ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಯಶಸ್ವಿ ನಾಯಕಿ(Captain) ಹಾಗೂ ಅನುಭವಿ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್(Harmanpreet Kaur) ತಮ್ಮ ನಾಯಕತ್ವದ ಹುದ್ದೆಗೆ ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ. ಇಂದು(ಅ.6) ಅಧಿಕೃತವಾಗಿ ಈ ನಿರ್ಧಾರ ಪ್ರಕಟಿಸಿರುವ ಅವರು, ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಯುತ್ತಿರುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ನಡೆದ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತ ತಂಡಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟಿದ್ದ ಹರ್ಮನ್‌ಪ್ರೀತ್, ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ನಾಯಕತ್ವ ತ್ಯಜಿಸುವ ನಿರ್ಧಾರ ಕೈಗೊಂಡಿರುವುದು ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಭಾರತೀಯ ಮಹಿಳಾ ಕ್ರಿಕೆಟ್‌ಗೆ ಐಸಿಸಿ ವಿಶ್ವಕಪ್ ಟ್ರೋಫಿ ತಂದುಕೊಟ್ಟ ಹೆಗ್ಗಳಿಕೆ ಹೊಂದಿರುವ ಹರ್ಮನ್‌ಪ್ರೀತ್, ತಮ್ಮ ಆಕ್ರಮಣಕಾರಿ ನಾಯಕತ್ವ ಮತ್ತು ನಿರ್ಣಾಯಕ ಇನ್ನಿಂಗ್ಸ್‌ಗಳಿಂದ ತಂಡಕ್ಕೆ ಹಲವು ಅವಿಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ನಾಯಕತ್ವದಿಂದ ಕೆಳಗಿಳಿದಿದ್ದರೂ ಅವರು ಓರ್ವ ಹಿರಿಯ ಆಟಗಾರ್ತಿಯಾಗಿ ಮತ್ತು ಬ್ಯಾಟರ್ ಆಗಿ ಭಾರತ ತಂಡದಲ್ಲಿ ಮುಂದುವರಿಯಲಿದ್ದಾರೆ.
ಹರ್ಮನ್‌ಪ್ರೀತ್ ಅವರ ಈ ದಿಢೀರ್ ನಿರ್ಧಾರದಿಂದ ತೆರವಾಗಿರುವ ನಾಯಕತ್ವದ ಪಟ್ಟಕ್ಕೆ ಮುಂದಿನ ಸಾರಥಿ ಯಾರು ಎಂಬ ಕುತೂಹಲ ಅಭಿಮಾನಿಗಳು ಹಾಗೂ ಬಿಸಿಸಿಐ ವಲಯದಲ್ಲಿ ಶುರುವಾಗಿದೆ.

