ಬೆಂಗಳೂರು: ಹಿರಿಯ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರ ಹಠಾತ್ ರಾಜೀನಾಮೆ ಬೆನ್ನಲ್ಲೇ, ಮತ್ತೊಬ್ಬ ಹಿರಿಯ ನಾಯಕ ಹಾಗೂ ಆಹಾರ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಅವರು ಬಹಿರಂಗವಾಗಿಯೇ ಅಸಮಾಧಾನದ ಬಾಂಬ್ ಸಿಡಿಸಿದ್ದಾರೆ.
ದೇವನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ಖಾತೆ ಹಂಚಿಕೆಯಲ್ಲಿ ಸೀನಿಯಾರಿಟಿ ಕಾಯ್ದುಕೊಂಡಿಲ್ಲ, ಈ ತಾರತಮ್ಯ ಹೀಗೆಯೇ ಮುಂದುವರಿದರೆ 2028ರ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಕಷ್ಟವಾಗಲಿದೆ” ಎಂದು ಸ್ಫೋಟಕ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಆಹಾರ ಇಲಾಖೆಯನ್ನು ನಿಭಾಯಿಸಿರುವ ತಮಗೆ ಮತ್ತೆ ಅದೇ ಖಾತೆ ನೀಡಿರುವುದಕ್ಕೆ ಕೆ.ಎಚ್. ಮುನಿಯಪ್ಪ ತೀವ್ರ ಬೇಸರ ಹೊರಹಾಕಿದ್ದಾರೆ. “ನಾನು ರಾಜಕೀಯದಲ್ಲಿ 8 ಬಾರಿ ಗೆದ್ದಿರುವ ಅತ್ಯಂತ ಹಿರಿಯ ನಾಯಕ. ಸಂಪುಟದಲ್ಲಿ ಪ್ರೊಟೊಕಾಲ್ ಪ್ರಕಾರ ಸೀನಿಯಾರಿಟಿ ನೋಡಿ ಖಾತೆ ಹಂಚಬೇಕಿತ್ತು. ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯಂತಹ ಜನಸೇವೆಗೆ ನೇರ ಅವಕಾಶವಿರುವ ದೊಡ್ಡ ಖಾತೆ ನೀಡುವಂತೆ ನಾನು ಮೊದಲೇ ಕೇಳಿದ್ದೆ. ಆದರೆ ಹಂಚಿಕೆಯಲ್ಲಿ ಯಾವುದೇ ಸಮಾತೋಲನ ಕಾಯ್ದುಕೊಂಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷದ ನಾಯಕತ್ವದ ವಿರುದ್ಧ ಮಾರ್ಮಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ನಾನು ಪಕ್ಷದಲ್ಲಿ ತಾಯಿ ಸ್ಥಾನದಲ್ಲಿದ್ದೇನೆ. ತಾಯಿಯಾದವಳು ಎಲ್ಲಾ ಮಕ್ಕಳನ್ನೂ ಒಂದೇ ಕಣ್ಣಿನಿಂದ, ಸಮಾನವಾಗಿ ನೋಡಬೇಕು. ನಾನು ಈಗಾಗಲೇ ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಖುದ್ದಾಗಿ ಭೇಟಿಯಾಗಿ ಮನವಿ ಮಾಡಿದ್ದೇನೆ. ಗೊಂದಲಗಳಿಗೆ ಆಸ್ಪದ ನೀಡದೆ ನನ್ನ ಖಾತೆಯನ್ನು ತಕ್ಷಣ ಬದಲಾಯಿಸುತ್ತಾರೆ ಎಂಬ ನಂಬಿಕೆ ನನಗಿದೆ” ಎಂದಿದ್ದಾರೆ.
ಸಮಾಜ ಕಲ್ಯಾಣ, ಕೃಷಿ ಅಥವಾ ನೀರಾವರಿಯಂತಹ ಇಲಾಖೆಗಳನ್ನು ನೀಡಿದರೆ ಜನಸೇವೆ ಮತ್ತು ರೈತರಿಗೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
