ಧರ್ಮಶಾಲಾ: ಐಪಿಎಲ್ 2026ರ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವಿನ ಪಂದ್ಯ ವೀಕ್ಷಿಸಲು ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಆಗಮಿಸಿದ್ದರು. ಈ ವೇಳೆ ಅವರು ಧರಿಸಿದ್ದ ವಿಶೇಷ ಉಂಗುರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಪತಿ ವಿರಾಟ್ ಕೊಹ್ಲಿಗೆ ಮತ್ತು ಆರ್‌ಸಿಬಿ ತಂಡಕ್ಕೆ ಹುರಿದುಂಬಿಸಲು ಅನುಷ್ಕಾ ಪ್ರತಿ ಆರ್‌ಸಿಬಿ ಮ್ಯಾಚ್ ವೀಕ್ಷಿಸಲು ಬರುತ್ತಾರೆ. ಪ್ರತಿ ಸಾರಿ ಬಂದಾಗಲೂ ಅನುಷ್ಕಾ ಮತ್ತು ವಿರಾಟ್ ಅವರ ಕೆಮಿಸ್ಟ್ರಿಯನ್ನು ಸೋಷಿಯಲ್ ಮೀಡಿಯಾದಲ್ಲಿ ‘ವಿರುಷ್ಕಾ’ ಫ್ಯಾನ್‌ಗಳು ಹೊಗಳೋದು ಸಾಮಾನ್ಯ. ಇನ್ನೂ ಕೆಲವೊಮ್ಮೆ ನಟಿಯ ಫ್ಯಾಷನ್ ಮತ್ತು ದುಬಾರಿ ಉಡುಪುಗಳು ವೈರಲ್ ಆಗುವುದನ್ನು ಸಹ ನಾವು ನೋಡಿದ್ದೇವೆ. ಅದೇ ರೀತಿ ಈ ಬಾರಿಯೂ ಸಹ ಅನುಷ್ಕಾ ನೆಟ್ಟಿಗರ ಗಮನಸೆಳೆದಿದ್ದಾರೆ.
ಪಂದ್ಯದ ವೇಳೆ ಗ್ಯಾಲರಿಯಿಂದ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡದ ಗೆಲುವಿಗಾಗಿ ಅನುಷ್ಕಾ ಪ್ರಾರ್ಥನೆ ಮಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಆದರೆ ನೆಟ್ಟಿಗರ ಗಮನ ಸೆಳೆದಿದ್ದು ಅವರ ಬೆರಳಿನಲ್ಲಿದ್ದ ವಿಶಿಷ್ಟ ಡಿಜಿಟಲ್ ಉಂಗುರ. ಸರಳವಾದ ಹೂವಿನ ವಿನ್ಯಾಸದ ಟಾಪ್ ಮತ್ತು ಜೀನ್ಸ್ ಧರಿಸಿದ್ದ ಅನುಷ್ಕಾ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಪಂದ್ಯದ ವೇಳೆ ಎಲ್ಲರ ಗಮನ ಸೆಳೆದದ್ದು ಅನುಷ್ಕಾ ಶರ್ಮಾ ಅವರ ಬೆರಳಿನಲ್ಲಿದ್ದ ಒಂದು ಅಪರೂಪದ ಆಕ್ಸೆಸರಿ (ಉಂಗುರ). ಪಂದ್ಯದುದ್ದಕ್ಕೂ ಆರ್‌ಸಿಬಿ ಗೆಲುವಿಗಾಗಿ ಅನುಷ್ಕಾ ಶರ್ಮಾ ಪ್ರಾರ್ಥನೆ ಮಾಡುತ್ತಾ, ಮಂತ್ರ ಪಠಿಸುತ್ತಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಈ ಸಮಯದಲ್ಲಿ ಅವರ ಬೆರಳಿನಲ್ಲಿದ್ದ ವಿಭಿನ್ನವಾದ ಸಾಧನವನ್ನು ನೋಡಿ ಜನರು ಕುತೂಹಲ ವ್ಯಕ್ತಪಡಿಸಿದರು.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ನೈಸಾ ಎಂಬುವವರು, ಅನುಷ್ಕಾ ಶರ್ಮಾ ತಮ್ಮ ಬೆರಳಿಗೆ ಧರಿಸಿರುವುದು ಏನು ಎಂದು ಪ್ರಶ್ನಿಸಿದ್ದರು. ಇದಕ್ಕೆ ಎಕ್ಸ್‌ನಲ್ಲಿನ ಗ್ರೋಕ್ ಎಐ ಚಾಟ್‌ಬಾಟ್ ಉತ್ತರಿಸಿದ್ದು, ಅದು ಒಂದು ಡಿಜಿಟಲ್ ಟ್ಯಾಲಿ ಕೌಂಟರ್ ರಿಂಗ್. ಇದನ್ನು ಜಪ ಕೌಂಟರ್ (Japa Counter) ಅಥವಾ ಪ್ರಾರ್ಥನೆ ಮಾಡುವ ಕೌಂಟರ್ ಉಂಗುರ ಎಂದೂ ಕರೆಯುತ್ತಾರೆ ಎಂದು ಉತ್ತರಿಸಿದೆ.
ಏನಿದು ಜಪ ಮಾಲಾ ಕೌಂಟರ್?
ಸಾಮಾನ್ಯವಾಗಿ ದೇವರ ನಾಮಸ್ಮರಣೆ ಅಥವಾ ಮಂತ್ರಗಳನ್ನು ಜಪಿಸುವಾಗ ಸಾಂಪ್ರದಾಯಿಕವಾಗಿ ರುದ್ರಾಕ್ಷಿ/ ಸ್ಪಟಿಕ/ ಜಪಮಾಲೆಯನ್ನು ಬಳಸಲಾಗುತ್ತದೆ. ಆದರೆ ಈ ಡಿಜಿಟಲ್ ಜಪ ಕೌಂಟರ್ ಆಧುನಿಕ ತಂತ್ರಜ್ಞಾನದ ಸಾಧನವಾಗಿದೆ. ಇದನ್ನು ಬೆರಳಿಗೆ ಉಂಗುರದಂತೆ ಸುಲಭವಾಗಿ ಧರಿಸಬಹುದು. ಪ್ರತಿ ಬಾರಿ ಮಂತ್ರ ಹೇಳಿದಾಗಲೂ ಅದರಲ್ಲಿರುವ ಬಟನ್ ಒತ್ತಿದರೆ ಸಾಕು, ಎಷ್ಟು ಬಾರಿ ಜಪ ಮಾಡಿದ್ದೇವೆ ಎಂಬ ಸಂಖ್ಯೆ ಅಲ್ಲಿರುವ ಸಣ್ಣ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಇದರಿಂದ ಮನಸ್ಸು ಬೇರೆಡೆಗೆ ಗಮನ ಹರಿಸದೆ ಪ್ರಾರ್ಥನೆ ಮಾಡಲು ಸಹಾಯವಾಗುತ್ತದೆ. ಸಾಮಾನ್ಯವಾಗಿ ಆನ್ಲೈನ್ (ಫ್ಲಿಪ್‌ಕಾರ್ಟ್, ಮೀಶೋ, ಅಮೆಜಾನ್) ಮಾರುಕಟ್ಟೆಯಲ್ಲಿ ಈ ಡಿಜಿಟಲ್ ಉಂಗುರ 150 ರಿಂದ 200 ರೂ. ಗೆ ಸಿಗುತ್ತದೆ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಆಗಾಗ ಇಂತಹ ಜಪ ಕೌಂಟರ್ ಬಳಸಿರುವುದನ್ನು ನಾವು ಕಾಣಬಹುದು. ಕಳೆದ ವರ್ಷ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ, ಈ ದಂಪತಿ ಬೃಂದಾವನಕ್ಕೆ ಭೇಟಿ ನೀಡಿ ಶ್ರೀ ಪ್ರೇಮಾನಂದ ಗೋವಿಂದ ಶರಣ್ ಜಿ ಮಹಾರಾಜ್ ಅವರ ಆಶೀರ್ವಾದ ಪಡೆದಿದ್ದರು. ಆ ಸಂದರ್ಭದಲ್ಲೂ ವಿರಾಟ್ ಕೊಹ್ಲಿ ಕೈಯಲ್ಲಿ ಜಪ ಕೌಂಟರ್ ಹಿಡಿದಿರುವುದು ಕಂಡುಬಂದಿತ್ತು. ಪ್ರಸ್ತುತ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿರುವ ಆರ್‌ಸಿಬಿ, ಐಪಿಎಲ್ 2026ರ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ.
