ಗದಗ: ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ಮರು ಅರ್ಜಿ ಸಲ್ಲಿಕೆ ನೋಡಿದರೆ ಆಡಳಿತ ವೈಫಲ್ಯದ ಕಾರಣ ಕಾಂಗ್ರೆಸ್‌ನವರು (Congress) ಇಂತಹ ಹೊಸ ಸ್ವರೂಪ ಕೊಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಕೊಳ್ಳೆ ಹೊಡೆಯುವುದರಲ್ಲಿ ನಿಸ್ಸೀಮರು. ಸತ್ತವರ ಹೆಸರಲ್ಲೇ, ಇನ್ನೂ ಹುಟ್ಟದೇ ಇರುವವರ ಹೆಸರಲ್ಲೇ ಆಗಿರಬಹುದು ಒಟ್ಟಿನಲ್ಲಿ ದುಡ್ಡು ಮಾಡುವುದೇ ಅವರ ಜಾಯಮಾನ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ (DV Sadananda Gowda) ಲೇವಡಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಾಗಿರುವುದರ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಈಗ ಹಣವಿಲ್ಲ. ಬೇಡವಾದುದಕ್ಕೆ ಹೆಚ್ಚು ಖರ್ಚು ಮಾಡುತ್ತಾರೆ. ಹಾಗಾಗಿ ಇಂತಹ ಯೋಜನೆಗಳಿಗೆ ಅವರ ಬಳಿ ದುಡ್ಡಿಲ್ಲ. ದಾರಿ ತಪ್ಪಿಸುವ ಕೆಲಸ ಮಾಡುವುದು ಕಾಂಗ್ರೆಸ್‌ನವರ ಸಣ್ಣತನ. ಇದು ತಂತ್ರಜ್ಞಾನದ ಯುಗ. ಯಾರೂ ಕೂಡ ಹೊಸ ಅರ್ಜಿ ಹಾಕುವ ಅವಶ್ಯಕತೆಯಿಲ್ಲ. ತಂತ್ರಜ್ಞಾನ ಬಳಸಿಕೊಂಡು ತಿದ್ದುಪಡಿ ಮಾಡಬಹುದು ಎಂದಿದ್ದಾರೆ.
ಮರಣ ಪ್ರಮಾಣ ಪತ್ರ ಅಪ್ಲೋಡ್ ಮಾಡಿದರೆ ಸಾಕು ಅದು ಬಂದ್ ಆಗುತ್ತೆ. ಮರು ಸರ್ವೇಯ ಅವಶ್ಯಕತೆಯೇ ಇಲ್ಲ. ಆಯಾ ತಹಸಿಲ್ದಾರ್ ಮೂಲಕ ಫಲಾನುಭವಿಗಳ ಲಿಸ್ಟ್ ಪಡೆಯಬಹುದು. ಮರಣ ಹೊಂದಿದವರ ಬಗ್ಗೆ ತಹಸಿಲ್ದಾರ್ ಸರ್ಟಿಫಿಕೇಟ್ ಅಪ್ಲೋಡ್ ಮಾಡಿದರೆ ತಾನಾಗಿಯೇ ರದ್ದಾಗುತ್ತೆ. ಕಾಂಗ್ರೆಸ್‌ನವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಈ ಮೂಲಕ ಗೊತ್ತಾಗುತ್ತಿದೆ. ಇದು ಆಗಬಾರದು ಎನ್ನುವುದು ನಮ್ಮ ಆಗ್ರಹ ಎಂದು ಹೇಳಿದ್ದಾರೆ.
ಬಿಡದಿ ಟೌನ್‌ಶಿಪ್ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿ, ರೈತರು ದೇಶದ ಬೆನ್ನಲುಬು. ಇತ್ತೀಚೆಗೆ ದೇವನಹಳ್ಳಿಯಲ್ಲಿ ಸಿದ್ದರಾಮಯ್ಯ ಅವರಿಗೆ ಇದೇ ಪರಿಸ್ಥಿತಿ ಎದುರಾಗಿತ್ತು. ರೈತರ ಒತ್ತಡಕ್ಕೆ ಮಣಿದು ಅದನ್ನೆಲ್ಲಾ ಹಿಂಪಡೆದಿದ್ದರು. ಡಿ.ಕೆ.ಶಿವಕುಮಾರ್ ಅವರಿಗೆ ಡಿ-ನೋಟಿಫಿಕೇಶನ್ ಸಂಬಂಧಗಳು ಸ್ವಲ್ಪ ಹೆಚ್ಚು ಗೊತ್ತಿವೆ. ಹಾಗಾಗಿ ಏನಾದರೂ ಮಾಡಬಹುದು. ರಾಮನಗರ, ಬಿಡದಿ ಅವರ ಕಾರ್ಯಕ್ಷೇತ್ರಕ್ಕೆ ಒಳಪಡುತ್ತದೆ. ಈ ಹಿನ್ನೆಲೆ ಈ ವಿಚಾರದಲ್ಲಿ ಅವರ ಸ್ವಾರ್ಥ ಅಡಗಿದೆ ಅನಿಸುತ್ತದೆ. ಬಲತ್ಕಾರದಿಂದ ರೈತರ ಮೇಲೆ ಸವಾರಿ ಮಾಡುವುದು ಸರಿಯಲ್ಲ. ಒಬ್ಬ ನಿಸ್ವಾರ್ಥ ಸಿಎಂ ಆಗಬೇಕಾದರೆ ಅವರು ಇದರ ಬಗ್ಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು ಎಂದರು.
ಕುಮಾರ ಕೃಪಾ ಕಟ್ಟಡ ಧ್ವಂಸದ ಕುರಿತು ಮಾತನಾಡಿ, ಪಾರಂಪರಿಕ ಕಟ್ಟಡ ನಮ್ಮ ವ್ಯಾಪ್ತಿಗಿಂತ ಹೊರಗಿದೆ. ಇದನ್ನ ಮಾಡುವುದರಿಂದ ನಮ್ಮ ಜಾಗತಿಕ ದಾಖಲೆಗಳ ಮೇಲೆ ಸವಾರಿ ಮಾಡಿದ ಹಾಗೇ ಆಗುತ್ತೆ. ಡಿಕೆ ಶಿವಕುಮಾರ್ ಎಷ್ಟು ದಿನ ಸಿಎಂ ಆಗಿರುತ್ತಾರೆ? ಇವರು ಪಾರಂಪರಿಕ ಕಟ್ಟಡ ಧ್ವಂಸಗೊಳಿಸಲು ಹೊರಟಿರುವುದನ್ನು ನೋಡಿದರೆ ಇಂದಿರಾ ಗಾಂಧಿಯವರ ಸರ್ವಾಧಿಕಾರದಿಂದ ಪಡೆದಕೊಂಡ ಬಳುವಳಿ ಅನಿಸುತ್ತೆ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಮಾಜಿ ಸಚಿವ ಬಿ.ಸಿ ಪಾಟೀಲ್, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಗದಗ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
