– ರಾಮಮಂದಿರ ದೇಣಿಗೆ ಹಣ ಕಳ್ಳತನ ಬೆನ್ನಲ್ಲೇ ಸರ್ಕಾರದಿಂದ ಕ್ರಮ
ಬೆಂಗಳೂರು: ಅಯೋಧ್ಯೆ ರಾಮಮಂದಿರದಲ್ಲಿ (Rammandir) ದೇಣಿಗೆ ಹಣ (Donation Theft) ಕಳ್ಳತನ ಬೆನ್ನಲ್ಲೇ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ (Muzrai Temple) ಹುಂಡಿ ಹಣ ಎಣಿಕೆಗೆ ಮಾರ್ಗಸೂಚಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರು ಹುಂಡಿ ನಗದು, ಚಿನ್ನ, ಬೆಳ್ಳಿ, ಭದ್ರತೆಗೆ ಸಂಬಂಧಿಸಿದಂತೆ ರಾಜ್ಯದ ಧಾರ್ಮಿಕ ದತ್ತಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಎಸ್ಪಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು (Guidelines) ಬಿಡುಗಡೆ ಮಾಡಿ, ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಟ್ರೈನ್‌ನಲ್ಲಿ ಪೂಜೆ – 3 ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಖಾಸಗಿ ಕೋಚ್ ಬುಕ್ ಆಗಿತ್ತು: ರೈಲ್ವೇ ಇಲಾಖೆ ಸ್ಪಷ್ಟನೆ
ಪ್ರಮುಖ ಸೂಚನೆಗಳು:
- ದೇವಾಲಯಗಳ ವಿವಿಧ ಸೂಕ್ತ ಜಾಗಗಳನ್ನು ಗುರುತಿಸಿ, ಎಲ್ಲರಿಗೂ ಕಾಣುವಂತೆ ಹುಂಡಿಗಳನ್ನು ಅಳವಡಿಸಿ, ಸೂಕ್ತ ಭದ್ರತೆ ಒದಗಿಸುವುದು.
- ದೇವಾಲಯದಲ್ಲಿ ಅಳವಡಿಸುವ ಹುಂಡಿಗಳಿಗೆ ನಾಲ್ಕು ದಿಕ್ಕಿನಿಂದ ಕಾಣುವಂತೆ ಅಗತ್ತವಾದ ಸಿಸಿಟಿವಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸಿ, ಸರ್ವರ್‌ನಲ್ಲಿ ಸಂರಕ್ಷಿಸುವುದು. ಜಿಲ್ಲಾಧಿಕಾರಿಗಳ/ಉಪವಿಭಾಗಾಧಿಕಾರಿಗಳ ಕೆಚೇರಿಯಲ್ಲಿನ ಮುಜರಾಯಿ ವಿಭಾಗದಲ್ಲಿ ಸದರಿ ಕ್ಯಾಮರಾಗಳನ್ನು ಮಾನಿಟರ್ ಮಾಡುವುದು.
- ದೇವಾಲಯಗಳಲ್ಲಿ ಹಾಲಿ ಅಳವಡಿಸಿರುವ ಸಿಸಿಟಿವಿ, ಡಿವಿಆರ್‌ಗಳನ್ನು ಕಳ್ಳತನ, ನಿಷ್ಕ್ರೀಯ, ಧ್ವಂಸ ಮಾಡುತ್ತಿರುವುದರಿಂದ ಹಾಗೂ ಕರ್ಪೂರವನ್ನು ಹಚ್ಚಿ ಅದರಿಂದ ಬರುವ ಕಾರ್ಬನ್‌ನಿಂದ ಕ್ಯಾಮೆರಾ ಲೆನ್ಸ್ ಗ್ಲಾಸ್ ಕಾಣದಂತೆ ಮಾಡಿ ಕಳ್ಳತನ ಮಾಡುವುದನ್ನು ತಡೆಗಟ್ಟುವ ಹಿತದೃಷ್ಟಿಯಿಂದ ಸಿಸಿಟವಿ ವೆಬ್ ಕ್ಯಾಮರಾಗಳನ್ನು ಅಳವಡಿಸುವುದು.
- ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಸರ್ವರ್ ಅನ್ನು ಅಳವಡಿಸಿ, ವಸತಿ ಕೋಶದ ವತಿಯಿಂದ ವೆಬ್ ಕ್ಯಾಮೆರಾಗಳ ಮೂಲಕ ಎಲ್ಲಾ ದೇವಾಲಯಗಳಲ್ಲಿ ಅಳವಡಿಸಿರುವ ಕ್ಯಾಮರಾಗಳ ಮೇಲ್ವಿಚಾರಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
- ಭದ್ರತಾ ಹಿತದೃಷ್ಟಿಯಿಂದ ದೇವಾಲಯಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳ ಸಂಪರ್ಕವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಠಾಣೆಯ ಕಛೇರಿಗಳಿಗೆ ಸಂಪರ್ಕ ಕಲ್ಪಿಸಿ, ಅವುಗಳ ವೀಕ್ಷಣೆಗಾಗಿ ಸಂಚಾರ ನಿಯಂತ್ರಣ ಕೊಠಡಿಯಲ್ಲಿರುವಂತೆ ಡ್ಯಾಶ್‌ಬೋರ್ಡ್‌ಗಳ ವ್ಯವಸ್ಥೆಯನ್ನು ಕಲ್ಪಿಸುವುದು.
- ಎಲ್ಲಾ ದೇವಾಲಯಗಳಲ್ಲಿ ಭಕ್ತಾದಿಗಳು ನಗದು ಅಥವಾ ಚೀಲವನ್ನು ಹೊತ್ತು ಬಂದಾಗ ಜನಸಂದಣಿಯಲ್ಲಿ ಜೇಬು ಕಳ್ಳತನದಂತಹ ಘಟನೆಗಳನ್ನು ಕಡಿಮೆ ಮಾಡಲು ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೆಚ್ಚಿನ ಉತ್ತೇಜನ ನೀಡಲು ಕ್ಯೂಆರ್ ಕೋಡ್ ಅಳವಡಿಸುವುದು. ಅದರ ಅಡಿಯಲ್ಲಿ ಸಂಬಂಧಪಟ್ಟ ಬ್ಯಾಂಕ್‌ನ ವಿವರಗಳನ್ನು ಅಳವಡಿಸುವುದು.
- ಡಿಜಿಟಲ್ ದೇಣಿಗೆ ಮತ್ತು ನಗದು ರಹಿತ ಪಾವತಿಗಳನ್ನು ಸುಗಮಗೊಳಿಸಲು, ಭಕ್ತರು ಮತ್ತು ಸಂದರ್ಶಕರು ದೇಣಿಗೆ ನೀಡಲು, ಪ್ರಸಾದ, ಸೇವಾ ಟಿಕೆಟ್‌ಗಳು ಮತ್ತು ಇತರ ದೇವಾಲಯ ಸೇವೆಗಳನ್ನು ನಗದು ರಹಿತ ವಿಧಾನಗಳ ಮೂಲಕ ಖರೀದಿಸಲು ದೇವಾಲಯಗಳಲ್ಲಿ ಸುರಕ್ಷಿತ ಯುಪಿಐ, ಭೀಮ್, ಕ್ಯೂಆರ್ ಕೋಡ್ ಮತ್ತು ಇತರ ಡಿಜಿಟಲ್ ಪಾವತಿ ಸೌಲಭ್ಯಗಳನ್ನು ಒದಗಿಸುವುದು.
- ದೇವಾಲಯಗಳಲ್ಲಿ ಪಾರದರ್ಶಕತೆ, ಬಳಕೆಯ ಸುಲಭತೆ, ಸರಿಯಾದ ಲೆಕ್ಕಪರಿಶೋಧನಾ ಹಾದಿ ಮತ್ತು ಸುಧಾರಿತ ಹಣಕಾಸು ನಿರ್ವಹಣೆಯನು ಖಚಿತಪಡಿಸಿಕೊಳಲು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ದೇವಾಲಯದ ಲೆಕಪತ್ರ ವ್ಯವಸ್ಥೆಯೊಂದಿಗೆ ಸಂಯೋಜಿಸುವುದು.
- ಹುಂಡಿ ಇರುವ ಕಡೆ ಮಾತ್ರ ಕ್ಯೂಆರ್ ಕೋಡ್ ಅಳವಡಿಸುವುದು.
- ಕೆಲವು ದೇವಾಲಯಗಳಲ್ಲಿ ಹುಂಡಿಗಳಿಗೆ ಅಳವಡಿಸುವ ಕ್ಯೂಆರ್ ಕೋಡ್‌ಗಳನ್ನು ದುರಪಯೋಗಪಡಿಸಿಕೊಳ್ಳುತ್ತಿರುವುದಾಗಿ ತಿಳಿದು ಬಂದಿರುವುದರಿಂದ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್ ಅನ್ನು ಹಾಳು ಮಾಡದಂತೆ/ಅದರ ಮೇಲೆ ಪ್ರತ್ಯೇಕವಾಗಿ ಬೇರೆ ಕ್ಯೂಆರ್ ಕೋಡ್ ಅನ್ನು ಅಳವಡಿಸಲು ಸಾಧವಾಗದಂತೆ ಇವುಗಳನ್ನು ಸಂರಕ್ಷಿಸಲು ದೇವಾಲಯದ ಅಧಿಕಾರಿಗಳು ಕಾಲ ಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
- ಹುಂಡೆ ಎಣಿಕೆಯಲ್ಲಿ ಕಂದಾಯ ಅಧಿಕಾರಿಗಳು ಕಡಾಯವಾಗಿ ಭಾಗವಹಿಸಲು ಹುಂಡಿ ಎಣಿಕೆ ದಿನಾಂಕಗಳನ್ನು ಮುಂಚಿತವಾಗಿಯೇ ಕ್ಯಾಲೆಂಡರ್‌ನಲ್ಲಿ `ಹುಂಡಿ ಎಣಿಕೆ’ ದಿನಗಳನ್ನು ನಿಗದಿಪಡಿಸುವುದು.
- ಹೆಚ್ಚು ದೇಣಿಗೆ/ಕಾಣಿಕೆ ಬರುವ ದೇವಾಲಯಗಳಲ್ಲಿ ವಾರಕ್ಕೆ ಒಂದು ದಿವಸ ಹಾಗೂ ಸಾಧಾರಣ ದೇಣಿಗೆ/ಕಾಣಿಕೆ ಬರುವ ದೇವಾಲಯಗಳಲ್ಲಿ ಎರಡು ವಾರಕ್ಕೆ ಒಂದು ದಿವಸ ಕಡ್ಡಾಯವಾಗಿ ಹುಂಡಿ ಎಣಿಕೆ ದಿನಾಂಕಗಳನ್ನು ಮುಂಚಿತವಾಗಿಯೇ ಕ್ಯಾಲೆಂಡರ್‌ನಲ್ಲಿ `ಹುಂಡಿ ಎಣಿಕೆ’ ದಿನಗಳನ್ನು ನಿಗದಿಪಡಿಸುವುದು.
- ಹುಂಡಿ ಎಣಿಕೆಯನ್ನು ಸಂಬಂಧಪಟ್ಟ ತಹಶೀಲ್ದಾರ್‌ರವರ ಮೇಲ್ವಿಚಾರಣೆಯಲ್ಲಿ ನಡೆಸುವುದು.
- ಹುಂಡಿ ಎಣಿಕೆ ಸಂದರ್ಭದಲ್ಲಿ ಸ್ವೀಕೃತವಾಗಬಹುದಾದ ಚಿನ್ನ/ ಬೆಳ್ಳಿ ಇತ್ಯಾದಿ ವಸ್ತುಗಳನ್ನು ಎಣಿಕೆ ದಿನದಂದೇ ಕಡ್ಡಾಯವಾಗಿ ಮೌಲ್ಯಮಾಪನ ಮಾಡಿಸಿ, ಅಂದೇ ಸಂಬಂಧಪಟ್ಟ ಜಿಲ್ಲಾ ಉಪಖಜಾನೆಯಲ್ಲಿ, ಸೂಕ್ತ ಮೇಲ್ವಿಚಾರಣೆಯೊಂದಿಗೆ ಜಮಾ ಮಾಡಬೇಕು.
- ಹುಂಡಿ ಎಣಿಕೆ ಸಮಯದಲ್ಲಿ ಹಾಜರಿರುವ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಖಚಿತ ಪಡಿಸಿಕೊಳ್ಳಲು ಫೇಸ್ ರಿಕ್ಗನೀಶನ್ ಅನ್ನು ಅಳವಡಿಸುವುದು ಮತ್ತು ಸದರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಎಣಿಕೆಗೆ ಪ್ರವೇಶಿಸುವ ಸಂದರ್ಭದಲ್ಲಿ ಕ್ಯಾಶ್ ಇನ್ ಹ್ಯಾಂಡ್ ಘೋಷಿಸುವುದು.
- ಹುಂಡಿ ತೆರೆಯುವುದರಿಂದ, ಹುಂಡಿ ಎಣಿಕೆ ಮಾಡಿ ಬ್ಯಾಂಕಿನವರಿಗೆ ಹಸ್ತಾಂತರಿಸುವವರೆಗೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣವನ್ನು ದಿನಾಂಕ ಮತ್ತು ಸಮಯ ದಾಖಲೆಯಾಗುವಂತೆ ಕಡ್ಡಾಯವಾಗಿ ಚಿತ್ರೀಕರಿಸುವುದು.
- ಹುಂಡಿ ಎಣಿಕೆ ಪ್ರಕ್ರಿಯೆಯ ಸಂದರ್ಭದಲ್ಲಿ, ಸ್ಥಳಾಂತರಿಸಬಹುದಾದ ಹುಂಡಿಯನ್ನು ಸ್ಥಳಾಂತರಿಸುವುದರಿಂದ ಪ್ರಾರಂಭಿಸಿ, ಹುಂಡಿ ಹಣವನ್ನು ಹುಂಡಿಯಿಂದ ಹೊರ ತೆಗೆಯುವ ಹಾಗೂ ಹುಂಡಿ ಎಣಿಕೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಿಬ್ಬಂದಿಗೆ ಎಣಿಕೆ ಮಾಡಲು ನೀಡುವ ಹಣ ಮತ್ತು ಅವರು ಎಣಿಕೆ ಮಾಡಿದ ನಂತರ ಹಿಂದಿರುಗಿಸುವವರೆಗೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣವನ್ನು ದಿನಾಂಕ ಮತ್ತು ಸಮಯ ದಾಖಲೆಯಾಗುವಂತೆ ಕಡ್ಡಾಯವಾಗಿ ಚಿತ್ರೀಕರಿಸುವುದು.
- ಹುಂಡಿ ಎಣಿಕೆಗೆ ಸಾರ್ವಜನಿಕರ ಸೇವೆಯನ್ನು ಪಡೆಯುವುದರ ಬದಲಿಗೆ ಕಡ್ಡಾಯವಾಗಿ ಗೃಹ ರಕ್ಷಕದಳದ ಸಿಬ್ಬಂದಿಯವರ/ ಬ್ಯಾಂಕ್ ಸಿಬ್ಬಂದಿ/ಸರ್ಕಾರಿ ನೌಕರರ ಸೇವೆಯನ್ನು ಪಡೆಯುವುದು. ಖಾಸಗಿ/ಸಾರ್ವಜನಿಕರ ಸೇವೆಯನ್ನು ಹುಂಡಿ ಎಣಿಕೆಗೆ ಪಡೆಯುವಂತಿಲ್ಲ.
- ಹುಂಡಿಗಳ ಎಣಿಕೆ ಸಮಯದಲ್ಲಿ ಮತ್ತು ಹುಂಡಿಗಳಲ್ಲಿ ಕಳ್ಳತನದ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ದೇವಾಲಯದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
ಪರಿಶೀಲನಾ ಕ್ರಮಗಳು:
1. ಸ್ಥಳೀಯ ಪೊಲೀಸರೊಂದಿಗೆ ಸಿಸಿಟಿವಿ ಲೈವ್ ಫೀಡ್‌ನ ಏಕೀಕರಣ
2. ಸ್ಥಳೀಯ ಪೊಲೀಸರಿಂದ ನಿಯಮಿತ ಮೇಲ್ವಿಚಾರಣೆ
3. ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ
4. ಅಗ್ನಿ ಸುರಕ್ಷತಾ ಸಿದ್ಧತೆ ಮತ್ತು ನಿರ್ದಿಷ್ಟ ಸುರಕ್ಷತಾ ಮಾನದಂಡಗಳ ಅನುಪಾಲನೆ
5. ಸಿಸಿಟಿವಿ ಕಣಾವಲು ವ್ಯವಸ್ಥೆಗಳ ಕಾರ್ಯನಿರ್ವಹಣೆ ಮತ್ತು ಸಮರ್ಪಕತೆ
6. ಸ್ಥಳೀಯ ಪೊಲೀಸರೊಂದಿಗೆ ಸಿಸಿಟಿವಿ ಲೈವ್ ಫೀಡ್‌ನ ಏಕೀಕರಣ ಮತ್ತು ಕಾರ್ಯಾಚರಣೆಯ ಸ್ಥಿತಿ.ಇದನ್ನೂ ಓದಿ:ರಾಮಮಂದಿರ ದೇಣಿಗೆ ಲೂಟಿ ಬೆನ್ನಲ್ಲೇ ರಾಜ್ಯದಲ್ಲಿ ಅಲರ್ಟ್ – ಶೀಘ್ರವೇ ಹುಂಡಿ ಹಣ ಎಣಿಕೆಗೆ ಮಾರ್ಗಸೂಚಿ
ತುರ್ತು ಪ್ರತಿಕ್ರಿಯೆ ಮತ್ತು ವಿಪತ್ತು ಸಿದ್ಧತೆ ಕ್ರಮಗಳು
ಸ್ಥಳ ಪರಿಶೀಲನೆ:
- ಸ್ಥಳೀಯ ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಪ್ರಾಧಿಕಾರಗಳು ಮತ್ತು ಇತರೆ ಸಂಬಂಧಪಟ್ಟ ಅಧಿಕಾರಿಗಳು ಕನಿಷ್ಠ 15 ದಿನಗಳಿಗೊಮ್ಮೆ ದೇವಾಲಯಗಳಿಗೆ ಜಂಟಿಯಾಗಿ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಬೇಕು. ಮೇಲಿನಂತೆ ಎಲ್ಲಾ ವ್ಯವಸ್ಥೆಗಳು ಸುವ್ಯವಸ್ಥಿತ ರೀತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ನ್ಯೂನತೆಗಳಿದ್ದಲ್ಲಿ ಕೂಡಲೇ ಸರಿಪಡಿಸಬೇಕು.
- ಎಲ್ಲಾ ಪ್ರಮುಖ `ಎ’ ಮತ್ತು ‘ಬಿ’ ಪ್ರವರ್ಗದ ದೇವಾಲಯಗಳಿಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು/ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪಂಚಾಯತ್‌ನ ಮುಖ ಕಾರ್ಯ ನಿರ್ವಹಣಾಧಿಕಾರಿಗಳು ಇತರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ 3 ತಿಂಗಳುಗಳಿಗೊಮ್ಮೆ ಜಂಟಿಯಾಗಿ ಭೇಟಿ ನೀಡಿ, ಎಲ್ಲಾ ವ್ಯವಸ್ಥೆಗಳು ಮಾರ್ಗಸೂಚಿಗಳನ್ವಯ ಸುವ್ಯವಸ್ಥಿತ ರೀತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನ್ಯೂನತೆಗಳಿದ್ದಲ್ಲಿ ಕೂಡಲೇ ಸರಿಪಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು.
ಮಾಸಿಕ ಅನುಸರಣಾ ವರದಿ:
- ಜಿಲ್ಲಾಧಿಕಾರಿಗಳು, ಅನುಷ್ಠಾನದ ಹಂತ, ಗಮನಿಸಿದ ನ್ಯೂನತೆಗಳು, ನ್ಯೂನತೆಗಳನ್ನು ಸರಿಪಡಿಸಲು ತೆಗೆದುಕೊಂಡ ಕ್ರಮಗಳು ಮತ್ತು ಕ್ರಿಯಾ ಯೋಜನೆ ಅಂಶಗಳನ್ನು ಸೂಚಿಸುವ ಕ್ರೋಢೀಕೃತ ಮಾಸಿಕ ಅನುಸರಣಾ ಮತ್ತು ಪರಿಶೀಲನಾ ವರದಿಯನ್ನು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸರ್ಕಾರಕ್ಕೆ ಸಲ್ಲಿಸಿ, ಅದರ ಪ್ರತಿಯನ್ನು ಒಳಾಡಳಿತ ಇಲಾಖೆ ಮತ್ತು ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಿಗೆ ಸಲ್ಲಿಸಬೇಕು.ಇದನ್ನೂ ಓದಿ:ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: ತನಿಖಾ ವರದಿ ಸಲ್ಲಿಸುವಂತೆ ಸುಪ್ರೀಂ ಆದೇಶ
