– ಏ.1ರಿಂದ ಕಚ್ಚಾ ತೈಲ ರಫ್ತು ಸ್ಥಗಿತಗೊಳಿಸಲು ರಷ್ಯಾ ನಿರ್ಧಾರ
ನವದೆಹಲಿ: ಕೊಲ್ಲಿ ಯುದ್ಧದ ಮಧ್ಯೆ ಭಾರತಕ್ಕೆ ಕಚ್ಚಾ ತೈಲ ಹೊತ್ತ ಮತ್ತೆರಡು ಹಡಗುಗಳು (Petroleum Vessels) ಬರುತ್ತಿವೆ. ಎರಡೂ ಹಡಗುಗಳು ಹಾರ್ಮುಜ್ ಜಲಸಂಧಿ (Strait of Hormuz) ದಾಟಿದ್ದು, ನೌಕಾಪಡೆಯ(Indian Navy) ಭದ್ರತೆಯಲ್ಲಿ ಭಾರತದತ್ತ ಆಗಮಿಸುತ್ತಿವೆ.
ಕಳೆದ ಕೆಲವು ದಿನಗಳಿಂದ, ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರ ಸೀಮಿತವಾಗಿದೆ. ಕೆಲವು ದೇಶದ ಹಡಗಗಳು ಅಲ್ಲೇ ಸ್ಥಗಿತಗೊಂಡಿವೆ. ಭಾರತಕ್ಕೆ ಬರುವ ಹಡಗುಗಳ ಸಂಚಾರಕ್ಕೆ ಅನುಮತಿ ದೊರೆತಿದೆ. ಇನ್ನೂ ಭಾರತದ ಹಡಗುಗಳ ಸುರಕ್ಷತೆಗಾಗಿ ಭಾರತೀಯ ನೌಕಪಡೆ ಯುದ್ಧ ನೌಕೆಗಳನ್ನು ನಿಯೋಜಿಸಿದೆ.
ಕೊಲ್ಲಿ ಯುದ್ಧದ ನಡುವೆ ರಷ್ಯಾ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಏಪ್ರಿಲ್ 1 ರಿಂದ ಕಚ್ಚಾ ತೈಲ ರಫ್ತು ಸ್ಥಗಿತಗೊಳಿಸಲು ರಷ್ಯಾ ಕಠಿಣ ನಿರ್ಧಾರ ಕೈಗೊಂಡಿದೆ. ಇದ್ರಿಂದ ಭಾರತದ ಇಂಧನ ಮಾರುಕಟ್ಟೆ ಮೇಲೆ ಕರಿನೆರಳು ಬೀಳುವ ಆತಂಕ ಎದುರಾಗಿದೆ. ಯುದ್ಧದಿಂದ ಈಗಾಗಲೇ ಜಾಗತಿಕ ಮಟ್ಟದಲ್ಲಿ ತೈಲ, ಗ್ಯಾಸ್ ತಲ್ಲಣ ಶುರುವಾಗಿರೋ ಹೊತ್ತಲ್ಲೇ ರಷ್ಯಾ ಏಪ್ರಿಲ್ 1 ರಿಂದ ಜುಲೈ 31 ರವರೆಗೆ ಕಚ್ಚಾ ತೈಲ ರಫ್ತನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಈ ನಿರ್ಧಾರ ಅನ್ಯದೇಶಗಳ ನಿದ್ದೆಗೆಡಿಸಿದೆ. ಕಳೆದ ವರ್ಷ ರಷ್ಯಾದ ಕೆಲವು ಭಾಗಗಳಲ್ಲಿ ಹಾಗೂ ರಷ್ಯಾ ನಿಯಂತ್ರಣದಲ್ಲಿರುವ ಉಕ್ರೇನ್ ಪ್ರದೇಶಗಳಲ್ಲಿ ಗ್ಯಾಸೋಲಿನ್ ಕೊರತೆ ಉಂಟಾಗಿತ್ತು. ತೈಲ ಸಂಸ್ಕರಣಾಗಾರಗಳ ಮೇಲೆ ನಡೆದ ದಾಳಿ ಮತ್ತು ಹಠಾತ್ ಬೇಡಿಕೆಯ ಏರಿಕೆಯಿಂದ ಸಮಸ್ಯೆ ಉಂಟಾಗಿತ್ತು. ಈ ಬಾರಿ ಯಾವುದೇ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಫ್ತು ನಿಷೇಧ ಹೇರಲಾಗಿದೆ.
47 ಸಾವಿರ ಮೆಟ್ರಿಕ್ ಟನ್ ಎಲ್‍ಪಿಜಿ ಹೊತ್ತ ಜಗ್ ವಸಂತ್ ಹಡಗು ಮಾ.27 ರಂದು ಗುಜರಾತ್ ಬಂದರು ತಲುಪಿದೆ. ಇದರಿಂದ ದೇಶದಲ್ಲಿ ಉದ್ಭವಿಸಿರುವ ಗ್ಯಾಸ್ ಅಭಾವಕ್ಕೆ ಕೊಂಚ ರಿಲೀಫ್ ಸಿಗುವ ನಿರೀಕ್ಷೆ ಇದೆ.



