ರಾಯಚೂರು: ಜಿಲ್ಲೆಯ ಮಸ್ಕಿಯಲ್ಲಿ (Maski) ಭ್ರಮರಾಂಭ ದೇವಿಯ ಜಂಬೂ ಸವಾರಿ ಹಾಗೂ ದೇವಸ್ಥಾನದ 56ನೇ ವರ್ಷದ ಮಹಾದೇವಿ ಪುರಾಣದ ಮಂಗಳೋತ್ಸವ ಅದ್ದೂರಿಯಾಗಿ ನೆರವೇರಿದ್ದು, ದೇವಿಯ ಜಂಬೂ ಸವಾರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಳೆಕಟ್ಟಿತ್ತು.
ರಾಣಿ ಹೆಸರಿನ ಆನೆ ಭ್ರಮರಾಂಭ ದೇವಿಯ (Bhramaramba Devi) ಮೂರ್ತಿ ಪ್ರತಿಷ್ಠಾಪಿತ ಅಂಬಾರಿಯನ್ನ ಹೊತ್ತು ಸಾಗಿತು. ಅಂಬಾರಿ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದ್ದ ಭ್ರಮರಾಂಭ ದೇವಿ ಮೂರ್ತಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಶಾಸಕ ಬಸನಗೌಡ ತುರುವಿಹಾಳ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು. ಇದನ್ನೂ ಓದಿ: ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನಕ್ಕೆ ತಟ್ಟಿದ ಅಸ್ಪೃಶ್ಯತೆ – ಮಾತಂಗಿ ದೇವಿ ದರ್ಶನಕ್ಕೆ ತಡೆ ಆರೋಪ
ಅಗಸಿ, ದೈವದಕಟ್ಟೆ, ತೇರು ಬೀದಿ, ಕನಕವೃತ್ತದ ಮೂಲಕ ಸಾಗಿದ ಜಂಬೂಸವಾರಿ ಭ್ರಮರಾಂಭ ದೇವಸ್ಥಾನಕ್ಕೆ ಆಗಮಿಸಿತು. ದಾರಿಯುದ್ದಕ್ಕೂ ಜಂಬೂ ಸವಾರಿಗೆ ಭವ್ಯ ಸ್ವಾಗತ ಕೋರಲಾಯಿತು. ಸಾವಿರಕ್ಕೂ ಹೆಚ್ಚು ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ನಂದಿ ಧ್ವಜ ಕುಣಿತ, ವೀರಗಾಸೆ ನೃತ್ಯ, ನಾಸಿಕ್ ಡೊಳ್ಳು, ಕರಡಿ ಮಜಲು, ಸಂಬಾಳ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಗಮನ ಸೆಳೆದವು.
ಭ್ರಮರಾಂಭ ದೇವಿಯ ವಿಗ್ರಹಕ್ಕೆ ವಿವಿಧ ಧಾರ್ಮಿಕ ಪೂಜೆಗಳು ನಡೆದವು. ಗಂಗಾಸ್ಥಳದಿಂದ ಸಾವಿರಕ್ಕೂ ಹೆಚ್ಚು ಕುಂಭಗಳಲ್ಲಿ ತರಲಾಗಿದ್ದ ಜಲದಿಂದ ಅಭಿಷೇಕ ನಡೆಯಿತು. 20 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವ್ಯವಸ್ಥೆ ನಡೆಯಿತು. ಜಂಬೂ ಸವಾರಿ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದನ್ನೂ ಓದಿ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರು ಯುವತಿಯರು ಸ್ಥಳದಲ್ಲೇ ಸಾವು
