ಹಾವೇರಿ/ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಕೆಎಸ್ಆರ್ಪಿ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ(KSRP Constable Exam) ಕೇವಲ 25 ಅಂಕ ಗಳಿಸಿದ್ದ ಅಭ್ಯರ್ಥಿಯೊಬ್ಬರು, ಗ್ರಾಮ ಆಡಳಿತಾಧಿಕಾರಿ (VAO) ಪರೀಕ್ಷೆಯಲ್ಲಿ ಬರೋಬ್ಬರಿ 151 ಅಂಕಗಳನ್ನು ಪಡೆದಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅನುಮಾನಾಸ್ಪದ ಅಂಕಗಳ ವ್ಯತ್ಯಾಸದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪ್ರಕರಣದ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಹಾವೇರಿ(Haveri) ಜಿಲ್ಲಾಡಳಿತಕ್ಕೆ ಆದೇಶಿಸಿದೆ.
ಹಾನಗಲ್ ಮೂಲದ ಶಂಕರ ಬನ್ನೂರು ಅಕ್ಟೋಬರ್ 4ರಂದು ಶಿಗ್ಗಾಂವಿಯ ಪರೀಕ್ಷಾ ಕೇಂದ್ರದಲ್ಲಿ VAO ನೇಮಕಾತಿ ಪರೀಕ್ಷೆ ಬರೆದಿದ್ದರು. ಫಲಿತಾಂಶ ಪ್ರಕಟವಾದಾಗ ಇವರು 151 ಅಂಕ ಗಳಿಸಿರುವುದು ಬೆಳಕಿಗೆ ಬಂದಿದೆ. ಆದರೆ ಈ ಹಿಂದೆ ನಡೆದಿದ್ದ ಕೆಎಸ್ಆರ್ಪಿ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಇವರು ಕೇವಲ 25 ಅಂಕಗಳನ್ನು ಪಡೆದಿದ್ದರು. ಅಷ್ಟೇ ಅಲ್ಲದೆ ಇವರ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಅಂಕಗಳು ಶೇ. 50ಕ್ಕಿಂತಲೂ ಕಡಿಮೆಯಿವೆ ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ, “ಲಭ್ಯವಿರುವ ಬಯೋಮೆಟ್ರಿಕ್ ಹಾಗೂ ಮುಖಚಹರೆ ಗುರುತಿಸುವ (Facial Recognition) ದಾಖಲೆಗಳ ಪ್ರಕಾರ, ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಯೇ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿರುವುದು ದೃಢಪಟ್ಟಿದೆ. ಅಭ್ಯರ್ಥಿಯ ಒಎಂಆರ್ (OMR) ಉತ್ತರ ಪತ್ರಿಕೆಯು ದಾಖಲೆಗಳಿಗೆ ಹೊಂದಿಕೆಯಾಗಿದ್ದು, ಅದನ್ನು ಅಕ್ಟೋಬರ್ 5ರಂದೇ ಸ್ಕ್ಯಾನ್ ಮಾಡಿ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಆದರೆ, ಕೇವಲ ಇಷ್ಟರಿಂದಲೇ ಪರೀಕ್ಷಾ ಕೇಂದ್ರದೊಳಗೆ ಯಾವುದೇ ಅಕ್ರಮ ನಡೆದಿಲ್ಲ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಸಂಪೂರ್ಣ ಸತ್ಯಾಂಶ ತಿಳಿಯಲು ತನಿಖೆಯ ಅಗತ್ಯವಿದೆ” ಎಂದು ತಿಳಿಸಿದ್ದಾರೆ.
ಅಭ್ಯರ್ಥಿಯ ಶೈಕ್ಷಣಿಕ ವಿವರಗಳ ಪರಿಶೀಲನೆ ವೇಳೆ ಮತ್ತೊಂದು ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಕೆಇಎ ದತ್ತಾಂಶದ ಪ್ರಕಾರ, ಶಂಕರ ಬನ್ನೂರು 2013ರಲ್ಲಿ ದ್ವಿತೀಯ ಪಿಯುಸಿ ತೇರ್ಗಡೆಯಾಗಿದ್ದರು. ವಿಎಒ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಪದವಿಪೂರ್ವ ಶಿಕ್ಷಣ ಇಲಾಖೆಯ ಡೇಟಾದೊಂದಿಗೆ ಈ ಮಾಹಿತಿ ತಾಳೆಯಾಗಿತ್ತು. ಆದರೆ ಕೆಎಸ್ಆರ್ಪಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವಾಗ ತಾನು 2026ರಲ್ಲಿ ಉತ್ತೀರ್ಣನಾಗಿರುವುದಾಗಿ ಅಭ್ಯರ್ಥಿ ತಿದ್ದುಪಡಿ ಮಾಡಿಕೊಂಡಿರುವುದು ಪ್ರಾಧಿಕಾರದ ಸರ್ವರ್ನಲ್ಲಿ ಪತ್ತೆಯಾಗಿದೆ. ಈ ತಿದ್ದುಪಡಿ ಹೇಗೆ ಮತ್ತು ಯಾವ ಉದ್ದೇಶಕ್ಕೆ ನಡೆದಿದೆ ಎಂಬ ಕುರಿತೂ ತನಿಖೆ ನಡೆಯಬೇಕಿದೆ.
ಶಿಗ್ಗಾಂವಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ನಿಯಮಗಳ ಉಲ್ಲಂಘನೆ ಅಥವಾ ಯಾವುದೇ ಅಕ್ರಮ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಾವೇರಿ ಅಪರ ಜಿಲ್ಲಾಧಿಕಾರಿಗಳ (ADC) ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.
ಪರೀಕ್ಷಾ ಕೇಂದ್ರದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು, ಕೊಠಡಿ ಮೇಲ್ವಿಚಾರಕರ ವಿಚಾರಣೆ ನಡೆಸುವುದು ಹಾಗೂ ತನಿಖೆಯಲ್ಲಿ ಯಾವುದೇ ಕಾನೂನುಬಾಹಿರ ಕೃತ್ಯ ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೆಇಎ ನಿರ್ದೇಶನ ನೀಡಿದೆ. ಅಧಿಕೃತ ತನಿಖಾ ವರದಿ ಬಂದ ಬಳಿಕವಷ್ಟೇ ಅಂಕಗಳ ಈ ಭಾರಿ ಜಿಗಿತದ ಹಿಂದಿರುವ ಅಸಲಿ ಸತ್ಯ ಹೊರಬರಲಿದೆ.
