– ಸಲೀಂ ಅಹ್ಮದ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂಗೆ ವಿವಿಧ ದರ್ಗಾಗಳ ಮುಖ್ಯಸ್ಥರ ಮನವಿ
ಬೆಂಗಳೂರು: ಯು.ಟಿ.ಖಾದರ್ ಕಳೆದ ಬಾರಿಯೇ ಮಂತ್ರಿ ಆಗಬೇಕಿತ್ತು. ಆದರೆ ಅವರು ತ್ಯಾಗ ಮಾಡಿ, ಸ್ಪೀಕರ್ ಆದರು. ಅವರಿಗೆ ನಾವು ನೀವು ಬಯಸಿದ ಖಾತೆ ನೀಡುವುದಾಗಿ ಮಾತು ಕೊಟ್ಟಿದ್ದವು. ಈಗ ಆರೋಗ್ಯ ಇಲಾಖೆ ನೀಡಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳ ವಿವಿಧ ದರ್ಗಾಗಳ ಮುಖ್ಯಸ್ಥರು ಇಂದು ಶಿವಕುಮಾರ್ ಅವರನ್ನು ಭೇಟಿ ಮಾಡಿ ಎಂಎಲ್‌ಸಿ ಸಲೀಂ ಅಹ್ಮದ್ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಸೋಮವಾರ ಮನವಿ ಮಾಡಿದರು. ಈ ವೇಳೆ ಅವರನ್ನು ಉದ್ದೇಶಿಸಿ ಶಿವಕುಮಾರ್ ಮಾತನಾಡಿದರು.
ಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್. ಅವರು ಕೊಟ್ಟ ಪಟ್ಟಿಯನ್ನು ಅನುಷ್ಠಾನಗೊಳಿಸುವುದು ನನ್ನ ಕೆಲಸ. ನೀವು ಸಲೀಂ ಅಹ್ಮದ್ ಅವರಿಗೆ ಒಳ್ಳೆಯದಾಗಲಿ ಎಂದು ಮನವಿ ಮಾಡಿದ್ದೀರಿ. ನಿಮ್ಮ ಮನವಿಯನ್ನು ಹೈಕಮಾಂಡ್ ನಾಯಕರಿಗೆ ತಲುಪಿಸುತ್ತೇನೆ ಎಂದು ತಿಳಿಸಿದರು.
ಯು. ಟಿ ಖಾದರ್ ಕಳೆದ ಬಾರಿಯೇ ಮಂತ್ರಿ ಆಗಬೇಕಿತ್ತು. ಆದರೆ ಅವರು ತ್ಯಾಗ ಮಾಡಿ, ಸ್ಪೀಕರ್ ಆದರು. ಅವರಿಗೆ ನಾವು ನೀವು ಬಯಸಿದ ಖಾತೆ ನೀಡುವುದಾಗಿ ಮಾತು ಕೊಟ್ಟಿದ್ದವು. ಈಗ ಆರೋಗ್ಯ ಇಲಾಖೆ ನೀಡಿದ್ದೇವೆ. ಈ ಮಧ್ಯೆ ಅನೇಕ ಗೊಂದಲವಾಗಿದ್ದು, ಕೆಲವು ಸ್ವಾಮೀಜಿಗಳು ಸೇರಿದಂತೆ ಮತ್ತೊಬ್ಬರನ್ನು ಮಂತ್ರಿ ಮಾಡಿ ಎಂದು ಹೇಳುತ್ತಿದ್ದಾರೆ. ನೀವುಗಳು ಸಲೀಂ ಅಹ್ಮದ್ ಅವರನ್ನು ಮಾಡಿ ಎಂದು ಹೇಳುತ್ತಿದ್ದೀರಿ. ಹೀಗೆ ಒಕ್ಕಲಿಗರು, ಲಿಂಗಾಯತರು, ಕ್ರೈಸ್ತ ಸಮುದಾಯದವರು ಒಬ್ಬೊಬ್ಬರ ಹೆಸರು ಹೇಳುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ರಾಜಕೀಯವಾಗಿ ತೀರ್ಮಾನ ಮಾಡಲು ಕಷ್ಟವಾಗುತ್ತದೆ. ನಾನು ನಮ್ಮ ಕಷ್ಟವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ. ಪಕ್ಷದ ಎಲ್ಲಾ ಅಲ್ಪಸಂಖ್ಯಾತ ಮುಖಂಡರು ಚೆನ್ನಾಗಿ ಕೆಲಸ ಮಾಡಿದ್ದಾರೆ. ನಾನು ವರಿಷ್ಟರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.
