ಬೆಂಗಳೂರು: ರಾಜಕೀಯ ಬೆಳವಣಿಗೆ ಮಧ್ಯ ರಾಜ್ಯಪಾಲ ಗೆಹ್ಲೋಟ್ (Thawar Chand Gehlot) ಅವರು ಮುಂಬೈಗೆ ತೆರಳಿರುವುದು ಕಾಂಗ್ರೆಸ್ (Congress) ಪಡೆಯಲ್ಲಿ ಹಲವು ವದಂತಿ, ನಾನಾ ಚರ್ಚೆಗಳಿಗೆ ಕಾರಣವಾಗಿದೆ. ಇದರ ಮಧ್ಯೆ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಕೊಡ್ತಾರಾ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಇಂದು ಬೆಳಿಗ್ಗೆ 11:30 ಹಾಗೂ ಮಧ್ಯಾಹ್ನ 3 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದರು. ಅದರಂತೆ ಸಿದ್ದರಾಮಯ್ಯ ಅವರಿಂದು ಲೋಕಭವನಕ್ಕೆ ತೆರಳಿ ರಾಜೀನಾಮೆ ನೀಡಲಿದ್ದರು. ಆದರೆ ರಾಜ್ಯಪಾಲರು ದಿಢೀರ್ ಮುಂಬೈಗೆ ತೆರಳಿರುವುದು ಚರ್ಚೆಗೆ ಕಾರಣವಾಗಿದೆ. ಈ ಕುರಿತು ಲೋಕಭವನ ಕಚೇರಿ ಸಿಎಂ ಕಚೇರಿಗೆ ಮಾಹಿತಿ ನೀಡಿದ್ದು, ಹೀಗಾಗಿ ಸಿದ್ದರಾಮಯ್ಯ ಭೇಟಿಗೆ ಸಮಯ ನಿಗದಿಪಡಿಸುವುದು ಕಷ್ಟವಾಗಿದೆ. ರಾಜ್ಯಪಾಲರು ವಾಪಸ್ಸಾದ ಬಳಿಕವೇ ಸಮಯ ನಿಗದಿ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ – ಡಿಕೆಶಿ ಎದುರೇ ‘5 ವರ್ಷ ಸಿದ್ದರಾಮಯ್ಯ ಸಿಎಂ’ ಘೋಷಣೆ ಕೂಗಿದ ಅಭಿಮಾನಿಗಳು
ಸದ್ಯ ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ರಾಜ್ಯಪಾಲರ ನಡೆಯ ಬಗ್ಗೆಯು ಸಿಎಂ, ಡಿಸಿಎಂ ಹಾಗೂ ಸುರ್ಜೇವಾಲ ಅವರು ಚರ್ಚೆ ನಡೆಸಲು ನಿರ್ಧರಿಸಿದ್ದಾರೆ. ಅವರು ಕೊಟ್ಟ ಸಮಯದಂತೆ 3 ಗಂಟೆವರೆಗೆ ಕಾದು, ಬಳಿಕ ವಾಪಸ್ ಆಗಿದಿದ್ದರೆ ಏನು ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜೊತೆಗೆ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಲೋಕಭವನಕ್ಕೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿ ಬರುವ ಬಗ್ಗೆಯೂ ಯೋಚಿಸಲಿದ್ದಾರೆ ಎನ್ನಲಾಗಿದೆ.
ಸಂವಿಧಾನದ ಕೆಲ ವಿಧಿ ಸಿಎಂ ರಾಜೀನಾಮೆ ಯಾರಿಗೆ ಕೊಡಬೇಕು? ರಾಜ್ಯಪಾಲರ ಅನುಪಸ್ಥಿತಿಯಲ್ಲಿ ರಾಜೀನಾಮೆ ಯಾರಿಗೆ ನೀಡಬೇಕು? ಇತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ.
ಸಿಎಂ ರಾಜೀನಾಮೆ ಯಾರಿಗೆ ಕೊಡಬೇಕು?
- ರಾಜ್ಯಾಂಗದ ನಿಯಮಗಳ ಪ್ರಕಾರ ಮುಖ್ಯಮಂತ್ರಿಗಳು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೇ ನೀಡಬೇಕು.
- ಒಂದು ವೇಳೆ ರಾಜ್ಯದಲ್ಲಿ ಖಾಯಂ ರಾಜ್ಯಪಾಲರು ಇಲ್ಲದಿದ್ದರೆ (ಹುದ್ದೆ ಖಾಲಿ ಇದ್ದರೆ ಅಥವಾ ಅವರು ಲಭ್ಯವಿಲ್ಲದಿದ್ದರೆ) ಆ ಸಮಯದಲ್ಲಿ ಹಂಗಾಮಿ ರಾಜ್ಯಪಾಲರಾಗಿ ಯಾರು ಕಾರ್ಯನಿರ್ವಹಿಸುತ್ತಿದ್ದಾರೋ ಅವರಿಗೆ ರಾಜೀನಾಮೆ ಸಲ್ಲಿಸಬೇಕಾಗುತ್ತದೆ.
- ಮುಖ್ಯಮಂತ್ರಿಗಳ ನೇಮಕಾತಿ ಮತ್ತು ರಾಜೀನಾಮೆಗೆ ಸಂಬಂಧಿಸಿದಂತೆ ಭಾರತ ಸಂವಿಧಾನದ ವಿಧಿ 164 ಸ್ಪಷ್ಟವಾದ ನಿರ್ದೇಶನವನ್ನು ನೀಡುತ್ತದೆ.
- ಭಾರತ ಸಂವಿಧಾನದ ವಿಧಿ 164(1)ರ ಪ್ರಕಾರ ಮುಖ್ಯಮಂತ್ರಿಗಳನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ ಮತ್ತು ಇತರ ಸಚಿವರನ್ನು ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ರಾಜ್ಯಪಾಲರು ನೇಮಕ ಮಾಡುತ್ತಾರೆ.
- ಇದೇ ವಿಧಿಯ ಅಡಿಯಲ್ಲಿ, ಮುಖ್ಯಮಂತ್ರಿಗಳು ಅಥವಾ ಯಾವುದೇ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾದರೆ, ಅವರು ತಮ್ಮ ರಾಜೀನಾಮೆ ಪತ್ರವನ್ನು ಕಡ್ಡಾಯವಾಗಿ ರಾಜ್ಯದ ರಾಜ್ಯಪಾಲರಿಗೇ ಉದ್ದೇಶಿಸಿ ಬರೆಯಬೇಕು ಮತ್ತು ಅವರಿಗೆ ಸಲ್ಲಿಸಬೇಕು.
- ಸಂವಿಧಾನದಲ್ಲಿ ರಾಜ್ಯಪಾಲರನ್ನು ಹೊರತುಪಡಿಸಿ ಬೇರೆ ಯಾರಿಗೂ ರಾಷ್ಟ್ರಪತಿ ಅಥವಾ ಸಭಾಪತಿಗಳಿಗೆ ಮುಖ್ಯಮಂತ್ರಿಗಳು ನೇರವಾಗಿ ರಾಜೀನಾಮೆ ನೀಡುವ ಅವಕಾಶವಿಲ್ಲ.
ರಾಜ್ಯಪಾಲರು ಇಲ್ಲದಿದ್ದರೆ ಸಂವಿಧಾನದ ಪರಿಹಾರವೇನು?
- ವಿಧಿ 160ರ ಪ್ರಕಾರ, ಒಂದು ವೇಳೆ ರಾಜ್ಯಪಾಲರ ಹುದ್ದೆ ಆಕಸ್ಮಿಕವಾಗಿ ಖಾಲಿಯಾದರೆ ಅಥವಾ ಅವರು ಲಭ್ಯವಿಲ್ಲದಿದ್ದರೆ ಅನಿರೀಕ್ಷಿತ ಸಂದರ್ಭಗಳಲ್ಲಿ ರಾಜ್ಯದ ರಾಜ್ಯಪಾಲರ ಕಾರ್ಯಗಳನ್ನು ನಿರ್ವಹಿಸಲು ರಾಷ್ಟ್ರಪತಿಗಳು ಸೂಕ್ತ ವ್ಯವಸ್ಥೆ ಮಾಡಬಹುದು.
- ಈ ಅಧಿಕಾರವನ್ನು ಬಳಸಿ ರಾಷ್ಟ್ರಪತಿಗಳು ನೆರೆಯ ರಾಜ್ಯದ ರಾಜ್ಯಪಾಲರಿಗೆ ಆ ರಾಜ್ಯದ ಹೆಚ್ಚುವರಿ ಜವಾಬ್ದಾರಿ ನೀಡುವುದು (ರಾಜ್ಯಾಂಗದ 7ನೇ ತಿದ್ದುಪಡಿ, ವಿಧಿ 153) ಅಥವಾ ಆ ರಾಜ್ಯದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹಂಗಾಮಿ ರಾಜ್ಯಪಾಲರನ್ನಾಗಿ ನೇಮಿಸುವುದು.
- ಸಂವಿಧಾನದ ವಿಧಿ 154ರ ಪ್ರಕಾರ, ರಾಜ್ಯದ ಇಡೀ ಕಾರ್ಯಾಂಗದ ಅಧಿಕಾರವು ರಾಜ್ಯಪಾಲರ ಹೆಸರಿನಲ್ಲೇ ಇರುತ್ತದೆ.
- ಮುಖ್ಯಮಂತ್ರಿಗಳು ಕೇವಲ ಸರ್ಕಾರದ ಮುಖ್ಯಸ್ಥರಷ್ಟೇ, ಆದರೆ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರು ರಾಜ್ಯಪಾಲರು.
- ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕಾದಾಗ ಯಾರೇ ಖಾಯಂ ರಾಜ್ಯಪಾಲರು ಇಲ್ಲದಿದ್ದರೂ, ಸಂವಿಧಾನದ ವಿಧಿ 160ರ ಅಡಿಯಲ್ಲಿ ರಾಷ್ಟ್ರಪತಿಗಳು ನೇಮಿಸಿದ ಹಂಗಾಮಿ ರಾಜ್ಯಪಾಲರು ಆ ಹುದ್ದೆಯಲ್ಲಿ ಇದ್ದೇ ಇರುತ್ತಾರೆ.
- ಸಂವಿಧಾನದ ವಿಧಿ 164(1)ರ ಪ್ರಕಾರ ಮುಖ್ಯಮಂತ್ರಿಗಳು ಆ ಹಂಗಾಮಿ ರಾಜ್ಯಪಾಲರಿಗೇ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಬೇಕು.
- ಸಾಂವಿಧಾನಿಕವಾಗಿ ರಾಜ್ಯಪಾಲರ ಸೀಟು ಒಂದು ಕ್ಷಣವೂ ಖಾಲಿ ಇರುವಂತಿಲ್ಲ.ಇದನ್ನೂ ಓದಿ:ದೆಹಲಿ ಅಂಗಳದಲ್ಲಿ ಹೈಕಮಾಂಡ್ಗೆ ಸಿದ್ದರಾಮಯ್ಯ ಚೆಕ್ಮೇಟ್ – ಸಿಎಂ ಒಪ್ಪಿಸಲು ಜಾರ್ಜ್ಗೆ ರಾಹುಲ್ ಟಾಸ್ಕ್
