-ಆಡಳಿತಾಧಿಕಾರಿ ವಿರುದ್ಧ ಅರ್ಚಕರ ಆಕ್ರೋಶ, ಮುಜರಾಯಿ ಮಧ್ಯಪ್ರವೇಶಕ್ಕೆ ಆಗ್ರಹ
ಕೊಪ್ಪಳ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗೆಮ್ಮ ದೇವಸ್ಥಾನದಲ್ಲಿ (Huligemma Temple) ಅಸ್ಪೃಶ್ಯತೆ ಆರೋಪ ಕೇಳಿ ಬಂದಿದೆ. ದೇವಸ್ಥಾನ ಆವರಣದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಾತಂಗಿ ದೇವಿ (Matangi Devi) ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಭಕ್ತರು ಆರೋಪಿಸಿದ್ದಾರೆ.
ಈ ಕ್ರಮದಿಂದ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಆಚರಿಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದ್ದು, ಘಟನೆ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಹುಲಿಗೆಮ್ಮ ದೇವಸ್ಥಾನದ ಆಡಳಿತಾಧಿಕಾರಿ ಪ್ರಕಾಶ್ ರಾವ್ ಬಂದ ಮೇಲೆ ಮಾತಂಗಿ ದೇವಿ ದರ್ಶನಕ್ಕೆ ನಿಷೇಧ ಹೇರಲಾಗಿದೆ. ಇದಕ್ಕೆ ದೇಗುಲದ ಅರ್ಚಕರು, ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರು ಯುವತಿಯರು ಸ್ಥಳದಲ್ಲೇ ಸಾವು
ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರು ಹುಲಿಗೆಮ್ಮ ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಸಂಪ್ರದಾಯದಂತೆ ಮೊದಲು ಮಾತಂಗಿ ದೇವಿಗೆ ಮೀಸಲು ಬುತ್ತಿ ಅರ್ಪಿಸಿ, ಸ್ನಾನ ಮಾಡಿದ ಬಳಿಕ ಹುಲಿಗೆಮ್ಮ ದೇವಿಯ ದರ್ಶನ ಪಡೆಯುವ ಪದ್ಧತಿ ಇದೆ ಎನ್ನಲಾಗಿದೆ. ಆದರೆ, ದೇವಸ್ಥಾನದ ಆಡಳಿತಾಧಿಕಾರಿ ಪ್ರಕಾಶ್ ರಾವ್ ಅಧಿಕಾರ ವಹಿಸಿಕೊಂಡ ಮಾತಂಗಿ ದೇವಿಯ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ದೇವಸ್ಥಾನದ ಅರ್ಚಕರು ಆರೋಪಿಸಿದ್ದಾರೆ. ಈ ಕ್ರಮದಿಂದ ಸಂಪ್ರದಾಯಕ್ಕೆ ಧಕ್ಕೆಯಾಗುವುದರ ಜೊತೆಗೆ ಭಕ್ತರ ಧಾರ್ಮಿಕ ಹಕ್ಕುಗಳಿಗೆ ಅಡ್ಡಿಯಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಕ್ರಮಕ್ಕೆ ಅರ್ಚಕರ ಒತ್ತಾಯ:
ಮಾತಂಗಿ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿರುವ ಅರ್ಚಕರು, ದೇವಸ್ಥಾನದಲ್ಲಿ ಯಾವುದೇ ರೀತಿಯ ಜಾತಿ ತಾರತಮ್ಯಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಸರ್ಕಾರ ಹಾಗೂ ಮುಜರಾಯಿ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ, ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪು ಕಂಡುಬಂದಲ್ಲಿ ಸಂಬಂಧ ಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಪ್ರೋತ್ಸಾಹ ಧನ ಘೋಷಣೆಗೆ ಕಬ್ಬು ಬೆಳೆಗಾರರ ಬಿಗಿಪಟ್ಟು – ಸಿಎಂಗೆ 3 ಗಂಟೆ ಡೆಡ್ಲೈನ್!
ಘಟನೆಯಿಂದ ಸ್ಥಳೀಯ ದಲಿತ ಸಂಘಟನೆಗಳು ಹಾಗೂ ಭಕ್ತರಲ್ಲಿ ಅಸಮಾಧಾನ ಉಂಟಾಗಿದೆ ಎನ್ನಲಾಗಿದ್ದು, ಮುಜರಾಯಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ, ವಾಸ್ತವಾಂಶ ಪರಿಶೀಲಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಹುಲಿಗೆಮ್ಮ ಆಡಳಿತಾಧಿಕಾರಿ ಪ್ರಕಾಶ್ ರಾವ್ ಇದರ ಬಗ್ಗೆ ಕೇಳಿದ್ರೆ ಸೀಗೆ ಹುಣ್ಣಿಮೆ ಹಿನ್ನೆಲೆ ಲಕ್ಷಾಂತರ ಭಕ್ತರು ದರ್ಶನಕ್ಕೆ ಬರುತ್ತಾರೆ. ಅವರಿಗೆ ಯಾವುದೇ ಸಮಸ್ಯೆ ಆಗಬಾರದು ಎಂದು ತಾಯಿ ದರ್ಶನ ನಂತರ ಹೊರಗೆ ಹೊಗಲು ಬ್ಯಾರಿಕೇಡ್ ಹಾಕಲಾಗಿದೆ. ಪ್ರತಿದಿನ ಭಕ್ತರಿಗೆ ಮಾತಂಗಿ ದೇವಸ್ಥಾನಕ್ಕೆ ಹೋಗಲು ಅನುಕೂಲ ಇದೆ ಎಂದಿದ್ದಾರೆ.ಇದನ್ನೂ ಓದಿ: ಒಂದೇ ದಿನ ಎರಡು ಸುತ್ತಿನ ಕೌನ್ಸೆಲಿಂಗ್ – 191 ವೈದ್ಯಕೀಯ ಸೀಟು ಉಳಿಕೆ
