ಕೋಲ್ಕತ್ತಾ: ಸ್ಥಳೀಯ ಆಡಳಿತವು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಹಿನ್ನೆಲೆ ಏ.23 ರಂದು ನಿಗದಿಯಾಗಿದ್ದ ರಾಹುಲ್ ಗಾಂಧಿ (Rahul Gandhi) ಅವರ ಕೋಲ್ಕತ್ತಾ (Kolkata) ಭೇಟಿಯನ್ನ ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ (Election Campaign) ಕಾರ್ಯಕ್ಕಾಗಿ ರಾಹುಲ್ ಗಾಂಧಿ ಕೋಲ್ಕತ್ತಾಗೆ ಭೇಟಿ ನೀಡಬೇಕಿತ್ತು. ಆದ್ರೆ ಮಮತಾ ಬ್ಯಾನರ್ಜಿ (Mamata Banerjee) ಸರ್ಕಾರ ಉದ್ದೇಶಪೂರ್ವಕವಾಗಿ ಅನುಮತಿ ನಿರಾಕರಿಸಿದೆ. ಸ್ಥಳೀಯ ಆಡಳಿತ ಮತ್ತು ಪೊಲೀಸರು ಮಮತಾ ಬ್ಯಾನರ್ಜಿ ಸರ್ಕಾರದ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪಕ್ಷವು ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕಾಗಿ ಇಂದು ಸಂಜೆ 6 ಗಂಟೆವರೆಗೂ ಕಾದಿತ್ತು. ಆದ್ರೆ ಸ್ಥಳೀಯರು ಪೊಲೀಸರು ಏಪ್ರಿಲ್ 23 ರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಾರೆ. ಏಪ್ರಿಲ್ 25 ಅಥವಾ 26 ರಂದು ಪರಿಷ್ಕೃತ ವೇಳಾಪಟ್ಟಿಗಾಗಿ ಆಡಳಿತಾತ್ಮಕ ಅನುಮೋದನೆಗೆ ಮತ್ತೊಮ್ಮೆ ವಿನಂತಿ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಟಿಎಂಸಿ ಹೇಳಿದ್ದೇನು?
ಇನ್ನೂ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆಗೆ ಬಂಗಾಳ ಸರ್ಕಾರ ಕಾರಣ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಬಂಗಾಳ ಸಚಿವ ಶಶಿ ಪಂಜಾ ಪ್ರತಿಕ್ರಿಯಿಸಿದ್ದಾರೆ. ಸಾರ್ವಜನಿಕ ಸಭೆಗಳಿಗೆ 2 ರಿಂದ 7 ದಿನಗಳ ಮೊದಲೇ ಸುವಿಧಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಎಲ್ಲಾ ರಾಜಕೀಯ ಪಕ್ಷಗಳಿಗೂ ಇದು ಅನ್ವಯ. ಅಲ್ಲದೇ ರಾಜ್ಯದ ಉಸ್ತುವಾರಿ ಸರ್ಕಾರ ಅವರ ಭೇಟಿ ರದ್ದುಪಡಿಸಲು ಸಾಧ್ಯವಿಲ್ಲ, ಚುನಾವಣಾ ಆಯೋಗವೇ ಇದಕ್ಕೆ ಉತ್ತರಿಸಬೇಕು ಎಂದು ಹೇಳಿದ್ದಾರೆ.
294 ಸದಸ್ಯರ ಬಲ ಹೊಂದಿರುವ ಬಂಗಾಳ ವಿಧಾನಸಭೆಗೆ 2 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತವು 152 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ, ಆದರೆ ಎರಡನೇ ಹಂತವು 142 ಸ್ಥಾನಗಳನ್ನು ಒಳಗೊಂಡಿದೆ. ಮೇ 4 ರಂದು ಫಲಿತಾಂಶ ಹೊರಬೀಳಲಿದೆ.
ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಎಡಪಂಥೀಯರೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿದಿದೆ. ಹೀಗಾಗಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜೊತೆ ಭಿನ್ನಾಭಿಪ್ರಾಯ ಹೊಂದಿದೆ.



