ಟೆಲ್ ಅವಿವ್: ದುಬೈನಿಂದ(Dubai) ಇಸ್ರೇಲ್ನ ಟೆಲ್ ಅವಿವ್ಗೆ ಹೊರಟಿದ್ದ ಫ್ಲೈದುಬೈ (Flydubai) ವಿಮಾನದಲ್ಲಿ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ವಿಮಾನ ಅಪಹರಣಕ್ಕೊಳಗಾಗಿ ಟೆಲ್ ಅವಿವ್ ನಗರದತ್ತ ಮುನ್ನುಗ್ಗಿದ್ದರೆ ಅದನ್ನು ಹೊಡೆದುರುಳಿಸಲು (Shoot Down) ಇಸ್ರೇಲ್ ತನ್ನ ವಾಯುಪಡೆ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಸೆಪ್ಟೆಂಬರ್ 30ರಂದು ವಿಮಾನ ಹಾರಾಟದಲ್ಲಿದ್ದಾಗಲೇ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ, ಮುಖ್ಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಕ್ರಾಶ್ ಕೊಡಲಿಯಿಂದ (Crash Axe) ಹಠಾತ್ ದಾಳಿ ನಡೆಸಿ ವಿಮಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದ. ಈ ವೇಳೆ ವಿಮಾನ ಕೇವಲ 30 ಸೆಕೆಂಡ್ಗಳಲ್ಲಿ ಬರೋಬ್ಬರಿ 16,000 ಅಡಿಗಳಷ್ಟು ಆಳಕ್ಕೆ ಕುಸಿದಿತ್ತು.
ವಿಮಾನ ದಿಢೀರನೆ ಕುಸಿದ ಬೆನ್ನಲ್ಲೇ ಇಸ್ರೇಲ್ನಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು. ಇದು 9/11 ಮಾದರಿಯ ಆತ್ಮಾಹುತಿ ಅಥವಾ ಹೈಜಾಕ್ ದಾಳಿ ಇರಬಹುದೆಂದು ಶಂಕಿಸಿದ ಇಸ್ರೇಲ್(Isreal) ವಾಯುಪಡೆ ಕಾಕ್ಪಿಟ್ ಜೊತೆ ಸಂಪರ್ಕ ಸಾಧಿಸಲು ಯತ್ನಿಸಿತು. ಆದರೆ ಕಾಕ್ಪಿಟ್ನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತುರ್ತು ಕಾರ್ಯವಿಧಾನಗಳನ್ನು ಚುರುಕುಗೊಳಿಸಿ ಕಮಾಂಡ್ ಸೆಂಟರ್ ಸ್ಥಾಪಿಸಲಾಯಿತು. ಜೊತೆಗೆ ಇಸ್ರೇಲ್ ವಾಯುಪ್ರದೇಶವನ್ನು ಸಂಪೂರ್ಣ ಬಂದ್ ಮಾಡಿ ಫೈಟರ್ ಜೆಟ್ಗಳನ್ನು ರವಾನಿಸಲಾಯಿತು. ಅತ್ತ ಸೌದಿ ಅರೇಬಿಯಾ ಕೂಡ ತನ್ನ ಯುದ್ಧ ವಿಮಾನಗಳನ್ನು ಗಗನಕ್ಕೆ ಹಾರಿಸಿತು. ಇದನ್ನೂ ಓದಿ: 9/11 ಮಾದರಿ ದಾಳಿಗೆ ಜುಲೈನಲ್ಲೇ ಸ್ಕೆಚ್ – ಕೊನೆ ಕ್ಷಣದಲ್ಲಿ ಬದಲಾಯ್ತು ಪ್ಲ್ಯಾನ್!

ವಿಮಾನವೇನಾದರೂ ಟೆಲ್ ಅವಿವ್ ಕಡೆಗೆ ಮುಂದುವರಿದಿದ್ದರೆ, ಇಸ್ರೇಲ್ ಫೈಟರ್ ಜೆಟ್ ಪೈಲಟ್ಗಳು ಕಾಕ್ಪಿಟ್ ಹತ್ತಿರಕ್ಕೆ ತೆರಳಿ ಪರಿಶೀಲಿಸಲು ಸಿದ್ಧರಾಗಿದ್ದರು. ಒಂದು ವೇಳೆ ವಿಮಾನ ಅಪಹರಣಗೊಂಡಿರುವುದು ದೃಢಪಟ್ಟಿದ್ದರೆ ರಕ್ಷಣಾ ಸಚಿವರು ಹಾಗೂ ಪ್ರಧಾನಮಂತ್ರಿಯವರ ಮಟ್ಟಕ್ಕೆ ವಿಚಾರವನ್ನು ತಲುಪಿಸಲಾಗುತ್ತಿತ್ತು. ಬೆನ್ ಗುರಿಯನ್ ವಿಮಾನ ನಿಲ್ದಾಣ ಅಥವಾ ಅಜ್ರಿಯೇಲಿ ಸೆಂಟರ್ನಂತಹ ಸೂಕ್ಷ್ಮ ಪ್ರದೇಶಗಳ ಮೇಲೆ ದಾಳಿ ನಡೆಯುವುದನ್ನು ತಡೆಯಲು ವಿಮಾನವನ್ನು ಟೆಲ್ ಅವಿವ್ ತಲುಪುವ ಮುನ್ನವೇ ಹೊಡೆದುರುಳಿಸುವ ಅಂತಿಮ ಅಧಿಕಾರ ಪ್ರಧಾನಮಂತ್ರಿಯವರ ಬಳಿ ಇತ್ತು.
ತೀವ್ರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಹೇಗೋ ಕಷ್ಟಪಟ್ಟು ಕಾಕ್ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ತಕ್ಷಣ ಎಚ್ಚೆತ್ತ ಪ್ರಯಾಣಿಕರು ಕಾಕ್ಪಿಟ್ಗೆ ನುಗ್ಗಿ ದುಷ್ಕರ್ಮಿ ಅಲ್-ಹಮ್ಮಾಮಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಅದೇ ವಿಮಾನದಲ್ಲಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್ಗಳು ತಕ್ಷಣ ನಿಯಂತ್ರಣ ವಹಿಸಿಕೊಂಡು ವಿಮಾನದ ಮಾರ್ಗವನ್ನು ಸೌದಿ ಅರೇಬಿಯಾದ ತಬುಕ್ ನಗರದತ್ತ ಬದಲಾಯಿಸಿ ತುರ್ತು ಭೂಸ್ಪರ್ಶ ಮಾಡಿದರು. ಇದನ್ನೂ ಓದಿ: Flydubai Flight Case | ಉಗ್ರ ಬಿನ್ಲಾಡೆನ್ ಆರಾಧಕನಾಗಿದ್ದ ಹಾಮಾಮ್ – ವಿಚಾರಣೆ ವೇಳೆ ರಹಸ್ಯ ಬಯಲು

