ಬೆಂಗಳೂರು: ಅನುದಾನ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಈ ಹಿಂದೆ ಆರೋಪಿಸಿದ್ದ ರಾಜ್ಯ ಸರ್ಕಾರ, ಇದೀಗ ನಮ್ಮ ಮೆಟ್ರೋ(Namma Metro) ಯೋಜನೆಯ ಅನುದಾನದ ವಿಚಾರದಲ್ಲೂ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಮೆಟ್ರೋ ಯೋಜನೆಯಲ್ಲಿ 50:50 ಪಾಲುದಾರಿಕೆ ಇದ್ದರೂ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ(Karnataka) ಅನ್ಯಾಯವಾಗುತ್ತಿದೆ ಎಂದು ಸಿಎಂ ಡಿಕೆ ಶಿವಕುಮಾರ್(DK Shivakumar), ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ(Krishna Byre Gowda) ಆರೋಪಿಸಿದ್ದಾರೆ. ಮತ್ತೊಂದೆಡೆ, ಈ ಆರೋಪಗಳನ್ನು ತಳ್ಳಿಹಾಕಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
ಸಿಎಂ ಹೇಳಿದ್ದೇನು?
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಡಿ.ಕೆ. ಶಿವಕುಮಾರ್, “ನಮ್ಮ ಮೆಟ್ರೋ ನಿರ್ಮಾಣದಲ್ಲಿ ಕೇಂದ್ರ ಸರ್ಕಾರದ ಪಾಲು ಕೇವಲ ಶೇ.16ರಷ್ಟು ಮಾತ್ರ ಇದ್ದರೆ, ರಾಜ್ಯ ಸರ್ಕಾರ ಶೇ. 84ರಷ್ಟು ವೆಚ್ಚವನ್ನು ಭರಿಸುತ್ತಿದೆ” ಎಂದು ತಿಳಿಸಿದ್ದಾರೆ. ಅನುದಾನದ ಜೊತೆಗೆ ಭೂಸ್ವಾಧೀನ, ಪುನರ್ವಸತಿ, ರಾಜ್ಯ ತೆರಿಗೆ, ನಿರ್ಮಾಣ ಅವಧಿಯ ಬಡ್ಡಿ, ಸಾಲ ಮರುಪಾವತಿ ಹಾಗೂ ಮೆಟ್ರೋ ರೈಲುಗಳ ನಿರ್ವಹಣೆಯ ಜವಾಬ್ದಾರಿಯನ್ನೂ ರಾಜ್ಯ ಸರ್ಕಾರವೇ ನಿಭಾಯಿಸುತ್ತಿದೆ. ಕಾಮಗಾರಿಗಳ ವಿಳಂಬದಿಂದ ಉಂಟಾಗುವ ಹೆಚ್ಚುವರಿ ವೆಚ್ಚದ ಹೊರೆಯಲ್ಲೂ ರಾಜ್ಯದ ಪಾಲು ಗಣನೀಯವಾಗಿದೆ ಎಂದು ಅವರು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮ ಮೆಟ್ರೋಗೆ ಕರ್ನಾಟಕದ ಕೊಡುಗೆ ಕೇವಲ ನಿರ್ಮಾಣ ಕಾರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಭೂಸ್ವಾಧೀನದಿಂದ ಹಿಡಿದು ದೈನಂದಿನ ಕಾರ್ಯಾಚರಣೆ, ಸಾಲ ಮರುಪಾವತಿ ಹಾಗೂ ಆರ್ಥಿಕ ನೆರವಿನವರೆಗೂ ಪ್ರತಿಯೊಂದು ಹಂತದಲ್ಲೂ ರಾಜ್ಯದ ಪಾಲು ಬಹುದೊಡ್ಡದು. ಬೆಂಗಳೂರಿನ ಮೆಟ್ರೋ ಜಾಲವನ್ನು ಕಟ್ಟಿ, ಯಶಸ್ವಿಯಾಗಿ ಮುನ್ನಡೆಸುವ ಹೊಣೆಗಾರಿಕೆಯನ್ನು ನಾವು ನಿರಂತರವಾಗಿ ನಿಭಾಯಿಸುತ್ತಿದ್ದೇವೆ.
Karnataka’s contribution to Namma Metro goes far beyond construction. From land acquisition and operations to loan repayment and financial support, we continue to shoulder the responsibility of building and sustaining Bengaluru’s Metro network.
#ಇದುನಮ್ಮಮೆಟ್ರೋ #IdhuNammaMetro
— DK Shivakumar (@DKShivakumar) November 11, 2026
ಕೃಷ್ಣ ಬೈರೇಗೌಡ ಹೇಳಿದ್ದೇನು?
ಮೆಟ್ರೋ ಅನುದಾನ ತಾರತಮ್ಯದ ಬಗ್ಗೆ ಧ್ವನಿ ಎತ್ತಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ನವೆಂಬರ್ 13ರಂದು ಪಿಂಕ್ ಲೈನ್ ಮೆಟ್ರೋ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದಾಗ ಈ ಕುರಿತು ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. “22 ತಿಂಗಳ ಹಿಂದೆಯೇ ರೆಡ್ ಲೈನ್ ಮೆಟ್ರೋಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ” ಎಂದು ಅವರು ದೂರಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋದ 100 ಕಿ.ಮೀ ಮೈಲಿಗಲ್ಲು – ನ.13ರಂದು 7.5 ಕಿ.ಮೀ ಪಿಂಕ್ ಲೈನ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ
https://t.co/H87JzLXMir
— Krishna Byre Gowda (@krishnabgowda) November 11, 2026
ರಾಜ್ಯದ ವಾದ ಏನು?
ರಾಜ್ಯ ಸರ್ಕಾರದ ಮಾಹಿತಿಯ ಪ್ರಕಾರ, ಮೆಟ್ರೋ ಹಂತ-1 (ನೇರಳೆ ಮತ್ತು ಹಸಿರು ಮಾರ್ಗ), ಹಂತ-2 (ವಿಸ್ತರಿತ ಯೋಜನೆ + ಪಿಂಕ್ ಮಾರ್ಗ), ಹಂತ-2ಎ (ಸಿಲ್ಕ್ ಬೋರ್ಡ್-ಬೈಯಪ್ಪನಹಳ್ಳಿ ಬ್ಲೂ ಲೈನ್), ಹಂತ-2ಬಿ (ಬೈಯಪ್ಪನಹಳ್ಳಿ-ಏರ್ಪೋರ್ಟ್ ಬ್ಲೂ ಲೈನ್) ಹಾಗೂ ಹಂತ-3 (ಜೆ.ಪಿ. ನಗರ-ಕೆಂಪಾಪುರ) ಸೇರಿದಂತೆ ಇದುವರೆಗೆ ಒಟ್ಟು 77,891 ಕೋಟಿ ರೂ. ವೆಚ್ಚವಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು 65,291 ಕೋಟಿ ರೂ. (ಶೇ. 83.8) ಆಗಿದ್ದರೆ, ಕೇಂದ್ರ ಸರ್ಕಾರ 12,600 ಕೋಟಿ ರೂ. (ಶೇ. 16.2) ಅನುದಾನ ನೀಡಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ತೇಜಸ್ವಿ ಸೂರ್ಯ ತಿರುಗೇಟು:
ರಾಜ್ಯ ಸರ್ಕಾರದ ಈ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ, “ರಾಜ್ಯ ಸರ್ಕಾರವು ಕೇಂದ್ರಕ್ಕೆ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ” ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ. ಅಲ್ಲದೆ, ಈ ಕುರಿತ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಲು ನಾಳೆ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
