್ಲಿ ಟರ್ಕಿಯ(Turkey) ರಾಜಧಾನಿ ಅಂಕಾರಾಗೆ ಆಗಮಿಸಿದ್ದರು. ಆದರೆ ಅಲ್ಲಿಂದ ನಿರ್ಗಮಿಸುವಾಗ ಹಳೆಯ ಏರ್ ಫೋರ್ಸ್ ಒನ್ ವಿಮಾನವನ್ನು ಬಳಸಿದ್ದು ಹೊಸ ವಿಮಾನದ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಅಂಕಾರಾದಿಂದ ಹೊರಡುವ ಮೊದಲು ಟ್ರಂಪ್ ಅವರು ತಮ್ಮ ಟ್ರೂಥ್ ಸೋಶಿಯಲ್’ ಖಾತೆಯಲ್ಲಿ, “ನೆನಪಿಗಾಗಿ ಹಳೆಯ ಬಣ್ಣದ ಏರ್ ಫೋರ್ಸ್ ಒನ್ ವಿಮಾನದಲ್ಲಿ ಬ್ರಿಟನ್‌ನ ಆರ್‌ಎಎಫ್ ಮಿಲ್ಡೆನ್‌ಹಾಲ್‌ಗೆ ಪ್ರಯಾಣಿಸುತ್ತಿದ್ದೇನೆ. ಹೊಸ ವಿಮಾನವು ಅಲ್ಲಿಗೆ ಆಗಮಿಸಲಿದ್ದು, ಅಲ್ಲಿರುವ ಯುಎಸ್ ಸೇನಾ ಸಿಬ್ಬಂದಿ ಅದನ್ನು ವೀಕ್ಷಿಸಬಹುದು” ಎಂದು ಬರೆದುಕೊಂಡಿದ್ದರು.
ಕ್ಯಾಮೆರಾಗಳ ಮುಂದೆ ಹಳೆಯ ಏರ್ ಫೋರ್ಸ್ ಒನ್ ಏರಿದ ಟ್ರಂಪ್, ಆ ಬಳಿಕ ವಿಮಾನ ನಿಲ್ದಾಣದ ಕ್ಯಾಟರಿಂಗ್ ಟ್ರಕ್ ಮೂಲಕ ರಹಸ್ಯವಾಗಿ ಮತ್ತೊಂದು ಸಣ್ಣ ಮಿಲಿಟರಿ ವಿಮಾನವಾದ ‘ಏರ್ ಫೋರ್ಸ್ C-32A’ಅನ್ನು ತಲುಪಿದರು ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಇಬ್ಬರ ಮಧ್ಯೆ ಮತ್ತೆ ಭಿನ್ನ – ಟ್ರಂಪ್ 15 ಅಂಶಗಳ ಗಾಜಾ ಶಾಂತಿ ಯೋಜನೆಗೆ ಒಪ್ಪದ ನೆತನ್ಯಾಹು!

ಟ್ರಂಪ್ ಜೊತೆ ತಾವೂ ಪ್ರಯಾಣಿಸುತ್ತಿದ್ದೇವೆ ಎಂದು ಭಾವಿಸಿದ್ದ ಪತ್ರಕರ್ತರಿಗೆ ವಿಮಾನದ ಕಿಟಕಿ ಪರದೆಗಳನ್ನು ಮುಚ್ಚುವಂತೆ ಸೂಚಿಸಲಾಗಿತ್ತು. ಮಾಧ್ಯಮದವರು ಮಾತ್ರವಲ್ಲದೆ, ಶ್ವೇತಭವನದ ಕೆಲ ಸಿಬ್ಬಂದಿಗೂ ಅಧ್ಯಕ್ಷರು ಅದೇ ವಿಮಾನದಲ್ಲಿದ್ದಾರೆ ಎಂದೇ ನಂಬಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಟ್ರಂಪ್, “ನಾವು ಅಪಾಯಕಾರಿ ವಿಮಾನದಲ್ಲಿದ್ದೆವು. ಆದರೆ ನಾನು ಹೋದರೆ, ನೀವು ನನ್ನ ಜೊತೆಯೇ ಹೋಗುತ್ತೀರಿ, ಹೌದಲ್ಲವೇ?” ಎಂದು ಪತ್ರಕರ್ತರನ್ನು ತಮಾಷೆಯಾಗಿ ಕೇಳಿದ್ದರು.
ಬ್ರಿಟನ್‌ಗೆ ರಹಸ್ಯ C-32A ವಿಮಾನದಲ್ಲಿ ಬಂದಿಳಿದ ಟ್ರಂಪ್, ನಂತರ ಹಳೆಯ ಏರ್ ಫೋರ್ಸ್ ಒನ್ ವಿಮಾನದಿಂದ ಕೆಳಗಿಳಿಯುವಂತೆ ನಡೆದುಕೊಂಡು ಮಾಧ್ಯಮಗಳಿಗೆ ಶುಭಾಶಯ ತಿಳಿಸಿದರು. ಬಳಿಕ ಅಲ್ಲಿನ ಸೇನಾ ಸಿಬ್ಬಂದಿಯನ್ನು ಭೇಟಿ ಮಾಡಿ, ಕತಾರ್ ನೀಡಿದ್ದ ಹೊಸ ವಿಮಾನದತ್ತ ತೆರಳಿದ್ದರು.
ಈ ರಹಸ್ಯ ವಿಮಾನ ಪ್ರಯಾಣದ ವರದಿ ಕುರಿತು ಪ್ರತಿಕ್ರಿಯಿಸಿದ ಶ್ವೇತಭವನದ ಸಂವಹನ ನಿರ್ದೇಶಕ ಸ್ಟೀವ್ ಚೆಂಗ್ ಅಮೆರಿಕಕ್ಕೆ ಹಲವು ಶತ್ರುಗಳಿದ್ದು, ಅವರು ಅಧ್ಯಕ್ಷರನ್ನು ಗುರಿಯಾಗಿಸಿಕೊಂಡಿದ್ದಾರೆ. ಅಂತಹ ಬೆದರಿಕೆಗಳನ್ನು ಎದುರಿಸಲು ಹಾಗೂ ಅಧ್ಯಕ್ಷರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಬಳಿ ಇರುವ ಎಲ್ಲಾ ಅತ್ಯುನ್ನತ ಭದ್ರತಾ ಕ್ರಮಗಳನ್ನು ನಾವು ಬಳಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.ʼ
ಈ ಬಗ್ಗೆ ಮಾಧ್ಯಮಗಳು ಅಮೆರಿಕದ ರಕ್ಷಣಾ ಇಲಾಖೆಯನ್ನು ಸಂಪರ್ಕಿಸಿದ್ದು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

