ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ಪೆಟ್ರೋಲ್-ಡೀಸೆಲ್ ದರ ಹೆಚ್ಚಿಸಿದಾಗ ‘ದೇಶಕ್ಕಾಗಿ’ ಎನ್ನುವವರು, ನಾವು ರೈತರ ಹಿತದೃಷ್ಟಿಯಿಂದ ಹಾಲಿನ ದರ ಏರಿಸಿದರೆ ‘ಸಾಮಾನ್ಯರ ಮೇಲೆ ಬರೆ’ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಮೋದಿ(Narendra Modi) ಮಾಡಿದರೆ ಮಾಸ್ಟರ್ ಸ್ಟ್ರೋಕ್, ನಾವು ರಾಜ್ಯ ಕಟ್ಟಬಾರದಾ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ನಂದಿನಿ ಹಾಲಿನ(Nandini Milk) ಪರಿಷ್ಕೃತ ದರ ಜಾರಿಯ ಬೆನ್ನಲ್ಲೇ ವಿರೋಧ ಪಕ್ಷಗಳ ಟೀಕೆಗೆ ಸಚಿವ ತಿರುಗೇಟು ನೀಡಿದ ಅವರು, ಹಲವು ವರ್ಷಗಳಿಂದ ಹಾಲಿನ ದರ ಹೆಚ್ಚಳವಾಗಿರಲಿಲ್ಲ. ಜನರ ಮೇಲೆ ಹೊರೆಯಾಗಬಾರದು ಎಂದೇ ಸರ್ಕಾರ ದೀರ್ಘಕಾಲದಿಂದ ದರ ಏರಿಕೆಯನ್ನು ಮುಂದೂಡುತ್ತಾ ಬಂದಿತ್ತು ಎಂದು ತಿಳಿಸಿದರು.
ಹೈನುಗಾರಿಕಾ ವೆಚ್ಚ ತೀವ್ರವಾಗಿ ಏರಿಕೆಯಾಗಿದ್ದು, ರೈತರು ಬದುಕುವುದೇ ಕಷ್ಟವಾಗಿತ್ತು. ಹೀಗಾಗಿ ರೈತ ಸಂಘಟನೆಗಳು ಈ ಹಿಂದಿನಿಂದಲೂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಮೇಲೆ ಸತತ ಒತ್ತಡ ತಂದಿದ್ದವು. ರೈತರನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದು ಸ್ಪಷ್ಟಪಡಿಸಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ನಂದಿನಿ ಹಾಲಿನ ದರ ಅತ್ಯಂತ ಕಡಿಮೆಯಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹಾಲಿನ ದರ ಎಷ್ಟಿದೆ ಎಂಬುದನ್ನು ಪರಿಶೀಲಿಸಿ ನಂತರ ಮಾತನಾಡಲಿ ಎಂದು ಸವಾಲು ಹಾಕಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಮಂಗನ ಕೈಗೆ ಮಾಣಿಕ್ಯ ಸಿಕ್ಕಿದ್ರೆ ಏನಾಗುತ್ತೆ? ಗೃಹ ಇಲಾಖೆ ದುಸ್ಥಿತಿ ಹಂಗಾಗಿದೆ: ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್ಡಿಕೆ ವಾಗ್ದಾಳಿ
ಕೇಂದ್ರವೇ ಕಾರಣ
ಸಾಮಾನ್ಯ ಜನರ ಮೇಲಿನ ಆರ್ಥಿಕ ಹೊರೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆರೋಪಿಸಿದ ಸಚಿವರು ಗ್ರಾಹಕ ಬೆಲೆ ಸೂಚ್ಯಂಕ ನಿಯಂತ್ರಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದು. ಕಳೆದ 13 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಹೇಗೆ ಏರಿದೆ ಎಂಬುದನ್ನು ಗಮನಿಸಬೇಕು. ಅಕ್ಕಿ, ಗೋಧಿ, ಬೇಳೆಕಾಳು ಹಾಗೂ ಅಡುಗೆ ಎಣ್ಣೆಯ ದರಗಳು ಗಗನಕ್ಕೇರಿವೆ. ಇವೆಲ್ಲದಕ್ಕೂ ರಾಜ್ಯ ಸರ್ಕಾರ ಕಾರಣವೇ ಎಂದು ಪ್ರಶ್ನಿಸಿದರು.
ಪೆಟ್ರೋಲ್ ಬೆಲೆ 200 ರೂಪಾಯಿ ಮುಟ್ಟಿದರೂ ‘ದೇಶಕ್ಕೋಸ್ಕರ ಕೊಡುತ್ತೇವೆ’ ಎಂದು ಸಮರ್ಥಿಸಿಕೊಳ್ಳುತ್ತಿದ್ದ ಬಿಜೆಪಿಯವರು ಈಗ ಸಾಮಾನ್ಯರ ಪರ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನ ನೆಪವೊಡ್ಡಿ ತೈಲ ಬೆಲೆ ಏರಿಸಲಾಗಿತ್ತು. ಆದರೆ ಈಗ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಸುತ್ತಿದ್ದರೂ ಜನರಿಗೆ ಆ ಲಾಭವನ್ನು ಕೇಂದ್ರ ಸರ್ಕಾರ ಏಕೆ ವರ್ಗಾಯಿಸುತ್ತಿಲ್ಲ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಮೊದಲು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಲಿ. ಇಂಧನ ದರ ಇಳಿಕೆಯಾದರೆ ಸಾರಿಗೆ ಮತ್ತು ಸರಕು ಸಾಗಣೆ ವೆಚ್ಚ ತಾನಾಗಿಯೇ ಇಳಿದು ಬೆಲೆಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಹೇಳಿದರು.
