ಬೆಂಗಳೂರು: ಸಮಗ್ರ ಶಿಕ್ಷಣ ಕರ್ನಾಟಕ (SSK) ಹಾಗೂ ಡಬ್ಲ್ಯೂಡಬ್ಲ್ಯೂಎಫ್ (WWF) ಇಂಡಿಯಾ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಮಿಷನ್ ಪ್ರಕೃತಿ: ತರಗತಿಯಿಂದ ಸಂರಕ್ಷಣೆಯತ್ತ’ (Mission Prakriti: From Classrooms to Conservation – Leading The Change) ಕಾರ್ಯಕ್ರಮದಲ್ಲಿ ರಾಜ್ಯದ 10 ಅತ್ಯುತ್ತಮ ಶಾಲೆಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್, WWF ಇಂಡಿಯಾದ ಸಿಇಒ ಕರಣ್ ಭಲ್ಲಾ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಓದಬಾರದು. ವಿಷಯವನ್ನ ಆಳವಾಗಿ ಅರ್ಥೈಸಿಕೊಳ್ಳುವುದರ ಕಡೆಗೆ ಗಮನ ಹರಿಸಬೇಕು. ಅರಿವು ಮೂಡಿದರೆ ಫಲಿತಾಂಶ ತಾನಾಗಿಯೇ ಉತ್ತಮವಾಗುತ್ತದೆ ಎಂದರು. ಜೊತೆಗೆ ತ್ಯಾಜ್ಯ ನಿರ್ವಹಣೆ ಕುರಿತು ಜಪಾನ್‌ನ ಉದಾಹರಣೆ ನೀಡುತ್ತಾ, ʻಅಲ್ಲಿ ಕಸದ ಬುಟ್ಟಿಗಳು ಕಡಿಮೆ ಇದ್ದರೂ ಜನರು ತಮ್ಮ ಕಸವನ್ನು ತಾವೇ ಮನೆಗೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡುತ್ತಾರೆ. ಅಂತಹ ಶಿಸ್ತು ನಮ್ಮಲ್ಲಿ ಬರಬೇಕು ಎಂದು ಕಿವಿಮಾತು ಹೇಳಿದ್ರು.

ಮುಂದಿನ ವರ್ಷದಿಂದ 1 ರಿಂದ 10ನೇ ತರಗತಿಯವರೆಗೆ ‘ನೈತಿಕ ವಿಜ್ಞಾನ’ (Moral Science) ಪಠ್ಯಪುಸ್ತಕ ಪರಿಚಯಿಸಲಾಗುವುದು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಶಿಕ್ಷಣದ ಮೊದಲ ಮೆಟ್ಟಿಲು ಎಂದು ಅವರು ಪ್ರತಿಪಾದಿಸಿದರು. ಜೊತೆಗೆ ಪ್ರಶಸ್ತಿ ವಿಜೇತ ಶಾಲೆಗಳಿಗೆ ಅಭಿನಂದನೆ ಸಲ್ಲಿಸುತ್ತಾ, ಇಲ್ಲಿ ಕಲಿತ ವಿಷಯಗಳನ್ನು ಇತರ ವಿದ್ಯಾರ್ಥಿಗಳಿಗೂ ಹಂಚಿಕೊಳ್ಳುವಂತೆ ಸಚಿವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ನಾಗಭೂಷಣ್ ಮತ್ತು ರೆಹಮಾನ್ ಬಿ ಅವರು ಮಿಷನ್ ಪ್ರಕೃತಿಯಲ್ಲಿನ ತಮ್ಮ ಅನುಭವಗಳನ್ನ ಹಂಚಿಕೊಂಡರು. ವನ್ಯಜೀವಿಗಳ ರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಈ ಅಭಿಯಾನವು ತಮಗೆ ಹೇಗೆ ಕಲಿಸಿಕೊಟ್ಟಿತು ಎಂಬುದನ್ನು ವಿವರಿಸಿದರು.

ಪ್ರಶಸ್ತಿ ವಿಜೇತ 10 ಶಾಲೆಗಳು:
ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭ್ಯಾಸಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಈ ಕೆಳಗಿನ ಶಾಲೆಗಳನ್ನು ಗೌರವಿಸಲಾಯಿತು
* ಜಿ.ಎಂ.ಪಿ.ಎಚ್.ಎಸ್, ಎಮ್ಮಿಗನೂರು, ಬಳ್ಳಾರಿ.
* ಜಿ.ಕೆ.ಎಚ್.ಪಿ.ಎಸ್, ಕಾತ್ರಾಳ, ಕಾಗವಾಡ, ಬೆಳಗಾವಿ.
* ಜಿ.ಎಚ್.ಎಸ್, ಅಲಿಪುರ, ಚಿಕ್ಕಬಳ್ಳಾಪುರ.
* ಜಿ.ಎಚ್.ಪಿ.ಎಸ್, ಹಿರೇಗೋಣಿಗೆರೆ, ದಾವಣಗೆರೆ.
* ಜಿ.ಎಚ್.ಪಿ.ಎಸ್, ಜೋಡಳ್ಳಿ, ಕಲಘಟಗಿ.
* ಕೆ.ಪಿ.ಎಸ್, ಕೋಟೇಶ್ವರ, ಕುಂದಾಪುರ, ಉಡುಪಿ.
* ಡಿ.ಕೆ.ಜೆಡ್.ಪಿ, ಅಳಿಯೂರು, ದಕ್ಷಿಣ ಕನ್ನಡ.
* ಕೆ.ಎಸ್.ಎಸ್ ಜಿ.ಎಚ್.ಎಸ್, ಹಕ್ಲಾಡಿ, ಬೈಂದೂರು, ಉಡುಪಿ.
* ಕೆ.ಜಿ.ಬಿ.ವಿ, ಯಳಂದೂರು, ಚಾಮರಾಜನಗರ.
* ಜಿ.ಎಚ್.ಪಿ.ಎಸ್, ಮಲ್ಲೂರು, ಉಡುಪಿ.

