ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಅವರ ಸಹೋದರಿ ಪತಿಯೂ ಆಗಿರುವ ಅಬಕಾರಿ ಇಲಾಖೆಯ(Excise Department) ಉನ್ನತ ಅಧಿಕಾರಿಯ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಭಾರಿ ದಾಳಿ ನಡೆಸಿದ್ದಾರೆ.
ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ವೈ. ಮಂಜುನಾಥ್ (Y. Manjunath) ಅವರಿಗೆ ಸೇರಿದ ಒಟ್ಟು 6 ಸ್ಥಳಗಳ ಮೇಲೆ ಇಡಿ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ಕೈಗೊಂಡಿದೆ.

ಇಂದು ಬೆಳಿಗ್ಗೆಯೇ ಕಾರ್ಯಪ್ರವೃತ್ತರಾದ ಇಡಿ ಅಧಿಕಾರಿಗಳು, ಬೆಳಗಾವಿಯ ದೂರದರ್ಶನ ಕೇಂದ್ರದ ಬಳಿ ಇರುವ ವೈ. ಮಂಜುನಾಥ್ ಅವರ ನಿವಾಸಕ್ಕೆ ಲಗ್ಗೆ ಇಟ್ಟಿದ್ದಾರೆ. ಗೋವಾ ಮತ್ತು ಬೆಂಗಳೂರಿನ ಜಾರಿ ನಿರ್ದೇಶನಾಲಯದ ಜಂಟಿ ಅಧಿಕಾರಿಗಳ ತಂಡ ಈ ಕಾರ್ಯಾಚರಣೆಯನ್ನು ಕೈಗೊಂಡಿದೆ. ಇದನ್ನೂ ಓದಿ: LIC ದುಡ್ಡಿನ ಆಸೆಗಾಗಿ ತಮ್ಮನನ್ನೇ ಕೊಂದ ಅಣ್ಣ
ವೈ. ಮಂಜುನಾಥ್ ಅವರು ಹಲವು ವರ್ಷಗಳಿಂದ ಅಬಕಾರಿ ಇಲಾಖೆಯಲ್ಲಿ ಬೆಳಗಾವಿ ವಲಯದ ಪ್ರಮುಖ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಜುನಾಥ್ ಅವರ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಒಟ್ಟು ಆರು ಕಡೆಗಳಲ್ಲಿ ಇಡಿ ಅಧಿಕಾರಿಗಳು ಮಹತ್ವದ ದಾಖಲೆ ಪತ್ರಗಳು, ಆಸ್ತಿ ಪಾಸ್ತಿ ವಿವರ ಹಾಗೂ ಬ್ಯಾಂಕ್ ಖಾತೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬಳ್ಳಾರಿಯ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರನಾಗಿರುವ ಮಂಜುನಾಥ್ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು, ಬಾರ್ ಅಂಡ್ ರೆಸ್ಟೋರೆಂಟ್‌ಗಳು ಸೇರಿದಂತೆ ಭಾರಿ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಎಲ್ಲೆಲ್ಲಿ ದಾಳಿ ನಡೆದಿದೆ?
ಬೆಳಗಾವಿ: ದೂರದರ್ಶನ ಕೇಂದ್ರದ ಬಳಿ ಇರುವ ವೈ. ಮಂಜುನಾಥ್ ಅವರ ನಿವಾಸ.
ಬೆಂಗಳೂರು: ಮಂಜುನಾಥ್ ಅವರಿಗೆ ಸೇರಿದ ಬೆಂಗಳೂರಿನ ಅಪಾರ್ಟ್‌ಮೆಂಟ್ ಮೇಲೂ ಇಡಿ ದಾಳಿ ನಡೆದಿದೆ. ಪ್ರಸ್ತುತ ಮಂಜುನಾಥ್ ಅವರು ಇದೇ ಅಪಾರ್ಟ್‌ಮೆಂಟ್‌ನಲ್ಲಿದ್ದಾರೆ ಎನ್ನಲಾಗಿದೆ.
ಮೈಸೂರು: ಮೈಸೂರಿನಲ್ಲಿರುವ ವೈ. ಮಂಜುನಾಥ್ ಅವರ ಮಹಿಳಾ ಸ್ನೇಹಿತೆಯ ನಿವಾಸದ ಮೇಲೆ ದಾಳಿ.
ಅರಸೀಕೆರೆ (ಹಾಸನ ಜಿಲ್ಲೆ): ಅರಸೀಕೆರೆಯಲ್ಲಿರುವ ಮಂಜುನಾಥ್ ಅವರ ಅತ್ಯಾಪ್ತನ ಮನೆ ಮೇಲೆ ರೇಡ್.
ಐನಾಪುರ (ಅಥಣಿ ತಾಲೂಕು): ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐನಾಪುರ ಗ್ರಾಮದಲ್ಲಿರುವ ಮಂಜುನಾಥ್ ಅವರ ಮತ್ತೊಬ್ಬ ಸ್ನೇಹಿತನ ಮನೆ ಮೇಲೆ ದಾಳಿ.
ದಾಳಿ ವೇಳೆ ಸಿಕ್ಕಿತ್ತು ಸುಳಿವು:
ಬೆಳಗಾವಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ ಸಮಯದಲ್ಲಿ ಅಧಿಕಾರಿ ವೈ. ಮಂಜುನಾಥ್ ಮನೆಯಲ್ಲಿ ಇರಲಿಲ್ಲ. ಆದರೆ ಕೆಲವು ದಿನಗಳ ಹಿಂದೆಯಷ್ಟೇ ಇವರ ಬಿಜಿನೆಸ್ ಪಾಲುದಾರರು ಹಾಗೂ ಗೆಳೆಯರ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ವೇಳೆ ಸಿಕ್ಕ ಮಹತ್ವದ ದಾಖಲೆಗಳಲ್ಲಿ ವೈ. ಮಂಜುನಾಥ್ ಅವರ ಹೆಸರು ತಳಕು ಹಾಕಿಕೊಂಡಿತ್ತು. ಈ ಆಧಾರದ ಮೇಲೆಯೇ ಇಡಿ ಈಗ ಮಂಜುನಾಥ್ ಮತ್ತು ಅವರ ಆಪ್ತರನ್ನು ಗುರಿಯಾಗಿಸಿ ಸಾಕ್ಷ್ಯ ಸಂಗ್ರಹಕ್ಕೆ ಇಳಿದಿದೆ. ಪ್ರಸ್ತುತ 10 ಹೆಚ್ಚು ಅರೆಸೇನಾ ಪಡೆ ಯೋಧರ ಕಾವಲಿನಲ್ಲಿ ತಪಾಸಣೆ ಮುಂದುವರಿದಿದೆ.
