ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ (Vachanananda Swamiji) ವಿರುದ್ಧದ ಪೋಕ್ಸೋ ಪ್ರಕರಣ (POCSO Case) ಹೈಕೋರ್ಟ್ (High Court) ಅಂಗಳದಲ್ಲಿ ಮಹತ್ವದ ಘಟ್ಟ ತಲುಪಿದೆ. ಸ್ವಾಮೀಜಿಗೆ ಕೆಳ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ದೂರು ದಾಖಲಾಗುವ ಹಿಂದಿನ ದಿನವೇ ಜಾಮೀನು ಪಡೆದಿದ್ದ ಶ್ರೀಗಳ ನಡೆಗೆ ಹೈಕೋರ್ಟ್ ಈಗಾಗಲೇ ಆಘಾತ ವ್ಯಕ್ತಪಡಿಸಿದ್ದು, ಇಂದು ಸ್ವಾಮೀಜಿಯವರ ಅಸಲಿ ಭವಿಷ್ಯ ನಿರ್ಧಾರವಾಗಲಿದೆ.
ಹೌದು, ಇಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪಾಲಿಗೆ ಬಿಗ್ ಡೇ. ಯಾಕಂದ್ರೆ, ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಶ್ರೀಗಳಿಗೆ ಕೆಳ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಸಂತ್ರಸ್ತ ಬಾಲಕನ ತಾಯಿ ಹೈಕೋರ್ಟ್ ಮೊರೆ ಹೋಗಿದ್ದು, ಇಂದು ಆ ಅರ್ಜಿ ವಿಚಾರಣೆಗೆ ಬರಲಿದೆ. ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಪ್ರಕರಣ – ಮೂವರು ಆರೋಪಿಗಳ ಜಾಮೀನು ಅರ್ಜಿ ವಜಾ
ಈಗಾಗಲೇ ವಚನಾನಂದ ಸ್ವಾಮೀಜಿ ಜಾಮೀನು ಪಡೆದ ರೀತಿಗೆ ಸ್ವತಃ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಮೇ 7ರಂದು ಸ್ವಾಮೀಜಿ ವಿರುದ್ಧ ಪೋಕ್ಸೋ ದೂರು ದಾಖಲಾದರೆ, ಶ್ರೀಗಳು ಅದರ ಹಿಂದಿನ ದಿನ ಅಂದರೆ ಮೇ 6ರಂದೇ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ದೂರು ದಾಖಲು ಮುನ್ನವೇ ಜಾಮೀನು ಕೊಟ್ಟ ರೀತಿ ಆಘಾತಕಾರಿ ಎಂದಿದ್ದ ಹೈಕೋರ್ಟ್, ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ ಎಂದಿತ್ತು. ಈ ಸಂಬಂಧ ಶ್ರೀಗಳಿಗೆ ನೋಟಿಸ್ ಜಾರಿ ಮಾಡಿತ್ತು. ಇಂದು ಸ್ವಾಮೀಜಿ ಹೈಕೋರ್ಟ್ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ತ್ರಿಪುರ ಮಾಜಿ ಸಿಎಂ ಜೊತೆ ‘ಟಗರು’ ಖ್ಯಾತಿಯ ನಟಿ ತ್ರಿವೇಣಿ ರಾವ್ ಮದುವೆ
ಇತ್ತ ಹೈಕೋರ್ಟ್‌ನಲ್ಲಿ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ, ಅತ್ತ ಹರಿಹರ ಪಂಚಮಸಾಲಿ ಪೀಠದ ಭಕ್ತರ ವಲಯದಲ್ಲಿ ಚರ್ಚೆಗಳು ಜೋರಾಗಿವೆ. ಸ್ವಾಮೀಜಿ ಪರ ಮತ್ತು ವಿರೋಧ ಇರುವ ಭಕ್ತರ ನಡುವೆ ವಾಕ್ಸಮರ ನಡೆಯುತ್ತಿದ್ದು, ಇಡೀ ಪೀಠದ ಭಕ್ತರ ಕಣ್ಣು ಇಂದಿನ ಹೈಕೋರ್ಟ್ ತೀರ್ಪಿನ ಮೇಲಿದೆ. ಇನ್ನು ಹೈಕೋರ್ಟ್ ಆದೇಶ ನೋಡಿಕೊಂಡು, ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯವು ಇದೇ ಜೂನ್ 30ರಂದು ಶ್ರೀಗಳ ಜಾಮೀನು ರದ್ದತಿ ಅರ್ಜಿ ಬಗ್ಗೆ ತನ್ನ ನಿರ್ಧಾರ ಪ್ರಕಟಿಸಲಿದೆ. ಇಂದು ವಚನಾನಂದ ಸ್ವಾಮೀಜಿಯ ಜಾಮೀನು ರದ್ದತಿ ಅರ್ಜಿ ವಿಚಾರಣೆ ನಡೆಸಲಿದ್ದು, ಇಂದೇ ವಿಚಾರಣೆ ನಡೆಸಿ ಜಾಮೀನು ರದ್ದಾದರೆ ನೂರಕ್ಕೆ ನೂರರಷ್ಟು ಸ್ವಾಮೀಜಿಗೆ ಕಂಟಕ ತಪ್ಪಿದ್ದಲ್ಲ. ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ – ಹೊಸ ಮುಖಗಳ ಸೇರ್ಪಡೆಗೆ ಡಿಕೆಶಿ ಸುಳಿವು
ಒಟ್ಟಾರೆ ಪೊಲೀಸರು ಈಗಾಗಲೇ 410 ಪುಟಗಳ ಬಲವಾದ ಚಾರ್ಜ್‌ಶೀಟ್ ಸಲ್ಲಿಸಿದ್ದಾಗಿದೆ. ಇದರ ಬೆನ್ನಲ್ಲೇ, ಹೈಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆ ವಚನಾನಂದ ಶ್ರೀಗಳ ಭವಿಷ್ಯ ನಿರ್ಧರಿಸಲಿದೆ. ಇದನ್ನೂ ಓದಿ: ಮೊದಲ ಬಾರಿಗೆ ಅಧಿಕಾರ ಹಂಚಿಕೆ ಬಗ್ಗೆ ಗುಟ್ಟು ಬಿಚ್ಚಿಟ್ಟ ಡಿಕೆಶಿ
