ಹಾವೇರಿ:ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಗ್ರಾಮ ಲೆಕ್ಕಾಧಿಕಾರಿ (VA) ನೇಮಕಾತಿ ಪರೀಕ್ಷೆಯಲ್ಲಿ 151 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಭ್ಯರ್ಥಿ ಶಂಕರ್ ಬನ್ನೂರು (Shankar Bannuru) ಅವರ ಫಲಿತಾಂಶದ ಸುತ್ತ ಭಾರಿ ಚರ್ಚೆ ಹಾಗೂ ಅನುಮಾನಗಳು ಎದ್ದಿವೆ. ಕಾನ್ಸ್ಟೆಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ವ್ಯಕ್ತಿ, ವಿಎ ಪರೀಕ್ಷೆಯಲ್ಲಿ ರಾಜ್ಯಕ್ಕೇ ಟಾಪರ್ ಆಗಿದ್ದು ಹೇಗೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿ ತನಿಖೆಗೆ ಒತ್ತಾಯಿಸಲಾಗಿತ್ತು.
ಇದರ ಬೆನ್ನಲ್ಲೇ ಎಚ್ಚೆತ್ತ ಕೆಇಎ, ಹಾವೇರಿ ಜಿಲ್ಲಾಧಿಕಾರಿಗಳ(Haveri DC) ನೇತೃತ್ವದಲ್ಲಿ ಪರಿಶೀಲನೆಗೆ ಆದೇಶಿಸಿತ್ತು. ಈಗಾಗಲೇ ತಹಶೀಲ್ದಾರ್ ಹಾಗೂ ಪೊಲೀಸರು(Police) ಅವರ ಮನೆಗೆ ತೆರಳಿ ಮೂಲ ದಾಖಲೆಗಳನ್ನು ಪರಿಶೀಲಿಸಿದ್ದು, ಈ ಬಗ್ಗೆ ಶಂಕರ್ ಬನ್ನೂರು ಪಬ್ಲಿಕ್ ಟಿವಿ ಜೊತೆ ಮಾತನಾಡಿ ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಹಾನಗಲ್ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಶಂಕರ್, ಪರೀಕ್ಷೆ ಮತ್ತು ಅಂಕಗಳ ಕುರಿತು ಎದ್ದಿರುವ ಎಲ್ಲ ಪ್ರಶ್ನೆಗಳಿಗೂ ವಿವರಣೆ ನೀಡಿದ್ದಾರೆ. ಕಾನ್ಸ್ಟೆಬಲ್ ಪರೀಕ್ಷೆ ಬರೆದ ಸಂದರ್ಭದಲ್ಲಿ ನನ್ನ ಸಹೋದರನಿಗೆ ಭೀಕರ ಅಪಘಾತವಾಗಿತ್ತು. ಆ ವೇಳೆ ನನಗೂ ತೀವ್ರ ಪೆಟ್ಟಾಗಿತ್ತು. ಆ ಮಾನಸಿಕ ಹಾಗೂ ದೈಹಿಕ ಆಘಾತದಿಂದ ಪರೀಕ್ಷೆಯನ್ನು ಸರಿಯಾಗಿ ಬರೆಯಲು ಸಾಧ್ಯವಾಗದೆ ಕಡಿಮೆ ಅಂಕಗಳು ಬಂದಿದ್ದವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ 25, VAO ಪರೀಕ್ಷೆಯಲ್ಲಿ 151 ಅಂಕ: ಹಾವೇರಿ ಅಭ್ಯರ್ಥಿಯ ಅಂಕ ರಹಸ್ಯ ಭೇದಿಸಲು ತನಿಖೆಗೆ ಆದೇಶ
ನಾನು ಅತ್ಯಂತ ಬಡ ಕುಟುಂಬದಿಂದ ಬಂದವನು. ಹೊಟೇಲ್ ಹಾಗೂ ಸಿನಿಮಾ ಮಂದಿರಗಳಲ್ಲಿ ಕೆಲಸ ಮಾಡುತ್ತಲೇ ಸತತವಾಗಿ ಓದಿಕೊಂಡಿದ್ದೇನೆ. ಇದುವರೆಗೆ 45 ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದೇನೆ. ಹಲವು ಪರೀಕ್ಷೆಗಳಲ್ಲಿ ಸಂದರ್ಶನದವರೆಗೂ ಹೋಗಿದ್ದೆ, ಕೆಲವು ಪರೀಕ್ಷೆಗಳಲ್ಲಿ ದೈಹಿಕ ಪರೀಕ್ಷೆ (Physical Test) ಕ್ಲಿಯರ್ ಆಗದೆ ನೌಕರಿ ಕೈತಪ್ಪಿತ್ತು. ನಿರಂತರ ಪರಿಶ್ರಮದಿಂದಲೇ ಈಗ ವಿಎ ಪರೀಕ್ಷೆಯಲ್ಲಿ ಟಾಪ್ ಅಂಕ ಗಳಿಸಿದ್ದೇನೆ ಎಂದರು.
ನನ್ನ ಪ್ರಾಮಾಣಿಕತೆಯ ಬಗ್ಗೆ ನನಗೆ ನಂಬಿಕೆಯಿದೆ. ಸರ್ಕಾರ ಅಥವಾ ಇಲಾಖೆ ನಡೆಸುವ ಯಾವುದೇ ರೀತಿಯ ತನಿಖೆಗೂ ನಾನು ಸಂಪೂರ್ಣ ಮುಕ್ತನಾಗಿದ್ದೇನೆ. ಈ ಕುರಿತು ಸ್ವತಃ ಜಿಲ್ಲಾಧಿಕಾರಿಗಳನ್ನೇ ಖುದ್ದು ಭೇಟಿಯಾಗಿ ವಸ್ತುಸ್ಥಿತಿ ವಿವರಿಸುತ್ತೇನೆ ಎಂದು ತಿಳಿಸಿದರು.
