ನವದೆಹಲಿ: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ (Bike Taxi) ಸೇವೆಗಳಿಗೆ ಅನುಮತಿ ನೀಡಿದ ಹೈಕೋರ್ಟ್ (High Court) ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ (Karnataka Govt) ಕಾನೂನು ಹೋರಾಟ ನಡೆಸುತ್ತಿದ್ದು, ಸುಪ್ರೀಂಕೋರ್ಟ್ (Supreme Court) ನ.16ಕ್ಕೆ ವಿಚಾರಣೆ ಮುಂದೂಡಿದೆ.
ಕಾನೂನು ಹೋರಾಟ ನಡೆಸುತ್ತಿರುವ ರಾಜ್ಯ ತನ್ನ ಪರ ವಾದ ಮಂಡಿಸಲು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ನೇಮಿಸಿದೆ. ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರ ಪೀಠದ ಮುಂದೆ ತುಷಾರ್ ಮೆಹ್ತಾ ವರ್ಚುವಲ್ ಮೂಲಕ ಹಾಜರಾಗಿ, ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿದರು. ಇದಕ್ಕೆ ಅನುಮತಿ ನೀಡಿದ ಪೀಠ, ನವೆಂಬರ್ 16ರಂದು ಪ್ರಕರಣವನ್ನು ಮತ್ತೆ ವಿಚಾರಣೆಗೆ ಪಟ್ಟಿ ಮಾಡಲು ಸೂಚಿಸಿತು. ಇದನ್ನೂ ಓದಿ:ರೈ ತರ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ದ: ರುದ್ರಪ್ಪ ಲಮಾಣಿ
ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ನ (Karnataka High Court) ತೀರ್ಪನ್ನು ಪ್ರಶ್ನಿಸಿರುವ ರಾಜ್ಯ ಸರ್ಕಾರ, ಪ್ರಯಾಣಿಕರ ಸುರಕ್ಷತೆ, ವಿಮಾ ರಕ್ಷಣೆ ಹಾಗೂ ಸೂಕ್ತ ನಿಯಂತ್ರಣ ವ್ಯವಸ್ಥೆಯ ಅಗತ್ಯವನ್ನು ಮುಂದಿಟ್ಟಿದೆ. ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಸ್ಪಷ್ಟವಾದ ನಿಯಮಾವಳಿ ಮತ್ತು ಸುರಕ್ಷತಾ ಕ್ರಮಗಳು ಅಗತ್ಯವೆಂಬುದು ರಾಜ್ಯದ ವಾದವಾಗಿದೆ.
ವಿಚಾರಣೆ ವೇಳೆ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬೆಂಬಲಿಸುವ ಅಗ್ರಿಗೇಟರ್ಗಳ ಪರ ವಕೀಲರು, ಕೇಂದ್ರ ಸರ್ಕಾರವು ತಮ್ಮ ನಿಲುವಿಗೆ ಪೂರಕವಾದ ಸುತ್ತೋಲೆಗಳನ್ನು ಹೊರಡಿಸಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ಹಿನ್ನೆಲೆ ಕೇಂದ್ರ ಸರ್ಕಾರದ ಪರವೂ ಹಾಜರಾಗುವ ತುಷಾರ್ ಮೆಹ್ತಾ, ಸಂಬಂಧಿತ ವಿಚಾರದಲ್ಲಿ ಕೇಂದ್ರದ ನಿಲುವನ್ನು ಸ್ಪಷ್ಟಪಡಿಸಬಹುದು ಎಂದು ನ್ಯಾಯಪೀಠ ಹೇಳಿದೆ.ಇದನ್ನೂ ಓದಿ: ಮಸ್ಕಿಯಲ್ಲಿ ನವರಾತ್ರಿ ಉತ್ಸವಕ್ಕೆ ಅದ್ದೂರಿ ತೆರೆ – ವೈಭವದಿಂದ ನಡೆದ ಭ್ರಮರಾಂಭ ದೇವಿಯ ಜಂಬೂಸವಾರಿ
ಆನ್ಲೈನ್ ಸಾರಿಗೆ ಸೇವಾ ಸಂಸ್ಥೆ ಉಬರ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಜರಾಗಿದ್ದರು. ಕೇಂದ್ರದ ಸುತ್ತೋಲೆಗಳು ಬೈಕ್ ಟ್ಯಾಕ್ಸಿ ಸಂಸ್ಥೆಗಳ ಪರವಾಗಿರುವುದರಿಂದ ತುಷಾರ್ ಮೆಹ್ತಾ ಕರ್ನಾಟಕ ಸರ್ಕಾರದ ಪರ ಮಾತ್ರ ವಾದ ಮಂಡಿಸಬಹುದು ಎಂಬ ಅಭಿಪ್ರಾಯವನ್ನು ಅವರು ಹಾಸ್ಯಮಿಶ್ರಿತವಾಗಿ ವ್ಯಕ್ತಪಡಿಸಿದರು. ಬಳಿಕ ಪ್ರಕರಣದಲ್ಲಿ ತುಷಾರ್ ಮೆಹ್ತಾ ಹಾಜರಾಗುವುದಕ್ಕೆ ತಮ್ಮ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಕರ್ನಾಟಕ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸುತ್ತಿದ್ದರು. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಪಿಡೊ ಸಂಸ್ಥೆಗೆ ಅವರು ಕಾನೂನು ಅಭಿಪ್ರಾಯ ನೀಡಿದ್ದ ವಿಚಾರವನ್ನು ಸಂಸ್ಥೆಯು ನ್ಯಾಯಾಲಯದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ಅವರು ಪ್ರಕರಣದಿಂದ ಹಿಂದೆ ಸರಿದಿದ್ದರು.ಇದನ್ನೂ ಓದಿ:ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನಕ್ಕೆ ತಟ್ಟಿದ ಅಸ್ಪೃಶ್ಯತೆ – ಮಾತಂಗಿ ದೇವಿ ದರ್ಶನಕ್ಕೆ ತಡೆ ಆರೋಪ
