ದೇಶದೆಲ್ಲೆಡೇ ಎಲ್ ನಿನೋದಿಂದಾಗಿ ಮಳೆ ಪ್ರಮಾಣ ಕಡಿಮೆಯಾಗಿದೆ. ಮಳೆಯಿಂದಾಗಿ ರೈತರು ಸಮಸ್ಯೆ ಎದುರಿಸುವಂತಾಗಿದ್ದು, ಇತ್ತ ನದಿ, ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರ ನಡುವೆ ಎಲ್ ನಿನೋ ಪರಿಣಾಮ ಕೇವಲ ಮಳೆಗಷ್ಟೇ ಅಲ್ಲದೇ, ವಸ್ತುಗಳ ಮೇಲೆಯೂ ಪರಿಣಾಮ ಬೀರುತ್ತದೆ. ಇದರಿಂದ ಜನರಿಗೆ ಬೇಕಾಗುವ ವಸ್ತುಗಳು ದುಬಾರಿಯಾಗಿ ಜೇಬಿಗೆ ಕತ್ತರಿಬೀಳುತ್ತದೆ. ಜಾಗತಿಕ ಹವಾಮಾನ ಇಲಾಖೆ ತಜ್ಞರು ಎಚ್ಚರಿಸುತ್ತಿರುವ ‘ಎಲ್ ನಿನೋ’ (El Niño) ಪರಿಣಾಮ ಕೇವಲ ವಾತಾವರಣದ ಏರುಪೇರಷ್ಟೇ ಅಲ್ಲ, ಇದು ಇಡೀ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಬಲ್ಲ ಮಹಾ ಮಾರಿ.
ಮಳೆ ಕೊರತೆಯಿಂದಾಗಿ ಜಲಾಶಯಗಳು ಬತ್ತಿ ಹೋದರೆ, ಅದರ ನೇರ ಹೊಡೆತ ಬೀಳುವುದು ನಿಮ್ಮ ಅಡುಗೆಮನೆಯ ದಿನಸಿ ಸಾಮಗ್ರಿಗಳ ಮೇಲೆ. ತರಕಾರಿ, ಬೇಳೆಕಾಳುಗಳಿಂದ ಹಿಡಿದು ಹಾಲಿನ ದರದವರೆಗೆ ಪ್ರತಿಯೊಂದು ವಸ್ತುವಿನ ಬೆಲೆಯೂ ಗಗನಕ್ಕೇರಲಿದೆ. ಅದು ಹೇಗೆ? ಎಲ್ ನಿನೋಗೂ ಹಾಗೂ ಬೆಲೆ ಏರಿಕೆಗೂ ಏನು ಸಂಬಂಧ ಎನ್ನುವ ಕುರಿತು ಮಾಹಿತಿ ಇಲ್ಲಿದೆ.
ಏನಿದು ಎಲ್ ನಿನೋ?
ಜಾಗತಿಕವಾಗಿ ಹವಾಮಾನ ಏರುಪೇರಾದಾಗಲೆಲ್ಲ ಹೆಚ್ಚು ಕೇಳಿಬರುವ ಹೆಸರೇ ‘ಎಲ್ ನಿನೋ’. ಪ್ರಪಂಚದ ಒಂದು ಮೂಲೆಯಲ್ಲಿ ನಡೆಯುವ ಈ ಪ್ರಕ್ರಿಯೆ ಭಾರತದ ಮುಂಗಾರು ಮಳೆಯ (Mansoon Rain) ಮೇಲೆ ನೇರ ಪ್ರಭಾವ ಬೀರುತ್ತದೆ.
ಪೆಸಿಫಿಕ್ ಮಹಾಸಾಗರದ (Pacific Ocean) ವಿಷುವದ್ರೇಖೆಯ ಸಮೀಪದಲ್ಲಿ ಸಮುದ್ರದ ಮೇಲ್ಮೈ ನೀರು ಸಾಮಾನ್ಯಕ್ಕಿಂತ ಹೆಚ್ಚು ಬೆಚ್ಚಗಾಗುವ ಪ್ರಕ್ರಿಯೆಯನ್ನು ‘ಎಲ್ ನಿನೋ’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳ ಆಸುಪಾಸಿನಲ್ಲಿ (ಕ್ರಿಸ್‌ಮಸ್ ಸಮಯದಲ್ಲಿ) ಪೆರು ದೇಶದ ಕರಾವಳಿಯಲ್ಲಿ ಈ ವಿದ್ಯಮಾನವು ಗೋಚರವಾಗುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಸ್ಪ್ಯಾನಿಷ್ ಭಾಷೆಯಲ್ಲಿ ‘ಎಲ್ ನಿನೋ’ ಎಂದರೆ “ಪುಟ್ಟ ಬಾಲಕ” ಅಥವಾ “ಯೇಸು ಕ್ರಿಸ್ತ” ಎಂದರ್ಥ. ಇದು ಪ್ರತಿ 2 ರಿಂದ 7 ವರ್ಷಗಳಿಗೊಮ್ಮೆ ಸಂಭವಿಸುವ ನೈಸರ್ಗಿಕ ಬದಲಾವಣೆಯಾಗಿದೆ.
ಎಲ್ ನಿನೋ ಹೇಗೆ ಸಂಭವಿಸುತ್ತದೆ?
- ಸಾಮಾನ್ಯವಾಗಿ ಪೆಸಿಫಿಕ್ ಮಹಾಸಾಗರದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ (ಅಮೆರಿಕಾದಿಂದ ಏಷ್ಯಾದ ಕಡೆಗೆ) ಬಲವಾದ ಮಾರುತಗಳು ಬೀಸುತ್ತವೆ. ಇವು ಸಮುದ್ರದ ಮೇಲ್ಮೈಯ ಬಿಸಿ ನೀರನ್ನು ಏಷ್ಯಾ ಮತ್ತು ಆಸ್ಟ್ರೇಲಿಯಾದ ಕಡೆಗೆ ತಳ್ಳುತ್ತವೆ. ಇದರಿಂದ ನಮ್ಮ ಭಾಗದಲ್ಲಿ ಉತ್ತಮ ಮಳೆಯಾಗುತ್ತದೆ.
- ಆದರೆ ಎಲ್ ನಿನೋ ವರ್ಷದಲ್ಲಿ ಈ ಮಾರುತಗಳು ದುರ್ಬಲಗೊಳ್ಳುತ್ತವೆ. ಆಗ ಪಶ್ಚಿಮಕ್ಕೆ ಹೋಗಬೇಕಿದ್ದ ಬಿಸಿ ನೀರು ಉಲ್ಟಾ ತಿರುಗಿ ದಕ್ಷಿಣ ಅಮೆರಿಕಾದ (ಪೆರು ಕರಾವಳಿ) ಕಡೆಗೆ ಚಲಿಸುತ್ತದೆ. ಇದರಿಂದಾಗಿ ಸಮುದ್ರದ ಮಧ್ಯ ಮತ್ತು ಪೂರ್ವ ಭಾಗಗಳು ಅತಿಯಾಗಿ ಕಾಯುತ್ತವೆ.
ಭಾರತದ ಮೇಲಾಗುವ ಪರಿಣಾಮಗಳೇನು?
ಭಾರತ, ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾದಂತಹ ದೇಶಗಳು ಭೀಕರ ಬರಗಾಲ ಎದುರಿಸಿದರೆ, ಇತ್ತ ದಕ್ಷಿಣ ಅಮೆರಿಕಾದ ಪೆರು, ಈಕ್ವೆಡಾರ್ ದೇಶಗಳಲ್ಲಿ ಅತಿಯಾದ ಮಳೆಯಾಗಿ ಪ್ರವಾಹ ಸೃಷ್ಟಿಯಾಗುತ್ತದೆ. ಎಲ್ ನಿನೋ ಸಮುದ್ರದ ನೀರು ಬಿಸಿಯಾಗಿ ಭಾರತದಲ್ಲಿ ಬರಗಾಲ ತರುತ್ತದೆ. ಲಾ ನಿನೋ ಸಮುದ್ರದ ನೀರು ಅತಿಯಾಗಿ ತಂಪಾಗಿ ಭಾರತದಲ್ಲಿ ಅತಿವೃಷ್ಟಿ (\ಮತ್ತು ಪ್ರವಾಹ ಉಂಟುಮಾಡುತ್ತದೆ.
ಎಲ್ ನಿನೋದಿಂದಾಗಿ ಬೆಲೆ ಹೆಚ್ಚಳ ಹೇಗೆ?
ಪೆಸಿಫಿಕ್ ಮಹಾಸಾಗರದಲ್ಲಿ ಉಂಟಾಗುವ ‘ಎಲ್ ನಿನೋ’ದಿಂದಾ ಭಾರತದಲ್ಲಿ ಮುಂಗಾರು ಮಳೆ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ನಿತ್ಯಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಬಹುದು. ಅದರಂತೆ ಇದೀಗ ಚಹಾ ಪುಡಿ, ಗೋಧಿ, ಬೇಳೆಕಾಳುಗಳು, ತರಕಾರಿ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.
ಹಾಲು:
ಮಳೆ ಕಡಿಮೆಯಾದರೆ ದನಕರುಗಳಿಗೆ ಹಸಿರು ಮೇವು ಮತ್ತು ಕುಡಿಯುವ ನೀರಿನ ಕೊರತೆಯಾಗುತ್ತದೆ. ಮಳೆಯಿಂದಾಗಿ ದನಕರುಗಳಿಗೆ ಮೇವು ಸಿಗದೇ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಈಗಾಗಲೇ ಮೇ ತಿಂಗಳಲ್ಲಿ ಹಾಲಿನ ಬೆಲೆ ಶೇ.2-3ರಷ್ಟು ಹೆಚ್ಚಾಗಿದೆ. ಜುಲೈ ಅಥವಾ ಆಗಸ್ಟ್‌ನಲ್ಲಿ ಮಳೆ ಕಡಿಮೆಯಾದರೆ, ಬೆಲೆ ಮತ್ತಷ್ಟು ಹೆಚ್ಚಾಗಬಹುದು. ಇದರಿಂದ ಮೊಸರು, ಪನ್ನೀರ್, ತುಪ್ಪ, ಬೆಣ್ಣೆ ಮುಂತಾದ ಡೈರಿ ಉತ್ಪನ್ನಗಳ ಬೆಲೆಯೂ ಏರಲಿದೆ.
ಕಡಿಮೆ ಮಳೆಯಿಂದಾಗಿ ದೇಶದಲ್ಲಿ ಕೃಷಿ ಉತ್ಪಾದನೆ ಕುಂಠಿತಗೊಂಡು ದಿನಬಳಕೆಯ ಪ್ರಮುಖ ವಸ್ತುಗಳ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ. ಪ್ರಮುಖವಾಗಿ ತೊಗರಿ ಬೆಳೆಯಂತಹ ಬೇಳೆಕಾಳುಗಳ ಇಳುವರಿ ಕಡಿಮೆಯಾಗುವ ಅಪಾಯವಿದ್ದರೆ, ಸೋಯಾಬಿನ್‌ನಂತಹ ಎಣ್ಣೆಕಾಳುಗಳ ಉತ್ಪಾದನೆ ಕುಸಿತದಿಂದಾಗಿ ಅಡುಗೆ ಎಣ್ಣೆಯ ಬೆಲೆಯೂ ಹೆಚ್ಚಾಗಬಹುದು. ಇದರೊಂದಿಗೆ ಪೂರೈಕೆಯಲ್ಲಿನ ವ್ಯತ್ಯಾಸದಿಂದ ಟೊಮೆಟೊ ಸೇರಿದಂತೆ ಇತರೆ ತರಕಾರಿಗಳ ಬೆಲೆ ತಕ್ಷಣವೇ ಏರಲಿದ್ದು, ಪಶು ಆಹಾರದ ದರ ಹೆಚ್ಚಳದಿಂದಾಗಿ ಕೋಳಿ ಮತ್ತು ಮೊಟ್ಟೆಯ ಬೆಲೆಯೂ ದುಬಾರಿಯಾಗುವ ಸಾಧ್ಯತೆಯಿದೆ.
ಅಕ್ಕಿ ಮತ್ತು ಗೋಧಿಯ ಬೆಲೆಗಳು ಸದ್ಯಕ್ಕೆ ತಕ್ಷಣವೇ ಏರಿಕೆಯಾಗುವುದಿಲ್ಲ. ಏಕೆಂದರೆ ಭಾರತ ಸರ್ಕಾರದ ಬಳಿ ಇವುಗಳ ಸಾಕಷ್ಟು ಪ್ರಮಾಣದ ದಾಸ್ತಾನು ಲಭ್ಯವಿದೆ. ಇವುಗಳಿಗೆ ಉತ್ತಮ ನೀರಾವರಿ ಸೌಲಭ್ಯವಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಏರಿಕೆಯ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಗ್ರಾಹಕರು ಸದ್ಯಕ್ಕೆ ತೀರಾ ಆತಂಕ ಪಡಬೇಕಾದ ಅಗತ್ಯವಿಲ್ಲ. ಮುಂಬರುವ ಜುಲೈ ಮತ್ತು ಆಗಸ್ಟ್ ತಿಂಗಳ ಮಳೆ ಅತ್ಯಂತ ಪ್ರಮುಖವಾಗಿದ್ದು, ಒಂದು ವೇಳೆ ಮಳೆ ಸುಧಾರಿಸಿದರೆ ಬೆಲೆ ಏರಿಕೆಯ ಆತಂಕ ಸಂಪೂರ್ಣವಾಗಿ ದೂರವಾಗುತ್ತದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭಾರತದಲ್ಲಿ ಈಗ ಉತ್ತಮ ನೀರಾವರಿ ವ್ಯವಸ್ಥೆ ಮತ್ತು ಬಲವಾದ ಆಹಾರ ದಾಸ್ತಾನು ಇರುವುದರಿಂದ, ಹವಾಮಾನ ಕೈಕೊಟ್ಟರೂ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಸೌಕರ್ಯ ದೇಶಕ್ಕಿದೆ. ಆದಾಗ್ಯೂ, ಮಳೆ ಕಡಿಮೆಯಾದರೆ ಸಾಮಾನ್ಯ ಜನರ ಒಟ್ಟಾರೆ ದಿನಸಿ ಬಜೆಟ್ ಕೊಂಚ ಹೆಚ್ಚಾಗುವುದಂತೂ ಖಚಿತ.
ಕಡಿಮೆ ಮಳೆಯ ಮುನ್ಸೂಚನೆಯ ಬೆನ್ನಲ್ಲೇ ಸಾರ್ವಜನಿಕರಲ್ಲಿ ಬೆಲೆ ಏರಿಕೆಯ ಭೀತಿ ಶುರುವಾಗಿದೆ. ಆದರೆ, ಸದ್ಯಕ್ಕೆ ಗ್ರಾಹಕರು ತೀರಾ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಕೃಷಿ ವಲಯಕ್ಕೆ ಜುಲೈ ಮತ್ತು ಆಗಸ್ಟ್ ತಿಂಗಳ ಮಳೆ ಅತ್ಯಂತ ಪ್ರಮುಖವಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಸುಧಾರಿಸಿದರೆ ಹಾಲು ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯ ಒತ್ತಡ ತಾನಾಗಿಯೇ ಕಡಿಮೆಯಾಗಲಿದೆ.
ಒಂದು ವೇಳೆ ಮುಂಬರುವ ದಿನಗಳಲ್ಲಿ ‘ಎಲ್ ನಿನೋ’ ಪ್ರಭಾವ ಹೆಚ್ಚಾಗಿ ಮಳೆ ಕೊರತೆ ಮುಂದುವರಿದರೆ ಮಾತ್ರ, ವರ್ಷದ ದ್ವಿತೀಯಾರ್ಧದಲ್ಲಿ ದಿನಸಿ ಬಿಲ್ ದುಬಾರಿಯಾಗಬಹುದು. ಇಂತಹ ಪರಿಸ್ಥಿತಿ ಎದುರಾದರೆ ಎಲ್ಲಕ್ಕಿಂತ ಮೊದಲು ಹಾಲಿನ ದರ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭಾರತ ಈ ಬಾರಿ ಉತ್ತಮ ಸಿದ್ಧತೆ ಮಾಡಿಕೊಂಡಿದೆ ಎಂದು ತಜ್ಞರು ನೆಮ್ಮದಿಯ ಮಾತುಗಳನ್ನಾಡಿದ್ದಾರೆ. ದೇಶದಲ್ಲಿ ಈಗ ಉತ್ತಮ ನೀರಾವರಿ ಸೌಲಭ್ಯವಿದೆ ಹಾಗೂ ಆಹಾರ ಧಾನ್ಯಗಳ ಬಲವಾದ ದಾಸ್ತಾನು (ಬಫರ್ ಸ್ಟಾಕ್) ಲಭ್ಯವಿದೆ. ಹೀಗಾಗಿ, ಮುಂದಿನ ಎರಡು ತಿಂಗಳಲ್ಲಿ ಮಳೆ ತೀರಾ ಕೈಕೊಡದಿದ್ದರೆ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಬಹುದು ಎನ್ನಲಾಗಿದೆ.
ಎಲ್ ನಿನೋ ಪ್ರಭಾವ ಉಂಟಾದ ತಕ್ಷಣವೇ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತದೆ ಎಂದೇನೂ ಇಲ್ಲ. ಎಲ್ ನಿನೋ ಬಂದಾಗ ಸಾಮಾನ್ಯವಾಗಿ ಮಳೆ ಕೊರತೆ ಎದುರಾಗುವುದು ನಿಜ. ಆದರೆ, ಬೆಲೆ ಏರಿಕೆಯಾಗುವುದು ಕೇವಲ ಮಳೆಯೊಂದರ ಮೇಲಷ್ಟೇ ನಿರ್ಧಾರವಾಗುವುದಿಲ್ಲ. ದೇಶದಲ್ಲಿ ಬಿದ್ದ ಒಟ್ಟು ಮಳೆಯ ಪ್ರಮಾಣ, ಮಳೆಯ ಹಂಚಿಕೆ, ಜಲಾಶಯಗಳಲ್ಲಿನ ನೀರಿನ ಮಟ್ಟ, ನೀರಾವರಿ ಸೌಕರ್ಯಗಳು ಮತ್ತು ಸರ್ಕಾರದ ಬಳಿ ಇರುವ ಆಹಾರ ಧಾನ್ಯಗಳ ದಾಸ್ತಾನು ಹಾಗೂ ಅಗತ್ಯವಿದ್ದಾಗ ವಿದೇಶಗಳಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಸಾಮರ್ಥ್ಯದ ಮೇಲೆಯೂ ಇದು ನಿರ್ಧಾರವಾಗುತ್ತದೆ.
ಹೀಗಾಗಿ, ಪ್ರತಿ ಬಾರಿ ‘ಎಲ್ ನಿನೋ’ ಪರಿಸ್ಥಿತಿ ನಿರ್ಮಾಣವಾದಾಗಲೂ ದೇಶದಲ್ಲಿ ಹಣದುಬ್ಬರ ಅಥವಾ ಬೆಲೆ ಏರಿಕೆ ದೊಡ್ಡ ಮಟ್ಟದಲ್ಲಿ ಆಗುವುದಿಲ್ಲ. ಆದರೆ, ಇತಿಹಾಸವನ್ನು ಗಮನಿಸಿದರೆ ಮಳೆ ತೀರಾ ಕೈಕೊಟ್ಟ ವರ್ಷಗಳಲ್ಲೆಲ್ಲಾ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿರುವುದು ಕಂಡುಬಂದಿದೆ.
