ಅದು ಬರಿ ಮನೆಯಲ್ಲ. ಬೀಜ ಸಂಗ್ರಹ ಕೇಂದ್ರ, ಅಪರೂಪದ ಧಾನ್ಯ, ತರಕಾರಿ ಬೀಜ ಭಂಡಾರ. ಕಳೆದ 40 ವರ್ಷಗಳಿಂದ ಸಾವಯವ ಕೃಷಿ ಮೂಲಕ ನೂರಾರು ಬಗೆಯ ಬಿತ್ತನೆ ಬೀಜಗಳನ್ನು ಮನೆಯಲ್ಲಿ ಸಂಗ್ರಹ ಮಾಡಿ, ರೈತರಿಗೆ ನೀಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿರುವ ಬೀಜ ಮಾತೆ ಪಾಪಮ್ಮ (Papamma) ಕೋಲಾರ ಜಿಲ್ಲೆಯಲ್ಲಿ ಅತಿ ಪ್ರಖ್ಯಾತಿ.
ತಾವು ಸಾವಯವ ಕೃಷಿ ಮೂಲಕ ಬೆಳೆದು ಸಂಗ್ರಹ ಮಾಡಿರುವ ನಾನಾ ಬಗೆಯ ಬೀಜಗಳನ್ನು ತೋರಿಸುತ್ತಿರುವ ಪಾಪಮ್ಮ. ಮುಳಬಾಗಿಲು ತಾಲೂಕಿನ ಕುರುಬರಹಳ್ಳಿಯವರು. ಬೀಜ ಮಾತೆ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ತನ್ನ ಮನೆಯನ್ನೇ ಸಾವಯವ ಬಿತ್ತನೆ ಬೀಜದ ಬ್ಯಾಂಕ್ ಆಗಿ ಪರಿವರ್ತಿಸಿದ್ದಾರೆ 70 ವರ್ಷದ ವೃದ್ಧೆ ಪಾಪಮ್ಮ. ಇದನ್ನೂ ಓದಿ: ಶರಣ್ಯ ಫಾರ್ಮ್ಸ್ ರೂವಾರಿಗೆ ವಿದ್ಯಾರಾಣಿ ಜಯಸ್ವಾಮಿಗೆ ನಾರಿ ನಾರಾಯಣಿ ಪ್ರಶಸ್ತಿ
ಕಳೆದ 40 ವರ್ಷಗಳಿಂದ ತಮಗಿರುವ ಮೂರೂವರೆ ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುವ ಮೂಲಕ ನಾನಾ ಬಗೆಯ ಅಪರೂಪದ ತರಕಾರಿ ಹಾಗೂ ಧಾನ್ಯದ ಬೀಜಗಳನ್ನ ಸಂಗ್ರಹ ಮಾಡಿದ್ದಾರೆ. ಇದೆಲ್ಲವೂ ರಾಸಾಯನಿಕಗಳನ್ನು ಬಳಸದೇ ಸಂಪ್ರದಾಯಿಕ ಬೇಸಾಯ ಪದ್ದತಿ ಮೂಲಕ ಬೆಳೆದಿರುವ ಸಾವಯವ ಬೀಜ ಎನ್ನುವುದೇ ವಿಶೇಷ.

ಪಾಪಮ್ಮ ಅವರ ಬಳಿ ನಾನಾ ಬಗೆಯ, ಅಳಿವಿನಂಚಿನಲ್ಲಿರುವ ಧಾನ್ಯಗಳ ತಳಿಗಳಿವೆ. ರಾಗಿ, ಭತ್ತ, ಸೇರಿದಂತೆ ಸಾಂಪ್ರದಾಯಿಕವಾದ 500 ಕ್ಕೂ ಬಗೆಯ ವಿವಿಧ ತಳಿಯ ಬೀಜಗಳ ಸಂಗ್ರಹ ಇದೆ. ಅದೆಷ್ಟೋ ಬಗೆಯ ಗುಣಮಟ್ಟದ ಬೀಜಗಳನ್ನ ಸಂಗ್ರಹ ಮಾಡಿ ರೈತರಿಗೆ ವಿತರಿಸುತ್ತಿದ್ದಾರೆ. ಬಿತ್ತನೆ ಕಾರ್ಯಕ್ಕೆ ರೈತರಿಗೆ ಒಂದು ಕೆಜಿಯಂತೆ ನೀಡಿ ನಂತರ ಬೆಳೆ ಬಂದ ಮೇಲೆ ಎರಡು ಕೆಜಿಯಂತೆ ವಾಪಸ್ ಪಡೆಯುವುದು ಇವರ ಹವ್ಯಾಸ.
ಇವರ ಬಳಿ ಇರುವ ಬಿತ್ತನೆ ಬೀಜಗಳನ್ನು ಬೇರೆ ದೇಶದವರು ಬಂದು ವೀಕ್ಷಣೆ ಮಾಡಿಕೊಂಡು ಹೋಗಿದ್ದಾರೆ. ವೃದ್ಧಾಪ್ಯದಲ್ಲೂ ಕಾಯಕ ಮುಂದುವರೆಸಿಕೊಂಡು ಹೋಗುತ್ತಿರುವ ಬೀಜ ಮಾತೆ ಪಾಪಮ್ಮ ಅವರಿಗೆ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹರ್ಷಿಸುತ್ತದೆ. ಇದನ್ನೂ ಓದಿ: ವ್ಹೀಲ್‌ಚೇರ್‌ನಲ್ಲಿ ರೊಟ್ಟಿ ಮಾರುತ್ತಿರುವ ಜಯಶ್ರೀಗೆ ನಾರಿ ನಾರಾಯಣಿ ಗೌರವ
ಪಬ್ಲಿಕ್ ಟಿವಿ (Public TV) ಸಹಯೋಗದಲ್ಲಿ ಎಕ್ಸೆಲ್ ಅಕಾಡೆಮಿಕ್ಸ್ ಪ್ರಸ್ತುತ ಪಡಿಸುವ ‘ನಾರಿ ನಾರಾಯಣಿ-2026’ (Nari Narayani 2026 Award) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಸಾಧಕಿಯರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಅವರು ಮಾತನಾಡಿ, ‘ನಾರಿ ನಾರಾಯಣಿ’ ರೂಪುಗೊಂಡ ಉದ್ದೇಶವೇ ನಮ್ಮ ಮಹಿಳೆಯರ ಯಶಸ್ಸನ್ನು ಗುರುತಿಸಬೇಕೆಂದು. ಐದು ವರ್ಷದಿಂದ ಬಹಳ ಅದ್ಭುತವಾಗಿ ನಡೆದುಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

