ಬೆಂಗಳೂರು: ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ(Dhanveer) ವಿರುದ್ಧ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ, ನಟ ಝೈದ್ ಖಾನ್(Zaid Khan) ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (KFCC) ದೂರು ನೀಡಲು ನಿರ್ಧರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೋವೊಂದರಲ್ಲಿ ಧನ್ವೀರ್, ಝೈದ್ ಖಾನ್ ವಿರುದ್ಧ ಕೆಳಮಟ್ಟದ ಭಾಷೆ ಬಳಸಿ ನಿಂದಿಸಿದ್ದಾರೆ ಎನ್ನಲಾದ ವಿಚಾರವೇ ಈ ವಿವಾದಕ್ಕೆ ಕಾರಣವಾಗಿದೆ. “ಝೈದ್ ಖಾನ್ ನನ್ನ ಕಾಲಿನ ಧೂಳಿಗೂ ಸಮನಲ್ಲ” ಎಂದು ಧನ್ವೀರ್ ಮಾತನಾಡಿದ್ದಾರೆನ್ನಲಾದ ಅಂಶಗಳು ಆಡಿಯೋದಲ್ಲಿ ದಾಖಲಾಗಿವೆ.
ಈ ಮಾತುಗಳಿಂದ ತೀವ್ರ ಅಸಮಾಧಾನಗೊಂಡಿರುವ ಝೈದ್ ಖಾನ್, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂದು ಮಧ್ಯಾಹ್ನ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ ಧನ್ವೀರ್ ವಿರುದ್ಧ ಅಧಿಕೃತವಾಗಿ ದೂರು ಸಲ್ಲಿಸಲಿದ್ದಾರೆ. ಕನ್ನಡ ಚಿತ್ರರಂಗದ ಇಬ್ಬರು ಯುವ ನಟರ ನಡುವಿನ ಈ ತಿಕ್ಕಾಟ ಇದೀಗ ಗಾಂಧಿನಗರದ ಅಂಗಳ ತಲುಪಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
