ಬೆಳಗಾವಿ: ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹ ಧನ ಘೋಷಣೆ ಮಾಡುವಂತೆ ಬಿಗಿ ಪಟ್ಟು ಹಿಡಿದಿರುವ ರೈತರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ 3 ಗಂಟೆಗಳ ಗಡುವು ನೀಡಿದ್ದಾರೆ.
ಇಂದೇ ಪ್ರೋತ್ಸಾಹ ಧನ ಘೋಷಣೆ ಮಾಡಬೇಕು ಎಂದು ಪಟ್ಟು ಹಿಡಿದಿರುವ ಕಬ್ಬು ಬೆಳೆಗಾರರು, ಪ್ರತಿ ಟನ್ ಕಬ್ಬಿಗೆ 1,000 ರೂಪಾಯಿ ಪ್ರೋತ್ಸಾಹ ಧನ ನೀಡುವಂತೆ ಆಗ್ರಹಿಸಿದ್ದಾರೆ.
ಮೊದಲ ಸುತ್ತಿನ ಮಾತುಕತೆ ವಿಫಲವಾದ ಬಳಿಕ ಬೆಳಗಾವಿಯ ಸುವರ್ಣ ಸೌಧದಲ್ಲಿ ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಿತು. ಸುಮಾರು 3 ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ಪ್ರೋತ್ಸಾಹ ಧನ ನೀಡುವ ಕುರಿತು ರೈತರು ತಮ್ಮ ಬೇಡಿಕೆಯನ್ನ ಸರ್ಕಾರದ ಮುಂದಿಟ್ಟರು. ಆದರೆ, ಪ್ರೋತ್ಸಾಹ ಧನದ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಂದ ಯಾವುದೇ ಸ್ಪಷ್ಟ ಭರವಸೆ ಸಿಗದ ಹಿನ್ನೆಲೆ ರೈತರು ಅಸಮಾಧಾನ ವ್ಯಕ್ತಪಡಿಸಿದರು.

3 ಗಂಟೆಗಳ ಗಡುವು
ಸಭೆಯ ಬಳಿಕವೂ ಪ್ರೋತ್ಸಾಹ ಧನದ ಕುರಿತು ಸ್ಪಷ್ಟ ನಿರ್ಧಾರ ಪ್ರಕಟವಾಗದ ಹಿನ್ನೆಲೆ, ಇಂದೇ ಘೋಷಣೆ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ. ಸಭೆ ಮುಕ್ತಾಯದ ನಂತರ ಸರ್ಕಾರಕ್ಕೆ 3 ಗಂಟೆಗಳ ಕಾಲಾವಕಾಶ ನೀಡಿದ್ದು, ಈ ಅವಧಿಯೊಳಗೆ ಪ್ರೋತ್ಸಾಹ ಧನ ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ರೈತರ ಬೇಡಿಕೆಯ ಹಿನ್ನೆಲೆ ಪ್ರೋತ್ಸಾಹ ಧನದ ಮೊತ್ತವನ್ನು ನಿರ್ಧರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರು ಸಚಿವರು ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಸರ್ಕಾರದ ಬೊಕ್ಕಸದಲ್ಲಿರುವ ಹಣಕಾಸಿನ ಲಭ್ಯತೆ ಮತ್ತು ಪ್ರೋತ್ಸಾಹ ಧನ ನೀಡುವುದರಿಂದ ಉಂಟಾಗುವ ಆರ್ಥಿಕ ಹೊರೆ ಕುರಿತು ಮಾಹಿತಿ ಪಡೆದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಮೊದಲ ಸುತ್ತಿನ ಮಾತುಕತೆಯ ಬಳಿಕ ಕಬ್ಬು ಬೆಳೆಗಾರರೊಂದಿಗೆ ಎರಡನೇ ಸುತ್ತಿನ ಸಭೆಯೂ ನಡೆದಿದ್ದು, ಸರ್ಕಾರದ ಮುಂದಿನ ನಡೆ ಏನಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
