ಕನ್ನಡದ ಜನಪ್ರಿಯ ಚಿತ್ರ ‘ಟಗರು’ನಲ್ಲಿ ಸರೋಜಾ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ತ್ರಿವೇಣಿ ರಾವ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿದೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ತ್ರಿವೇಣಿ ರಾವ್, ತ್ರಿಪುರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇವ್ ಅವರೊಂದಿಗೆ ವಿವಾಹವಾಗಿದ್ದಾರೆ ಎನ್ನಲಾಗಿದೆ.
ದೆಹಲಿ ನಗರದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ನವದಂಪತಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಈ ಕುರಿತು ಅಧಿಕೃತ ಘೋಷಣೆ ಇನ್ನೂ ಬಂದಿಲ್ಲ.
ತ್ರಿವೇಣಿ ರಾವ್, ಸೂರಿ ನಿರ್ದೇಶನದ, ಶಿವರಾಜ್‌ಕುಮಾರ್, ಡಾಲಿ ಧನಂಜಯ್ ಅಭಿನಯದ ಟಗರು ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದರು. ಕಾನ್ಸ್‌ಟೇಬಲ್ ಸರೋಜಾ ಎಂಬ ಕ್ಯಾರೆಕ್ಟರ್ ಮಾಡಿದ್ದ ತ್ರಿವೇಣಿ ರಾವ್, ಅಂದು ಕನ್ನಡಿಗರ ಹೊಸ ಕ್ರಶ್ ಆಗಿದ್ದರು.
ಬಳಿಕ ತ್ರಿವೇಣಿ ರಾವ್ ಹಲವು ಸಿನಿಮಾಗಳಲ್ಲಿ ನಟಿಸಿದ್ರು. ತಾಯಿಗೆ ತಕ್ಕ ಮಗ, ರಾಜ ಮಾರ್ತಾಂಡ, ಸಲಗ, ಯುವರತ್ನ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ತ್ರಿವೇಣಿ ರಾವ್, ಬಳಿಕ ತೆಲುಗಿನಲ್ಲೂ ಕೆಲವು ಸಿನಿಮಾಗಳಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ತಮ್ಮ ಹೆಸರನ್ನು ರುಷಿಕಾ ರಾಜ್ ಎಂದು ಬದಲಾಯಿಸಿಕೊಂಡರು.
54 ವರ್ಷದ ಬಿಪ್ಲಬ್ ಕುಮಾರ್ ದೇವ್ ಅವರು ಪ್ರಸ್ತುತ ತ್ರಿಪುರ ಪಶ್ಚಿಮ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದು, 2018ರಿಂದ 2022ರವರೆಗೆ ತ್ರಿಪುರ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಬಿಪ್ಲಬ್ ದೇವ್ ಅವರು ಈ ಹಿಂದೆ ಸ್ಟೇಟ್ ಬ್ಯಾಂಕ್ ಅಧಿಕಾರಿಯಾಗಿದ್ದ ನೀತಿ ದೇವ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಕೆಲವು ತಿಂಗಳ ಹಿಂದೆ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದಿದ್ದರು ಎಂದು ವರದಿಯಾಗಿದೆ.
ಇದೀಗ ತ್ರಿವೇಣಿ ರಾವ್ ಅವರನ್ನು ವಿವಾಹವಾಗುವ ಮೂಲಕ ಬಿಪ್ಲಬ್ ದೇವ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 24ರಂದು ತ್ರಿಪುರ ರಾಜಧಾನಿ ಅಗರ್ತಲಾದಲ್ಲಿರುವ ಹೋಟೆಲ್ ಪೋಲೋ ಟವರ್ಸ್ನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜಕೀಯ ಹಾಗೂ ಸಿನಿರಂಗದ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.
ತ್ರಿವೇಣಿ ರಾವ್ ಮತ್ತು ಬಿಪ್ಲಬ್ ಕುಮಾರ್ ದೇವ್ ಅವರ ಈ ವಿವಾಹ ಸುದ್ದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ನವದಂಪತಿಯ ಭವಿಷ್ಯ ಸುಖಕರವಾಗಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
