ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ, ಎಸ್ಐಆರ್ ವಿರುದ್ಧ ಇಂಡಿ ಒಕ್ಕೂಟ ಕೈಗೊಂಡಿರೋ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಜ್ಞಾನೇಶ್ಕುಮಾರ್ ಪದಚ್ಯುತಿಗೆ ಬಿಗಿಪಟ್ಟು ಹಿಡಿದಿರೋ ಇಂಡಿ ಕೂಟ, ಇವತ್ತು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವ ಮೂಲಕ ಕಾನೂನು ಸಮರಕ್ಕೆ ಮುಂದಾಗಿದೆ.
‘ಚಲೋ ದೆಹಲಿ – ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆ’ ಎಂಬ ಹೆಸರಿನಲ್ಲಿ ಬರಾಖಂಬಾ ರಸ್ತೆ ಜಂಕ್ಷನ್ನಿಂದ ತಿಲಕ್ಮಾರ್ಗದಲ್ಲಿರೋ ಸುಪ್ರೀಂ ಕೋರ್ಟ್ವರೆಗೆ ಪಾದಯಾತ್ರೆ ನಡೆಸಿದರು. ಈ ವೇಳೆ, ತಳ್ಳಾಟ-ನೂಕಾಟದಲ್ಲಿ ಸಿಎಂ ಡಿಕೆಶಿ ಸಿಲುಕಿ ಹೈರಾಣಾದರು.
ಸುಪ್ರೀಂ ಕೋರ್ಟ್ಗೆ ಖುದ್ದು ತೆರಳಿದ ರಾಹುಲ್ ಗಾಂಧಿ, ವೋಟರ್ ಡಿಲಿಷನ್ ಆಡಿಟ್, ಎಸ್ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸುವುದು ಸೇರಿದಂತೆ ಜ್ಞಾನೇಶ್ಕುಮಾರ್, ದೆಹಲಿ ಪೊಲೀಸ್ ದೌರ್ಜನ್ಯ ವಿರುದ್ಧ ರಿಟ್ ಅರ್ಜಿ ಕೊಟ್ಟಿದ್ದಾರೆ. ಈ ಅರ್ಜಿಗಳು ನಾಳೆ ವಿಚಾರಣೆಗೆ ಬರುವ ಸಾಧ್ಯತೆಗಳಿವೆ. ಇದೇ ವೇಳೆ, ಕಾಂಗ್ರೆಸ್ ನಿಯೋಗವನ್ನು ಭೇಟಿಯಾಗಲು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಸಿಜೆ ಸೂರ್ಯಕಾಂತ್ ಸ್ಪಷ್ಟನೆ ಕೊಟ್ಟಿದ್ದಾರೆ.
ನಿನ್ನೆ ಭೇಟಿಗೆ ಅನುಮತಿ ಕೋರಿ ನನಗೆ ಪತ್ರ ಬಂದಿತ್ತು. ಆದರೆ, ನಾನು ಭೇಟಿಯಾಗಲು ಸಾಧ್ಯವಾಗದ್ದಕ್ಕೆ ನಿನ್ನೆ ರಾತ್ರಿಯೇ ಇ-ಮೇಲ್ ಮೂಲಕ ಕಾರಣಗಳ ಸಮೇತ ಉತ್ತರ ನೀಡಿದ್ದೇನೆ ಅಂದಿದ್ದಾರೆ. ಈ ಮೂಲಕ, ಸುಪ್ರೀಂಕೋರ್ಟನ್ನು ರಾಜಕೀಯಕ್ಕೆ ಎಳೆದು ತರಬೇಡಿ ಅಂತ ಪರೋಕ್ಷವಾಗಿ ಹೇಳಿದ್ದಾರೆ. ಈ ಮಧ್ಯೆ, ಸಿಜೆ ಭೇಟಿ ಪತ್ರ ಕಾಂಗ್ರೆಸಿಗರ ನಾಟಕ ಅಂತ ಕುಮಾರಸ್ವಾಮಿ, ವಿಜಯೇಂದ್ರ ಟೀಕಿಸಿದ್ದಾರೆ.

